- ಸಮಿತಿ ಅಧ್ಯಕ್ಷರಾಗಿ ಬೆಳ್ಳೂರು ಆರ್ ವೆಂಕಟರಮಣಯ್ಯ ಆಯ್ಕೆ। ಬೆಳ್ಳೂರಿನಲ್ಲಿ ಕಸಾಪ ಪೂರ್ವಭಾವಿ ಸಭೆ
ಬೆಳ್ಳೂರು ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಬುಧವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹರಿಹರಪುರ ಅ.ರ.ಸ ಪದವಿಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಹಾಗೂ ನಿವೃತ್ತ ಪ್ರಾಚಾರ್ಯ ಬೆಮ್ಮನೆ ದಯಾನಂದ್ ಅವರನ್ನು ಆಯ್ಕೆ ಮಾಡಲಾಯಿತು.
ಫೆ.21 ಹಾಗೂ 22 ರಂದು ಬೆಳ್ಳೂರಿನಲ್ಲಿ ನಡೆಯುವ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಸಭೆಗೆ ಮಹಾ ಪೋಷಕರಾಗಿ ಚಿಕ್ಕಮಗಳೂರು -ಉಡುಪಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಸ್ವಾಗತ ಸಮಿತಿ ಗೌರವಾಧ್ಯಕ್ಷ ಶಾಸಕ ಟಿ.ಡಿ. ರಾಜೇಗೌಡ, ಸ್ವಾಗತ ಸಮಿತಿ ಅಧ್ಯಕ್ಷ ಬೆಳ್ಳೂರು ಆರ್ .ವೆಂಕಟರಮಣಯ್ಯ, ಪ್ರಧಾನ ಕಾರ್ಯದರ್ಶಿ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲದೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಯಿತು.ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಎಸ್.ಎಸ್.ಸಂತೋಷಕುಮಾರ್ ಪ್ರಾಸ್ತಾವಿಕ ವಾಗಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು ಎಂಬ ಉದ್ದೇಶದಿಂದ ಬೆಳ್ಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿದೆ. ಇಂದು ಸಮ್ಮೇಳನ ಅಧ್ಯಕ್ಷರ ಆಯ್ಕೆ, ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ರಚನೆ, ಯಾವ, ಯಾವ ವಿಷಯದಲ್ಲಿ ಗೋಷ್ಠಿಗಳನ್ನು ನಡೆಸಬೇಕು. ಗೋಷ್ಠಿಗಳಿಗೆ ಉಪನ್ಯಾಸ ನೀಡಲು ಯಾರನ್ನು ಕರೆಯಬೇಕು ಎಂಬ ಬಗ್ಗೆ ತೀರ್ಮಾನವಾಗಬೇಕಾಗಿದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ತೀರ್ಮಾನದಂತೆ ಸ್ಥಳೀಯರು ಹಾಗೂ ಕನ್ನಡಕ್ಕಾಗಿ ಅತಿ ಹೆಚ್ಚು ಕೆಲಸ ಮಾಡಿದ ಬೆಮ್ಮನೆ ದಯಾನಂದ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಗ್ರಾಮಸ್ಥರು, ಸಂಘ ಸಂಸ್ಥೆಗಳ ಸಹಕಾರ ಬೇಕಾಗಿದೆ ಎಂದರು.ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನ ಅಧ್ಯಕ್ಷರ ಆಯ್ಕೆ ನಂತರ ಸಮ್ಮೇಳನಾಧ್ಯಕ್ಷರನ್ನು ಆಹ್ವಾನಿಸಬೇಕಿದೆ. ಎಲ್ಲಾ ಅಜೀವ ಸದಸ್ಯರಿಗೆ ಆಹ್ವಾನ ಪತ್ರ ತಲುಪಿಸಬೇಕು. ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ರಚನೆಯಾಗಬೇಕಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಬೆಮ್ಮನೆ ದಯಾನಂದ್ ಮಾತನಾಡಿ, ನಾನು 15 ವರ್ಷ ಹರಿಹರಪುರ ಅ.ರ.ಸ. ಪದವಿಪೂರ್ವ ಕಾಲೇಜಿಜು ಹಾಗೂ 10 ವರ್ಷ ಕೋಲಾರದಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ. ಕೊಪ್ಪ ತಾಲೂಕು ಹಾಗೂ ಎನ್.ಆರ್.ಪುರ ತಾಲೂಕು ಕಸಾಪ ದ ಜೊತೆ ನಿಕಟ ಸಂಪರ್ಕ ಹೊಂದಿದ್ದೇನೆ ಎಂದರು. ಕಸಾಪ ಪೂರ್ವಾಧ್ಯಕ್ಷ ಪಿ.ಕೆ.ಬಸವರಾಜ್ ಮಾತನಾಡಿದರು.ಸಭೆಯಲ್ಲಿ ಕಸಾಪ ಜಿಲ್ಲಾ ಸಾಂಸೃತಿಕ ರಾಯಬಾರಿ ಕಣಿವೆ ವಿನಯ, ಸೀನಿಯರ್ ಚೇಂಬರ್ ಅಧ್ಯಕ್ಷ ಎಸ್.ಎಸ್.ಜಗದೀಶ್, ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಧ.ಗ್ರಾ.ಯೋಜನೆ ಕೊಪ್ಪ ಯೋಜನಾಧಿಕಾರಿ ರಾಜೇಶ್, ಮುಖಂಡರಾದ ಈಶ್ವರನಾಯಕ್, ಎನ್.ಪಿ.ರಮೇಶ್, ಎಚ್.ಇ.ದಿವಾಕರ, ಪ್ರಶಾಂತಶೆಟ್ಟಿ, ಸುನೀಲ್ ಕುಮಾರ್,ಶ್ರೀ ಹರ್ಷ, ಪ್ರೇಮ ಶ್ರೀನಿವಾಸ್, ಜಯಶ್ರೀ ಮೋಹನ್, ಸಾಹಿತಿ ಜಯಮ್ಮ, ವಾಣಿ ನರೇಂದ್ರ, ಮಧುಕರ, ಎನ್.ಪಿ.ರವಿ, ಎಚ್.ಇ.ಮಹೇಶ, ಬಿ.ಎಸ್. ಮಂಜುನಾಥ ಶಾಲಾ ಮುಖ್ಯೋಪಾಧ್ಯಾಯಿನಿ ಸುಧಾ,ಕೊನೋಡಿ ಗಣೇಶ್ ಮತ್ತಿತರರು ಭಾಗವಹಿಸಿ ಸಲಹೆ ನೀಡಿದರು.