ಕಾರ್ಮಿಕ ಇಲಾಖೆಯ 101 ಲ್ಯಾಪ್‌ಟಾಪ್‌ ಕಳ್ಳತನ, 26 ಜನರ ಬಂಧನ

KannadaprabhaNewsNetwork |  
Published : Sep 29, 2024, 01:34 AM IST
ಕಾರ್ಮಿಕ ಇಲಾಖೆಯಲ್ಲಿ ಕಳ್ಳತನವಾಗಿದ್ದ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು. | Kannada Prabha

ಸಾರಾಂಶ

ಕಾರ್ಮಿಕ ಇಲಾಖೆ ಅಡಿ ಹಾವೇರಿ ಜಿಲ್ಲೆಯ ಕಾರ್ಮಿಕ ಮಕ್ಕಳಿಗೆ ನೀಡುವ ಸಲುವಾಗಿ ಬೆಳಗಾವಿಯಿಂದ ಲ್ಯಾಪ್‌ಟಾಪ್‌ ತಂದು ಹಳೇ ಹುಬ್ಬಳ್ಳಿ ಭಾಗದಲ್ಲಿರುವ ಕಾರ್ಮಿಕ ಇಲಾಖೆಯ ಕೊಠಡಿಯೊಂದರಲ್ಲಿ ಇಡಲಾಗಿತ್ತು. ಸೆಪ್ಟಂಬರ್‌ನಲ್ಲಿ ಪರಿಶೀಲನೆ ನಡೆಸಿದ ವೇಳೆ 101 ಲ್ಯಾಪ್‌ಟಾಪ್‌ ಕಳ್ಳತನ ಆಗಿರುವ ಕುರಿತು ಇಲಾಖೆಯ ಸಹಾಯಕ ಆಯುಕ್ತರು ಸೆ. 6ರಂದು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಹುಬ್ಬಳ್ಳಿ:

ಇಲ್ಲಿನ ಕಾರ್ಮಿಕ ಇಲಾಖೆಯಲ್ಲಿ 101 ಲ್ಯಾಪ್‌ಟಾಪ್‌ ಕಳ್ಳತನವಾಗಿರುವ ಪ್ರಕರಣವನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು 22 ದಿನದಲ್ಲಿ ಭೇದಿಸಿದ್ದಾರೆ. ಇಲಾಖೆಯ 6 ಸಿಬ್ಬಂದಿ ಸೇರಿದಂತೆ 26 ಜನರನ್ನು ಬಂಧಿಸಿದ್ದು ಅವರಿಂದ 83 ಲ್ಯಾಪ್‌ಟಾಪ್‌, 1 ಕಾರು, 2 ಆಟೋ, 2 ಬೈಕ್‌ ಸೇರಿದಂತೆ ₹ 60 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಶನಿವಾರ ಮಾಹಿತಿ ನೀಡಿದ ಕಮೀಷನರ್‌ ಎನ್‌. ಶಶಿಕುಮಾರ, ಕಾರ್ಮಿಕ ಇಲಾಖೆ ಅಡಿ ಹಾವೇರಿ ಜಿಲ್ಲೆಯ ಕಾರ್ಮಿಕ ಮಕ್ಕಳಿಗೆ ನೀಡುವ ಸಲುವಾಗಿ ಬೆಳಗಾವಿಯಿಂದ ಲ್ಯಾಪ್‌ಟಾಪ್‌ ತಂದು ಹಳೇ ಹುಬ್ಬಳ್ಳಿ ಭಾಗದಲ್ಲಿರುವ ಕಾರ್ಮಿಕ ಇಲಾಖೆಯ ಕೊಠಡಿಯೊಂದರಲ್ಲಿ ಇಡಲಾಗಿತ್ತು. ಸೆಪ್ಟಂಬರ್‌ನಲ್ಲಿ ಪರಿಶೀಲನೆ ನಡೆಸಿದ ವೇಳೆ 101 ಲ್ಯಾಪ್‌ಟಾಪ್‌ ಕಳ್ಳತನ ಆಗಿರುವ ಕುರಿತು ಇಲಾಖೆಯ ಸಹಾಯಕ ಆಯುಕ್ತರು ಸೆ. 6ರಂದು ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಸುರೇಶ ಹಳ್ಳೂರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ತನಿಖೆ ನಡೆಸಿದ ತಂಡವು ಇಲಾಖೆಯಲ್ಲಿಯೇ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ದೀಪಕ ನಾಯಕ ಹಾಗೂ ಕೃಷ್ಣಾ ಕಬ್ಬೇರ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದು ತಿಳಿದು ಬಂದಿದೆ ಎಂದರು.

ಇವರೊಂದಿಗೆ ಗುತ್ತಿಗೆ ನೌಕರರಾದ ಸುಭಾಷ ಕುರಡಿಕೇರಿ, ಶ್ರೀನಿವಾಸ ಕವಡೇನವರ, ಎಸ್‌ಡಿಎ ನಾಗರಾಜ ಸರ್ವಿ, ದರ್ಶನ ಲಗಟಗೇರಿ ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ ಕಳ್ಳತನ ಮಾಡಲು ಹಾಗೂ ಕಳ್ಳತನ ಮಾಡಿದ್ದ ಲ್ಯಾಪ್‌ಟಾಪ್‌ ಮಾರಾಟ ಮಾಡಲು ಸಹಕರಿಸಿದ್ದ ಮಹಿಳೆ ಸೇರಿದಂತೆ 20 ಜನ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಒಟ್ಟು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ₹ 45 ಲಕ್ಷ ಮೌಲ್ಯದ 83 ಲ್ಯಾಪ್‌ಟಾಪ್‌, ಕೃತ್ಯಕ್ಕೆ ಬಳಸಿದ 1 ಕಾರ್, 2 ಆಟೋ, 2 ಬೈಕ್‌ ಸೇರಿದಂತೆ ಒಟ್ಟು ₹ 60 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ ಎಂದು ಶಶಿಕುಮಾರ ಹೇಳಿದರು.

ಹಂತ-ಹಂತವಾಗಿ ಕಳ್ಳತನ:

ಈ ಎಲ್ಲ ಲ್ಯಾಪ್‌ಟಾಪ್‌ಗಳನ್ನು ಕಳೆದ 6 ತಿಂಗಳಿಂದ ಹಂತ-ಹಂತವಾಗಿ ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಮೊದಲು ದೀಪಕ ನಾಯಕ ಹಾಗೂ ಕೃಷ್ಣಾ ಕಬ್ಬೇರ ಸಂಗ್ರಹಿಡಲಾಗಿದ್ದ ಕೋಣೆಯ ಕಿಟಕಿಯಿಂದ ಇಳಿದು ಮೊದಲಿಗೆ 4 ಲ್ಯಾಪ್‌ಟಾಪ್‌ ಕದ್ದು ಇಲಾಖೆಯಿಂದ ಮಾರಾಟ ಮಾಡಲು ಹೇಳಿದ್ದಾರೆ ಎಂದು ಲ್ಯಾಪ್‌ಟಾಪ್‌ ಮಾರಾಟ ಮಾಡಿದ್ದಾರೆ. ಹೀಗೆ ಹಂತ-ಹಂತವಾಗಿ 101 ಲ್ಯಾಪ್‌ಟಾಪ್‌ ಕಳ್ಳತನ ಮಾಡಿ ಮಾರಾಟ ಮಾಡಿದ್ದಾರೆ. ಇವರಿಗೆ ಪ್ರೇರಣೆ ನೀಡಿದ 16 ಜನರನ್ನು ಈ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದೆ. ಇನ್ನೂ ಹಲವರು ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಆದಷ್ಟು ಬೇಗನೆ ಮತ್ತಷ್ಟು ವಿಚಾರಣೆಗೊಳಪಡಿಸಿ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದರೆ ಅವರನ್ನೂ ಬಂಧಿಸುವುದಾಗಿ ಕಮಿಷನರ್‌ ತಿಳಿಸಿದರು.

ಈ ವೇಳೆ ಪ್ರಕರಣ ಭೇದಿಸಿದ ಇನ್‌ಸ್ಪೆಕ್ಟರ್‌ ಹಾಗೂ ಠಾಣೆಯ ಸಿಬ್ಬಂದಿ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಡಿಸಿಪಿ ಮಹಾನಿಂಗ ನಂದಗಾವಿ, ರವೀಶ ಸೇರಿದಂತೆ ಹಲವರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ