ದೇವರ ಎತ್ತುಗಳ ಟ್ರಸ್ಟ್ ರಚಿಸಿಕೊಂಡರೆ ಪ್ರತಿ ಗೋವಿಗೆ ₹11,000

KannadaprabhaNewsNetwork | Updated : Jun 16 2024, 01:53 AM IST

ಸಾರಾಂಶ

ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕುಗಳಲ್ಲಿ ದೇವರ ಎತ್ತುಗಳು ಹೆಚ್ಚಾಗಿವೆ. ಈ ಜಾನುವಾರುಗಳ ನಿರ್ವಹಣೆಗೆ ಟ್ರಸ್ಟ್ ರಚನೆ ಮಾಡಲು ಪ್ರೇರೇಪಿಸುವಂತೆ ಪಶು ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ, ಜಿಲ್ಲಾ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇವರ ಎತ್ತುಗಳು ಗೋ ಶಾಲೆಗಳಲ್ಲಿ ಇರದ ಕಾರಣ, ಬರಗಾಲದ ಸಂದರ್ಭದಲ್ಲಿ ಇವುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಅನುದಾನ ಒದಗಿಸಲು ಬರುವುದಿಲ್ಲ. ಇದರ ಬದಲು ಗ್ರಾಮಸ್ಥರು 50ಕ್ಕಿಂತಲೂ ಹೆಚ್ಚಿನ ದೇವರ ಎತ್ತುಗಳನ್ನು ಒಳಗೊಂಡತೆ ಟ್ರಸ್ಟ್ ರಚಿಸಿ, ನಿರ್ವಹಣೆ ಹೊಣೆ ವಹಿಸಿಕೊಂಡರೆ, ಸರ್ಕಾರದಿಂದ ಪ್ರತಿ ಗೋವಿಗೂ ವಾರ್ಷಿಕ ನಿರ್ವಹಣೆ ವೆಚ್ಚವಾಗಿ ₹11,000 ಅನುದಾನ ಲಭಿಸಲಿದೆ. ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಹಸೀಲ್ದಾರಿಗೆ ಈ ಕುರಿತು ಸೂಚನೆ ನೀಡುತ್ತೇನೆ. ಪಶು ಇಲಾಖೆ ಅಧಿಕಾರಿಗಳು ಟ್ರಸ್ಟ್ ರಚನೆ ಪ್ರೇರೇಪಣಾ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು.

ಅಕ್ರಮ ಪ್ರಾಣಿವಧೆಗೆ ಕಡಿವಾಣ ಹಾಕಿ:

ಜೂನ್ 17ರಂದು ಬಕ್ರೀದ್ ಹಬ್ಬ ಆಚರಣೆ ಇದೆ. ಈ ಸಂದರ್ಭ ಅಕ್ರಮವಾಗಿ ಒಂಟೆ ಹಾಗೂ ಗೋವುಗಳನ್ನು ವಧೆ ಮಾಡದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ನಗರ ಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಪ್ರಾಣಿ ದಯಾ ಸಂಘದಿಂದ, ಪ್ರಾಣಿಗಳ ಅಕ್ರಮ ವಧೆ ಕುರಿತು ದೂರು ಕೇಳಿಬಂದರೆ ತಕ್ಷಣವೇ ಕ್ರಮ ಕೈಗೊಳ್ಳಬೇಕು. ನಗರ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳಿಗೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಅಕ್ರಮವಾಗಿ ಪ್ರಾಣಿವಧೆ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದರು.

ಪಶು ವೈದ್ಯಕೀಯ ಹಾಗೂ ಸೇವಾ ಇಲಾಖೆ ಉಪನಿರ್ದೇಶಕಿ ಡಾ.ಇಂದಿರಾ ಬಾಯಿ ಮಾತನಾಡಿ, ಬಕ್ರೀದ್ ಅಂಗವಾಗಿ 13 ವರ್ಷ ದಾಟಿದ ಪ್ರಮಾಣೀಕರಿಸಿದ ಎಮ್ಮೆ ಹಾಗೂ ಕೋಣಗಳನ್ನು ಮಾತ್ರ ವಧಿಸಬಹುದಾಗಿದೆ. ಗೋವು ಹಾಗೂ ಒಂಟೆ ವಧೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಉಳಿದಂತೆ ಕುರಿ, ಮೇಕೆಗಳ ವಧೆಗೆ ನಿರ್ಬಂಧವಿಲ್ಲ ಎಂದರು.

ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಗೋಶಾಲೆ ನಿರ್ಮಾಣ:

ಜಿಲ್ಲೆಯ ವಿವಿಧ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಸರ್ಕಾರಿ ಗೋಶಾಲೆಗಳನ್ನು ನಿರ್ಮಿಸಲು ಯೋಜನಾ ವರದಿ ನೀಡುವಂತೆ ಪಶು ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಸೂಚನೆ ನೀಡಿದರು. ಸಭೆಯಲ್ಲಿ ಸರ್ಕಾರಿ ಗೋಶಾಲೆಯ ಸಗಣಿ ವಿಲೇವಾರಿ, ಹೆಚ್ಚುವರಿ ಗೋಶಾಲೆಗಳ ನಿರ್ಮಾಣ, ಗೋಶಾಲೆಗಳಲ್ಲಿ ಡಿ ದರ್ಜೆ ನೌಕರರ ನೇಮಕ, ಜಿಲ್ಲಾ ಜಾನುವಾರು ಮಾರುಕಟ್ಟೆ ಮೇಲ್ವಿಚಾರಣೆ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಅಡಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಂಜಾರ್ ಪೋಲ್ ಹಾಗೂ ಇತರೆ ಗೋಶಾಲೆಗಳಿಗೆ ಬೆಂಬಲ ನೀಡುವ ಕಾರ್ಯಕ್ರಮಗಳ ಪ್ರಸ್ತಾವನೆಗಳನ್ನು ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ನಗರ ಸಭೆ ಪೌರಾಯುಕ್ತೆ ಎಂ.ರೇಣುಕಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ. ಕಾಳೆ ಸಿಂಘೆ, ಪಾಲಿ ಕ್ಲಿನಿಕ್ ಉಪನಿರ್ದೇಶಕ ಎನ್.ಕುಮಾರ್, ಜಿಲ್ಲಾ ಪ್ರಾಣಿ ಕಲ್ಯಾಣಾಧಿಕಾರಿ ಹಾಗೂ ವಕೀಲ ದೇವಿಪ್ರಸಾದ್, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಡಾಡಿ ದನಗಳಿಗೆ ಮಾರಕವಾದ ಪ್ಲಾಸ್ಟಿಕ್: ನಗರ ಪ್ರದೇಶದ ರಸ್ತೆ, ಮಾರುಕಟ್ಟೆ ಸೇರಿದಂತೆ ಎಲ್ಲೆಂದರಲ್ಲಿ ಬಿಡಾಡಿ ಓಡಾಡುವ ದನ-ಕರುಗಳನ್ನು ಸರ್ಕಾರಿ ಗೋವು ಶಾಲೆಗಳಿಗೆ ಕಳುಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸರ್ಕಾರದಿಂದ ಜಿಲ್ಲೆಯಲ್ಲಿ 1 ಗೋಶಾಲೆ ಮಾತ್ರ ನಡೆಸಲಾಗುತ್ತಿದೆ. ಇದರಲ್ಲಿ ಈಗಾಗಲೇ 81 ಜಾನುವಾರುಗಳು ಆಶ್ರಯ ಪಡೆದಿವೆ. ನಗರದ ತಿಪ್ಪೆಗುಂಡಿಗಳಲ್ಲಿ ಹರಡಿರುವ ಪ್ಲಾಸ್ಟಿಕ್ ತಿನ್ನುವ ಬಿಡಾಡಿ ದನಗಳು ಗೋಶಾಲೆಗೆ ದಾಖಲಾದರೆ, ಅವುಗಳ ಜೀವನ ಸುಗಮವಾಗುವ ಬದಲು, ಸಾವಿಗೆ ಈಡಾಗುವ ಪ್ರಸಂಗ ಉಂಟಾಗುತ್ತಿದೆ. ನಗರದಲ್ಲಿ ಎಲ್ಲ ವಯಸ್ಕ ಗೋವುಗಳ ಜಠರಗಳಲ್ಲಿ ಪ್ಲಾಸ್ಟಿಕ್ ಸೇರ್ಪಡೆಯಾಗಿದ್ದು, ಗೋವುಗಳು ಮೇವು ತಿಂದ ನಂತರ, ದೇಹದಲ್ಲಿನ ಪ್ಲಾಸ್ಟಿಕ್‌ನಿಂದ ತೊಂದರೆ ಅನುಭವಹಿಸಿ ಅಸುನೀಗುತ್ತಿವೆ. ಇದು ಪಶು ಇಲಾಖೆ ವೈದ್ಯಾಧಿಕಾರಿಗಳನ್ನು ಚಿಂತೆಗೆ ಈಡುಮಾಡಿದೆ. ಗೋವುಗಳ ಹೊಟ್ಟೆ ಸೇರಿದ ಪ್ಲಾಸ್ಟಿಕ್‌ ಅನ್ನು ಆಪರೇಷನ್ ಮಾಡಿ ಹೊರೆತೆಗದರೂ ಗೋವುಗಳು ಗುಣಮುಖವಾಗದೇ ಮತ್ತೆ ಸಾವಿನ ಕಡೆ ಸಾಗುತ್ತಿವೆ. ಈ ಕುರಿತು ಪಶು ಇಲಾಖೆ ವೈದ್ಯಾಧಿಕಾರಿಗಳು ಸಂಪೂರ್ಣ ಅಧ್ಯಯನ ವರದಿ ಸಿದ್ಧಪಡಿಸಿ ಪ್ರಾಣಿ ದಯಾ ಸಂಘಕ್ಕೆ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಭೆಯಲ್ಲಿ ನಿರ್ದೇಶನ ನೀಡಿದರು. ವಯಸ್ಕ ಗೋವುಗಳ ಬದಲಿಗೆ ಸಣ್ಣ ಕರುಗಳನ್ನು ಮುಂಜಾಗೃತ ಕ್ರಮವಾಗಿ ಗೋಶಾಲೆಗಳಿಗೆ ದಾಖಲಿಸುವಂತೆಯೂ ಅವರು ತಿಳಿಸಿದರು.

ಪ್ರಾಣಿ ದಯಾ ಸಂಘದ ನವೀಕರಣ: ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಸಿಇಒ, ಅಪರ ಜಿಲ್ಲಾಧಿಕಾರಿ, ಅರಣ್ಯ ಸಂರಕ್ಷಣಾಧಿಕಾರಿ, ನಗರ ಸಭೆ ಪೌರಾಯುಕ್ತೆ, ಡಿ.ಡಿ.ಪಿ.ಐ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಪಾಲಿ ಕ್ಲೀನಿಕ್ ಉಪನಿರ್ದೇಶಕ ಹಾಗೂ ಪಶು ಇಲಾಖೆ ಉಪನಿರ್ದೇಶಕರನ್ನು ಒಳಗೊಂಡ ಜಿಲ್ಲಾ ಮಟ್ಟದ ಪ್ರಾಣಿ ದಯಾ ಸಂಘದ ನವೀಕರಣಕ್ಕೆ ಅನುಮತಿ ನೀಡಲಾಯಿತು.

Share this article