ಜ್ಞಾನದೊಂದಿಗೆ ಸಮಾಜದ ಮುಖ್ಯವಾಹಿನಿಗೆ ಬನ್ನಿ: ಡಾ.ಎಸ್.ಬಿ.ಶಂಕರೇಗೌಡ

KannadaprabhaNewsNetwork |  
Published : Jan 22, 2026, 01:45 AM IST
೨೧ಕೆಎಂಎನ್‌ಡಿ-೩ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ‌್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. | Kannada Prabha

ಸಾರಾಂಶ

ಹನ್ನೆರಡನೇ ಶತಮಾನದ ಕಾಲಘಟ್ಟದಲ್ಲಿ ಅಂಬಿಗರ ಚೌಡಯ್ಯ, ಸೂಳೆ ಸಂಕಮ್ಮ, ಒಕ್ಕಲಿಗ ಮುದ್ದಣ್ಣ, ಮಡಿವಾಳ ಮಾಚಿದೇವ ಇತರರು ಜಾತಿ ಸೂಚಕ ಅಂಶಗಳನ್ನೇ ಇಟ್ಟುಕೊಂಡು ವಚನಗಳನ್ನು ರಚನೆ ಮಾಡಿದರು. ಅಂಬಿಗರ ಚೌಡಯ್ಯ ಸಹ ನೇರ ಮತ್ತು ನಿಷ್ಠುರವಾಗಿ ವಚನಗಳನ್ನು ರಚಿಸಿದವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ಥಾಪಿತ ಜ್ಞಾನವಿಲ್ಲದೆ ಕಟ್ಟಿಕೊಂಡಿರುವ ಶೋಷಿತ ಸಮುದಾಯ ನಿಜ ಶರಣ ಅಂಬಿಗರ ಚೌಡಯ್ಯ ಅವರ ವಚನಗಳ ಮೂಲಕ ಜ್ಞಾನವನ್ನು ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದು ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ತಿಳಿಸಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪ್ರಭುತ್ವ ಮತ್ತು ಸ್ಥಾಪಿತ ಧಾರ್ಮಿಕ ಆಚರಣೆಗಳ ವಿರುದ್ಧ ಹುಟ್ಟಿಕೊಂಡ ವಚನ ಚಳವಳಿ ಇಂದಿಗೂ ಪ್ರಸ್ತುತವಾಗಿದೆ. ಸಾಮಾಜಿಕ ಸಮಸ್ಯೆಗಳಿಗೆ ವಚನಗಳ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗಬೇಕಿದೆ ಎಂದರು.

ಹನ್ನೆರಡನೇ ಶತಮಾನದ ಕಾಲಘಟ್ಟದಲ್ಲಿ ಅಂಬಿಗರ ಚೌಡಯ್ಯ, ಸೂಳೆ ಸಂಕಮ್ಮ, ಒಕ್ಕಲಿಗ ಮುದ್ದಣ್ಣ, ಮಡಿವಾಳ ಮಾಚಿದೇವ ಇತರರು ಜಾತಿ ಸೂಚಕ ಅಂಶಗಳನ್ನೇ ಇಟ್ಟುಕೊಂಡು ವಚನಗಳನ್ನು ರಚನೆ ಮಾಡಿದರು. ಅಂಬಿಗರ ಚೌಡಯ್ಯ ಸಹ ನೇರ ಮತ್ತು ನಿಷ್ಠುರವಾಗಿ ವಚನಗಳನ್ನು ರಚಿಸಿದವರು ಎಂದು ಬಣ್ಣಿಸಿದರು.

ಸಮಾರಂಭ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಮಾತನಾಡಿ, ಸಮಾಜದಲ್ಲಿನ ಮೂಢನಂಬಿಕೆ, ಮೌಢ್ಯ ಮತ್ತು ಜಾತೀಯತೆಯನ್ನು ಹೋಗಲಾಡಿಸಿ ಮಾನವೀಯತೆ ಕಡೆಗೆ ಸಮಾಜ ಸಾಗಬೇಕು ಎಂದರು.

ಅಂಬಿಗರ ಚೌಡಯ್ಯ ಮೂಢನಂಬಿಕೆಗಳು, ಜಾತಿ ವ್ಯವಸ್ಥೆ ವಿರುದ್ಧ ವಚನಗಳ ಮೂಲಕ ಸಮರ ಸಾರಿದವರು. ೨೪೭ ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಅಂಬಿಗರ ಚೌಡಯ್ಯನವರು ಜಾತಿ ವ್ಯವಸ್ಥೆ ಹೋಗಲಾಡಿಸುವ ಉದ್ದೇಶದಿಂದ ಹಲವು ಸಂದೇಶ ಮತ್ತು ವಚನಗಳನ್ನು ನೀಡಿದ್ದಾರೆ. ಅವರ ಜಯಂತಿಯನ್ನು ಶಾಲೆ ಕಾಲೇಜು ಮಟ್ಟದಲ್ಲಿ ಮಾಡಬೇಕು. ಯುವ ಜನತೆ ಅಂಬಿಗರ ಚೌಡಯ್ಯ ರವರ ನಡೆ-ನುಡಿ ಜ್ಞಾನವನ್ನು ಪರಿಪೂರ್ಣವಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತಾಲೂಕಿನ ಮರಡೀಪುರ ಗ್ರಾಮದ ಅಂಬಿಗರ ಚೌಡಯ್ಯ ಸಮುದಾಯದ ಪಿ.ಅಂಜನಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ. ನಂದೀಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಿ. ಲಿಂಗಯ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಈರಯ್ಯ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಹಾಡ್ಯ ಉಮೇಶ್, ಕನ್ನಲಿ ದೇವರಾಜು, ಜೆ. ರಾಜಶೇಖರಯ್ಯ, ಬಿ.ಎಸ್.ಅನುಪಮಾ ಇತರರಿದ್ದರು.

ಜಿಲ್ಲಾಡಳಿತದಿಂದ ಕಾಟಾಚಾರದ ಜಯಂತಿ..!

ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ‌್ಯಕ್ರಮವನ್ನು ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದ ಸಮಯದಲ್ಲೇ ಆಯೋಜನೆ ಮಾಡಿದ್ದು ಕಾಟಾಚಾರಕ್ಕಾಗಿ ನಡೆಸಿದ ಕಾರ್ಯಕ್ರಮದಂತೆ ಬಿಂಬಿತವಾಗಿತ್ತು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು ಜಿಲ್ಲೆಯ ಎಲ್ಲ ತಹಸೀಲ್ದಾರ್ ಮತ್ತು ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ಕಾರ‌್ಯಕ್ರಮ ನಡೆಸುತ್ತಿದ್ದರು. ಇದರ ನಡುವೆಯೇ ಅಂಬಿಗರ ಚೌಡಯ್ಯ ಜಯಂತಿಗೂ ಅನುವು ಮಾಡಿಕೊಟ್ಟಿದ್ದು ಹಾಸ್ಯಾಸ್ಪದವೆನಿಸಿತ್ತು. ಒಂದೆಡೆ ವೀಡಿಯೋ ಸಂವಾದವೂ ಗಂಭೀರತೆ ಪಡೆದುಕೊಳ್ಳದೆ, ಇತ್ತ ಜಯಂತಿ ಆಚರಣೆಯೂ ಅರ್ಥಪೂರ್ಣವಾಗದೆ ಕಿರಿಕಿರಿ ಉಂಟುಮಾಡಿತ್ತು.

ವಚನಗಳು ಸಮಾಜದ ಆಸ್ತಿ. ಅಂತಹ ವಚನಗಳನ್ನು ರಚಿಸಿದವರಿಗೆ ಗೌರವ ಸಲ್ಲಬೇಕು. ಅದು ಬಿಟ್ಟು ಎರಡೆರಡು ಧ್ವನಿಗಳು ಬರುವಂತಹ ವಾತಾವರಣದಲ್ಲಿ ಈ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸರಿಯಲ್ಲ. ಇಂತಹ ಮಹನೀಯರ ಜಯಂತಿಯನ್ನು ಜಿಲ್ಲಾಡಳಿತಕ್ಕೆ ಮಾಡಲಾಗದಿದ್ದರೆ ಯಾವುದಾದರೊಂದು ಶಾಲೆ ಅಥವಾ ಕಾಲೇಜುಗಳಲ್ಲಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನ ಭಂಡಾರವನ್ನು ಇಮ್ಮಡಿಗೊಳಿಸುವ ಪ್ರಯತ್ನ ಮಾಡಬೇಕು. ಅದು ಬಿಟ್ಟು ಕಾಟಾಚಾರದ ಕಾರ್ಯಕ್ರಮ ಮಾಡಿದ್ದರ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌