ಸಿಎಂ, ಡಿಸಿಎಂ ಪೈಪೋಟಿಗೆ 11 ಬಲಿ : ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Jun 18, 2025, 12:46 AM ISTUpdated : Jun 18, 2025, 11:51 AM IST
BY Vijayendra

ಸಾರಾಂಶ

ಆರ್‌ಸಿಬಿ ವಿಜಯೋತ್ಸವದ ಹೆಸರಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಪೈಪೋಟಿ ಹಾಗೂ ಹುಚ್ಚಾಟದಿಂದ 11 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

  ಬೆಂಗಳೂರು :  ಆರ್‌ಸಿಬಿ ವಿಜಯೋತ್ಸವದ ಹೆಸರಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಪೈಪೋಟಿ ಹಾಗೂ ಹುಚ್ಚಾಟದಿಂದ 11 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

ಮಂಗಳವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಜನಪ್ರಿಯತೆ ಹೆಚ್ಚಿಸಲು ಮತ್ತು ವರ್ಚಸ್ಸು ವೃದ್ಧಿಗೆ ಆರ್‌ಸಿಬಿ ವಿಜಯೋತ್ಸವದ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಡುವಿನ ಪೈಪೋಟಿ ಹಾಗೂ ಹುಚ್ಚಾಟಕ್ಕೆ 11 ಮಂದಿ ಬಲಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಭಂಡ ಸರ್ಕಾರ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತಮ್ಮ ಜನಪ್ರಿಯತೆ ಕಳೆದುಕೊಂಡಿದ್ದಾರೆ. ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ 11 ಮಂದಿ ಅಮಾಯಕರು ಸಾಯುವಂತಾಗಿದೆ. ಲಜ್ಜೆಗೆಟ್ಟ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈ ಸಾವಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.ಸಿಎಂ ಫೋಟೋ ಶೂಟ್‌ಗೆ 11 ಬಲಿ: ಅಶೋಕ್

ಆರ್‌ಸಿಬಿ ವಿಜಯೋತ್ಸವ ವೇಳೆ ಉಂಟಾದ ಕಾಲ್ತುಳಿತ ಘಟನೆ ಸಂಬಂಧ ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಅಂದರೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮೇಲೆ ಯಾರಿಗೂ ನಂಬಿಕೆ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಟೀಕಿಸಿದ್ದಾರೆ.

ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಪ್ಪು ಮಾಡದಿದ್ದಲ್ಲಿ ಸರಿಯಾಗಿ ತನಿಖೆ ನಡೆಸಬೇಕಿತ್ತು. ಈಗ ಹೈಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದರೆ, ಕೋರ್ಟ್‌ ಸಹ ಸರ್ಕಾರವನ್ನು ನಂಬುತ್ತಿಲ್ಲ ಎಂದರ್ಥ ಎಂದರು.

ಕಾಲ್ತುಳಿತದಲ್ಲಿ ಮೃತಪಟ್ಟಿರುವ 11 ಮಂದಿಯ ಕುಟುಂಬದವರನ್ನೇ ಕೇಳಿ ತನಿಖೆಗೆ ನೀಡಬಹುದಿತ್ತು. ಮೊದಲು ಜಿಲ್ಲಾಧಿಕಾರಿ, ನಂತರ ನಿವೃತ್ತ ನ್ಯಾಯಾಧೀಶರು, ಬಳಿಕ ಎಸ್‌ಐಟಿ ತನಿಖೆ ಎಂದು ಹೇಳಿದ್ದಾರೆ. ಇಲ್ಲಿ ಯಾವುದರಲ್ಲೂ ಖಚಿತತೆ ಇಲ್ಲ ಎಂದು ಕಿಡಿಕಾರಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕುಟುಂಬದವರು ಕ್ರಿಕೆಟಿಗರೊಂದಿಗೆ ಫೋಟೋ ಶೂಟ್‌ ಮಾಡಿಸಿಕೊಂಡಿದ್ದರಿಂದಲೇ 11 ಮಂದಿ ಅಮಾಯಕರು ಮೃತಪಟ್ಟಿದ್ದಾರೆ. ಬಿಜೆಪಿ ಎಲ್ಲಾ ಬಗೆಯ ಹೋರಾಟಗಳನ್ನು ಮಾಡಿದೆ. ಇನ್ನು ಮುಂದೆಯೂ ಹೋರಾಟ ಮಾಡಲಿದೆ. ಸರ್ಕಾರವೇ ಜನರನ್ನು ವಿಧಾನಸೌಧಕ್ಕೆ ಆಹ್ವಾನಿಸಿದೆ. ಆಹ್ವಾನ ನೀಡದಿದ್ದರೆ, ಈ ದುರಂತ ನಡೆಯುತ್ತಿರಲಿಲ್ಲ. ನಾವು ಪ್ರತಿಭಟನೆ ಮಾಡಿದಾಗ ನೂರಾರು ಸಂಖ್ಯೆಯಲ್ಲಿ ಪೊಲೀಸರು ಬಂಧಿಸಿದ್ದರು. ಅದೇ ರೀತಿ ಎರಡು ಲಕ್ಷ ಜನರ ನಿಯಂತ್ರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕಿತ್ತು ಎಂದರು.

ಈ ಘಟನೆ ಸಂಬಂಧ ಚರ್ಚಿಸಲು ಮೂರು ದಿನದ ಅಧಿವೇಶನ ಕರೆಯಲು ಆಗ್ರಹಿಸಿದ್ದೇನೆ. ಸರ್ಕಾರದ ತಪ್ಪಿಲ್ಲ ಎಂದಾದರೆ, ಯಾರದು ತಪ್ಪು ಎಂದು ಸರಿಯಾಗಿ ತಿಳಿಸಲಿ. ಮುಂದಿನ ಅಕ್ಟೋಬರ್‌ ತಿಂಗಳಲ್ಲೇ ಈ ಸರ್ಕಾರದ ಕಥೆ ಮುಗಿಯಲಿದೆ. ಎಲ್ಲಾ ಶಾಸಕರು ನಾವೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನು 2028ಕ್ಕೆ ಇವರು ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಡಿ.ಕೆ.ಶಿವಕುಮಾರ್‌ ಬಹಳ ಚಿಂತೆಯಲ್ಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ