ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ ನಡೆಯಲಿರುವ ಸುತ್ತೂರು ಮಠದ ಶಿವರಾತ್ರೀಶ್ವರ ಶಿವಯೋಗಿಗಳ 1066ರ ಜಯಂತಿ ಪೂರ್ವಭಾವಿ ಕುರಿತ ಸಭೆಯ ಸಾನಿಧ್ಯವಹಿಸಿ ಮಾತನಾಡಿ, ಕೊನೆಯುಸಿರುವವರೆಗೂ ಶಾಶ್ವತವಾಗಿ ನೆನಪು ಉಳಿಯುವಂತಹ ಜಯಂತಿ ತಾಲೂಕಿನಲ್ಲಿ ನಡೆಯಲಿ. ಜಯಂತಿಯಲ್ಲಿ ಉಳಿದ ಹಣದ ಜೊತೆಗೆ ಮಠದ ಅನುದಾನದಲ್ಲಿ ತಾಲೂಕಿನ ಐತಿಹಾಸಿಕ ಸ್ಥಳವೊಂದನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಜಯಂತಿ ಯಶಸ್ವಿಗೆ ಪ್ರತಿಯೊಬ್ಬರ ಸಲಹೆ ಸಹಕಾರ ಅತೀ ಮುಖ್ಯ. ಜವಾಬ್ದಾರಿಯನ್ನು ಹಂಚಲು ಹಲವು ತಂಡಗಳ ಒಳಗೊಂಡಂತೆ ಸಮಿತಿ ರಚನೆ ಮಾಡಲಾಗುವುದು. ಸಮಿತಿಯಲ್ಲಿ ಸೇರಿಸಿಲ್ಲ ಎಂಬ ಕಾರಣಕ್ಕೆ ಬೇಸರ ಮಾಡಿಕೊಳ್ಳಬಾರದು. ಎಲ್ಲರೂ ಶ್ರೀಮಠದ ಭಕ್ತರೆಂದು ತಿಳಿದು ಯಶಸ್ವಿಗೆ ಕೈಜೋಡಿಸಬೇಕೆಂದು ಹೇಳಿದರು.ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಎಲ್ಲರ ಒಗ್ಗೂಡುವಿಕೆ ಹಾಗೂ ಸಹಕಾರದೊಂದಿಗೆ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿಯನ್ನು ಶ್ರೀಗಳ ಆರ್ಶೀವಾದ ಪಡೆಯುವ ಅವಕಾಶ ತಾಲೂಕಿಗೆ ಸಿಕ್ಕಿರುವುದು ಸೌಭಾಗ್ಯ. ಸರ್ವಧರ್ಮದವರನ್ನು ಸಮಾನಾಗಿ ಕಾಣುವ ಸುತ್ತೂರು ಮಠ ಹಲವು ಸೇವೆಗಳನ್ನು ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಿದೆ ಎಂದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, 2ನೇ ಬಾರಿಗೆ ಜಿಲ್ಲೆಯಲ್ಲಿ ಜಯಂತ್ಯುತ್ಸವ ಆಚರಣೆ ಭಾಗ್ಯ ಸಿಕ್ಕಿದೆ. ಎಲ್ಲರ ಸಹಕಾರ ಮತ್ತು ಶ್ರಮದಿಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ರಾಜಕೀಯ ಬಂದಾಗ ಮಾಡೋಣ. ನರೇಂದ್ರಸ್ವಾಮಿ ನಾನು ಆತ್ಮೀಯರು. ಆದರೆ, ಪಕ್ಷ ಅಂದಾಗ ಬೇರೆ ಎಂದರು.
ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಮಹದೇಶ್ವರ, ಮಂಟೇಸ್ವಾಮಿ, ಸಿದ್ದಪ್ಪಾಜಿ ಅವರು ಸ್ಪರ್ಶ ಮಾಡಿದ ಐತಿಹಾಸಿಕ ಸ್ಥಳ ಮಳವಳ್ಳಿಯಲ್ಲಿ ಶಿವರಾತ್ರೀಶ್ವರ ಶಿವಯೋಗಿಗಳ 1066ರ ಜಯಂತಿ ಆಚರಿಸುತ್ತಿರುವುದು ಇಲ್ಲಿನ ಜನರ ಪುಣ್ಯವಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಮಾತನಾಡಿ, ತಾಲೂಕಿನಲ್ಲಿ ಸುತ್ತೂರು ಸಂಸ್ಥಾನದಲ್ಲಿ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿರುವ ಜಯಂತಿಗೆ ಎಲ್ಲಾ ಜನರ ನೆರವು ಅತ್ಯಗತ್ಯ. ಜಾತ್ರಾ ಮಹೋತ್ಸವದಿಂದ ಜನರ ಬದುಕಿನಲ್ಲಿ ಹೊಸ ಬೆಳಕನ್ನು ಕಾಣಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನಕಪುರದ ದೇಗುಲ ಮಠದ ಕಿರಿಯ ಚನ್ನಬಸವ ಸ್ವಾಮೀಜಿ ಮಾತನಾಡಿ, ಮಳವಳ್ಳಿಯಲ್ಲಿ ನಡೆಯುವ ಶ್ರೀಗಳ ಜಯಂತಿ ನಾಡಿನಲ್ಲಿ ಮಾದರಿಯಂತಿರಬೇಕು. 4 ರಿಂದ 5 ಕೋಟಿಯಷ್ಟು ಸಂಪನ್ಮೂಲ ಸಂಗ್ರಹವಾಗಬೇಕು. ಅದರ ಜೊತೆಗೆ ತನ, ಮನ, ಧನವನ್ನು ನೀಡಿ ಸಹಕಾರ ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಬೌದ್ಧಬಿಕ್ಕು ಕಲ್ಯಾಣ ಬಂತೇಜಿ, ಗೌರಿ ಶಂಕರ ಸ್ವಾಮೀಜಿ, ಬಿಜೆಪಿ ಮುಖಂಡ ಜಿ.ಮುನಿರಾಜು, ಮನ್ಮುಲ್ ನಿರ್ದೇಶಕ ಡಿ.ಕೃಷ್ಣೇಗೌಡ, ಆರ್.ಎನ್. ವಿಶ್ವಾಸ್, ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ, ಸದಸ್ಯ ಟಿ.ನಂದಕುಮಾರ್, ಮುಖಂಡರಾದ ಯಮದೂರು ಸಿದ್ದರಾಜು, ಬಿ.ರವಿ ಕಂಸಾಗರ, ವಿ.ಪಿ.ನಾಗೇಶ್, ಜಯರಾಮು, ಎಂ.ಎನ್.ಕೃಷ್ಣ, ಚಿಕ್ಕಲಿಂಗಯ್ಯ, ಟಿ.ಸಿ.ಚೌಡಯ್ಯ, ಕೆ.ಜೆ.ದೇವರಾಜು, ಬಿ.ಎಸ್.ರಾಮಚಂದ್ರು, ಸಿದ್ದೇಗೌಡ, ಅಶೋಕ್ ಕುಮಾರ್, ಸಚ್ಚಿದಾನಂದ ಸೇರಿದಂತೆ ವಿವಿಧ ಧಾರ್ಮಿಕ ಮುಖಂಡರು ಇದ್ದರು.