11 ದಿನಗಳ ಉಡುಪಿ-ಉಚ್ಚಿಲ ದಸರಾಕ್ಕೆ ವೈಭವದ ತೆರೆ

KannadaprabhaNewsNetwork |  
Published : Oct 04, 2025, 01:00 AM IST
03ಉಚ್ಚಿಲ - ಉಡುಪಿ - ಉಚ್ಚಿಲ ದರಸೆಯ ವೈಭವದ ಜಲಸ್ತಂಭನೆ. ದೃಶ್ಯಗಳು | Kannada Prabha

ಸಾರಾಂಶ

4ನೇ ವರ್ಷದ ‘ಉಡುಪಿ-ಉಚ್ಚಿಲ ದಸರಾ’ಕ್ಕೆ ಗುರುವಾರ ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನು ಕಾಪು ಸಮುದ್ರ ತೀರದಲ್ಲಿ ವೈಭವವಾಗಿ ಜಲಸ್ತಂಭನಗೊಳಿಸುವುದರೊಂದಿಗೆ ಅಂತಿಮ ತೆರೆ ಬಿದ್ದಿದೆ.

ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದ 4ನೇ ವರ್ಷದ ‘ಉಡುಪಿ-ಉಚ್ಚಿಲ ದಸರಾ’ಕ್ಕೆ ಗುರುವಾರ ಶಾರದೆ ಮತ್ತು ನವದುರ್ಗೆಯರ ವಿಗ್ರಹಗಳನ್ನು ಕಾಪು ಸಮುದ್ರ ತೀರದಲ್ಲಿ ವೈಭವವಾಗಿ ಜಲಸ್ತಂಭನಗೊಳಿಸುವುದರೊಂದಿಗೆ ಅಂತಿಮ ತೆರೆ ಬಿದ್ದಿದೆ.

ವಿಸರ್ಜನೆಗೆ ಮೊದಲು ನಡೆದ ಹತ್ತಾರು ಕಿ.ಮೀ. ಉದ್ದದ ವರ್ಣರಂಜಿತ ಶೋಭಾಯಾತ್ರೆ ಮೆರವಣಿಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು. ರಾತ್ರಿ ಹೊತ್ತು ಇಷ್ಟು ಬೃಹತ್ ಶೋಭಾಯಾತ್ರೆಯಲ್ಲಿ ವಾದ್ಯಘೋಷಗಳು, ಸ್ತಬ್ಧಚಿತ್ರಗಳ‍ು, ಹುಲಿ ವೇಷಧಾರಿಗಳು, ಭಜನಾ ತಂಡಗಳು, ಚಂಡೆ ತಂಡಗಳು ಯಾವುದೇ ಆಯಾಸವಿಲ್ಲದೆ ಅತ್ಯಂತ ಶಿಸ್ತುಬದ್ಧವಾಗಿ ನಡೆದಿದ್ದು ಉಚ್ಚಿಲ ಉಡುಪಿ ದಸರೆಯ ವೈಶಿಷ್ಟ್ಯತೆ ಸಾರುತಿತ್ತು.

ಆಕರ್ಷಕ ಗಂಗಾರತಿ:

ಶಾರದೆ ಜಲಸ್ತಂಭನೆಗಾಗಿಯೇ ವಿಶೇಷವಾಗಿ ಕಾಶಿಯಿಂದ ಕರೆಸಲಾದ ಅರ್ಚಕರು ಸಮುದ್ರ ದೇವಿ, ನವ ದುರ್ಗೆಯರು ಮತ್ತು ಮಾತೆ ಶಾರದೆಗೆ ಆರತಿ ಬೆಳಗಿದ್ದು ಅತ್ಯಾಕರ್ಷಕವಾಗಿತ್ತು. ಇದಕ್ಕೆ ಮೊದಲು ಮೆರವಣಿಗೆಯಲ್ಲಿ ಭಾಗಿಯಾದ ಸಾವಿರಾರು ಮಹಿಳೆಯರು ಸಮುದ್ರ ತೀರದಲ್ಲಿ ಏಕಕಾಲದಲ್ಲಿ ಶಾರದೆಗೆ ಆರತಿ ಬೆಳಗಿ ಪುನೀತರಾದರು.ಸಮುದ್ರತೀರದಲ್ಲಿ ನೂರಾರು ಮಂದಿ ಸ್ವಯಂಸೇವಕರು ಭಕ್ತರ ಜಯಘೋಷಗಳೊಂದಿಗೆ ದೇವಿಯರ ವಿಗ್ರಹಗಳನ್ನು ಸಮುದ್ರದೇವಿಯ ಮಡಿಲಿಗೊಪ್ಪಿಸಿದರು. ಈ ಸಂದರ್ಭದಲ್ಲಿ ಆಕಾಶದಿಂದ ಡ್ರೋಣ್‌ಗಳ ಮೂಲಕ ಪುಷ್ಪವೃಷ್ಟಿಗೈಯ್ಯಲಾಯಿತು. ಈ ದೃಶ್ಯಗಳು ನೆರೆದಿದ್ದ ಸಹಸ್ರಾರು ಭಕ್ತರು ಮತ್ತು ಇಡೀ ಉಡುಪಿ ಉಚ್ಚಿಲ ದಸರೆಯ ಆಯೋಜಕರನ್ನು ಭಕ್ತಭಾವ ಪರವಶವನ್ನಾಗಿ ಮಾಡಿತು.ಕಾರ್ಯಕ್ರಮದಲ್ಲಿ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ದಂಪತಿ, ಶಾಸಕ ಯಶ್ಪಾಲ್ ಸುವರ್ಣ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೊಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷರಾದ ಮೋಹನ್ ಬೇಂಗ್ರೆ, ದಿನೇಶ್ ಎರ್ಮಾಳು, ಕಾರ್ಯದರ್ಶಿ ಶರಣ್ಕುಮಾರ್ ಮಟ್ಟು, ಕ್ಷೇತ್ರಾಡಳಿಯ ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಮತ್ತು ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಳೆದ 11 ದಿನಗಳಿಂದ ನಡೆದ ದಸರಾ ಉತ್ಸವಕ್ಕೆ ಸಹಕರಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಕಾರ್ಯಕರ್ತರು, ಆರೋಗ್ಯ ಇಲಾಖೆ, ಪತ್ರಕರ್ತರು, ವಿವಿಧ ಸಂಘ, ಸಂಸ್ಥೆಯವರಿಗೆ, ಆಡಳಿತ ಮಂಡಳಿ, ಅರ್ಚಕರಿಗೆ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ದೇವಳದ ಪ್ರಧಾನ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ ಅವರು ವಂದನಾರ್ಪಣೆ ಸಲ್ಲಿಸಿದ್ದಾರೆ.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ