11 ಕೋಟಿ ಶ್ರೀಹನುಮಾನ ಚಾಲೀಸಾ ಪಾಠದ ಸಮಾರೋಪ

KannadaprabhaNewsNetwork |  
Published : Nov 05, 2025, 02:30 AM IST
11 ಕೋಟಿ ಶ್ರೀ ಹನುಮಾನ ಚಾಲೀಸಾ ಪಾಠದ ಸಮಾರೋಪ ಸಮಾರಂಭದ ಹಾಗೂ ಅಖಂಡ ನೂರು ಗಂಟೆಗಳ ಶ್ರೀ ಹನುಮಾನ ಚಾಲೀಸಾ ಪಠಣದ ಮಹಾಸಮಾರಂಭದ ನಿಮಿತ್ತ ಮಂಗಳವಾರ ಸಂಜೆ ಹುಬ್ಬಳ್ಳಿಯಲ್ಲಿ ಭವ್ಯ ಶೋಭಾಯಾತ್ರೆ ಜರುಗಿತು. | Kannada Prabha

ಸಾರಾಂಶ

ಬೇರೆ ದೇಶದಲ್ಲಿ ಏಕ ದೇವೋಪಾಸನೆ ಇದ್ದರೆ, ವಿವಿಧೆತೆಯಲ್ಲಿ ಏಕತೆ ಕಾಣುವ ಭಾರತದಲ್ಲಿ ಅನೇಕ ದೇವೋಪಾಸನೆಯೂ ಹಾಸು ಹೊಕ್ಕಾಗಿದೆ. ದೇವನೊಬ್ಬ ನಾಮ ಹಲವು ಎಂಬಂತೆ ವಿವಿಧ ಹೆಸರಿನಲ್ಲಿ ಆರಾಧಿಸುವ ಭಗವಂತನ ಸಾಕ್ಷಾತ್ಕಾರವು ನಮ್ಮ ಸಾಧನೆಗೆ ದಾರಿದೀಪವಾಗಬೇಕಿದೆ.

ಹುಬ್ಬಳ್ಳಿ:

ಪೂರ್ವ ಸಂಕಲ್ಪಿತ 11 ಕೋಟಿ ಹನುಮಾನ ಚಾಲೀಸಾ ಪಾಠದ ಸಮಾರೋಪ ಸಮಾರಂಭ ಹಾಗೂ ಅಖಂಡ ನೂರು ಗಂಟೆಗಳ ಹನುಮಾನ ಚಾಲೀಸಾ ಪಠಣದ ಮಹಾಸಮಾರಂಭದ ನಿಮಿತ್ತ ಮಂಗಳವಾರ ಸಂಜೆ ನಗರದಲ್ಲಿ ಭವ್ಯ ಶೋಭಾಯಾತ್ರೆ ಜರುಗಿತು.

ಉತ್ತರ ಕನ್ನಡ ವೈಶ್ಯ ಸಮಾಜದ ಹೊಸೂರಿನ ಶ್ರೀಶಂಕರ ಸದನ ಮಂಗಲ ಕಾರ್ಯಾಲಯದಿಂದ ಸಂಜೆ ಆರಂಭವಾದ ಶ್ರೀಹನುಮಂತನ ಹಾಗೂ ಸದ್ಗುರು ಬ್ರಹ್ಮಚೈತನ್ಯ ಮಹಾರಾಜದ ಪಾದುಕೆಗಳನ್ನು ಹೊತ್ತ ಅಲಂಕೃತ ರಥಗಳ ಭವ್ಯ ಶೋಭಾಯಾತ್ರೆಯಲ್ಲಿ ಸಹಸ್ರಾರು ಜನರು ಪಾಲ್ಗೊಂಡರು.

ಹುಬ್ಬಳ್ಳಿಯ ಶ್ರೀದತ್ತಾವಧೂತ ಸೇವಾ ಸಂಘ ಹಾಗೂ ನಾಮ ಸಾಧಕ ಸಮಿತಿ ಸಹಯೋಗದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಹೆಬ್ಬಳ್ಳಿಯ ದತ್ತಾವಧೂತ ಗುರುಗಳು ನೇತೃತ್ವ ವಹಿಸಿದ್ದರು. ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಭಜನಾ ಮಂಡಳಿಗಳು ಭಾಗವಹಿಸಿದ್ದವು.

ಶಂಕರ ಸದನ ಮಂಗಲ ಕಾರ್ಯಾಲಯದಿಂದ ಹೊರಟ ಶೋಭಾಯಾತ್ರೆ ಜಿತೂರಿ ಆಸ್ಪತ್ರೆ, ಜೋಶಿ ಕಣ್ಣಿನ ಆಸ್ಪತ್ರೆ, ವಾಣಿ ವಿಲಾಸ ವೃತ್ತದ ಮೂಲಕ ಗೋಕುಲ ರಸ್ತೆಯ ನಾನಕೀ ಕನ್‌ವೆನ್ಷನ್ ಹಾಲ್‌ಗೆ ಆಗಮಿಸಿ ಸಂಪನ್ನಗೊಂಡಿತು.

ದೇವನೊಬ್ಬ ನಾಮ ಹಲವು:

ಅದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಹೆಬ್ಬಳ್ಳಿಯ ದತ್ತಾವಧೂತ ಗುರುಗಳು, ಬೇರೆ ದೇಶದಲ್ಲಿ ಏಕ ದೇವೋಪಾಸನೆ ಇದ್ದರೆ, ವಿವಿಧೆತೆಯಲ್ಲಿ ಏಕತೆ ಕಾಣುವ ಭಾರತದಲ್ಲಿ ಅನೇಕ ದೇವೋಪಾಸನೆಯೂ ಹಾಸು ಹೊಕ್ಕಾಗಿದೆ. ದೇವನೊಬ್ಬ ನಾಮ ಹಲವು ಎಂಬಂತೆ ವಿವಿಧ ಹೆಸರಿನಲ್ಲಿ ಆರಾಧಿಸುವ ಭಗವಂತನ ಸಾಕ್ಷಾತ್ಕಾರವು ನಮ್ಮ ಸಾಧನೆಗೆ ದಾರಿದೀಪವಾಗಬೇಕಿದೆ ಎಂದರು.

ಮಹಾಮಾರಿ ಕೋವಿಡ್ ಸಂದರ್ಭದಲ್ಲಿ 11 ಕೋಟಿ ಶ್ರೀ ಹನುಮಾನ್ ಚಾಲೀಸಾ ಪಠಣದ ಸಂಕಲ್ಪ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಹನುಮಾನ ಚಾಲೀಸ್ ಪಠಣವು ರೋಗಿಗಳಿಗೆ ಬಹಳಷ್ಟು ಧೈರ್ಯ ಮತ್ತು ಅಭಯ ನೀಡಿದೆ. ಇದರಲ್ಲಿ ಅದ್ಭುತವಾದ ಶಕ್ತಿ ಇದೆ. ಈಗ ಹುಬ್ಬಳ್ಳಿಯಲ್ಲಿ 100 ಗಂಟೆಗಳ ಶ್ರೀಹನುಮಾನ ಚಾಲೀಸಾ ಪಠಣ ಸಮಾರಂಭ ಆಯೋಜಿಸಲಾಗಿದ್ದು, ಭಕ್ತರು ತಮ್ಮ ಕುಟುಂಬ ಸಮೇತರಾಗಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಗಬೇಕು ಎಂದರು.

ನ. 5ರಿಂದ ನ. 9ರ ವರೆಗೆ 100 ಗಂಟೆಗಳ ಶ್ರೀ ಹನುಮಾನ ಚಾಲೀಸಾ ಪಠಣ (ಅವಿರತ) ನಡೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಿರೀಶ ರಾಮದಾಸಿ, ಶಶಿಧರ ಕುಲಕರ್ಣಿ, ಕೆ.ಜಿ. ಕುಲಕರ್ಣಿ, ರಾಮಚಂದ್ರ ಮುದ್ರೆಬೆಟ್ಟು, ಅಶೋಕ ದೇಸಾಯಿ, ವಸಂತ ಕುಬಾಳ, ಶ್ರೀಪಾದ ಪೂಜಾರ, ಡಾ. ವಿ.ಎಂ. ದೇಶಪಾಂಡೆ, ರಮೇಶ ಕುಲಕರ್ಣಿ, ವೆಂಕಟೇಶ ಸುಳ್ಳದ, ದಾಮೋದರ ಪಾಟೀಲ, ಉಮೇಶ ದುಶಿ, ರಮೇಶ ಕುಲಕರ್ಣಿ, ಶಂಕರ ಪಾಟೀಲ ಹಾಗೂ ಉ.ಕ. ವೈಶ್ಯ ಸಮಾಜದ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ