ಕಾಯಕಲ್ಪಕ್ಕೆ ಕಾದಿದೆ ಶಿಗ್ಗಾಂವಿಯ ರಾಚನಕಟ್ಟಿ ಕೆರೆ

KannadaprabhaNewsNetwork |  
Published : Jun 18, 2025, 12:45 AM IST
ಪೊಟೋ ಪೈಲ್ ನೇಮ್ ೧೬ಎಸ್‌ಜಿವಿ೧  ಶಿಗ್ಗಾವಿ ಪಟ್ಟಣದಲ್ಲಿನ ರಾಚನಕಟ್ಟಿ ಕೆರೆ ಸುತ್ತಲು ಗಿಡಗಂಟಿ ಬೆಳೆದಿದೆ೧೬ಎಸ್‌ಜಿವಿ೧ -೧ | Kannada Prabha

ಸಾರಾಂಶ

ಕೆರೆ ದಂಡೆ ಸುತ್ತ ಗಿಡಗಂಟಿಗಳು ಬೆಳೆದು ಕಾಡಿನಂತೆ ಕಾಣುತ್ತಿದೆ. ಕೆರೆ ನೀರು ಪಾಚಿಗಟ್ಟಿದೆ. ನೀರಿನ ಬಣ್ಣ ಸಂಪೂರ್ಣವಾಗಿ ಹಸಿರಾಗಿದೆ.

ಬಸವರಾಜ ಹಿರೇಮಠಶಿಗ್ಗಾಂವಿ: ಒಂದು ಕಾಲದಲ್ಲಿ ರಾಚನಕಟ್ಟಿ ಕೆರೆ ಪಟ್ಟಣದ ಮನೆಬಳಕೆಗೆ ಅತ್ಯಮೂಲ್ಯವಾದ ಜಲಮೂಲವಾಗಿತ್ತು. ಇತ್ತೀಚೆಗೆ ರಾಚನಕಟ್ಟಿ ಕೆರೆ ವಿವಿಧ ತ್ಯಾಜ್ಯ ಮತ್ತು ದಂಡೆಯ ಸುತ್ತ ಗಿಡಗಂಟಿಗಳು ಬೆಳೆದಿದ್ದು, ನೀರು ಮಲೀನವಾಗಿ ಗಬ್ಬುವಾಸನೆ ಬೀರುತ್ತಿದೆ.

ಕೆರೆ ಸುತ್ತಲಿನ ನಿವಾಸಿಗಳು, ಗ್ರಾಮೀಣ ಪ್ರದೇಶದಿಂದ ಬರುವ ಸಾರ್ವಜನಿಕರು ಮಲಮೂತ್ರ ವಿಸರ್ಜನೆ ಮಾಡುತ್ತಾರೆ. ಈ ಕೆರೆ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ. ಅಲ್ಲದೆ ಹಂದಿ, ನಾಯಿಗಳ ವಾಸಸ್ಥಾನವಾಗಿದೆ. ಹೀಗಾಗಿ ಕೆರೆ ನೀರು ಸಂಪೂರ್ಣವಾಗಿ ಕಲುಷಿತವಾಗಿ ದುರ್ವಾಸನೆ ಹರಡುತ್ತಿದೆ. ಕೆರೆ ಬಳಿ ರಸ್ತೆಯಲ್ಲಿ ಜನ ಓಡಾಡದಂಥ ಪರಿಸ್ಥಿತಿ ಬಂದೋದಗಿದೆ.

ಕೆರೆ ದಂಡೆ ಸುತ್ತ ಗಿಡಗಂಟಿಗಳು ಬೆಳೆದು ಕಾಡಿನಂತೆ ಕಾಣುತ್ತಿದೆ. ಕೆರೆ ನೀರು ಪಾಚಿಗಟ್ಟಿದೆ. ನೀರಿನ ಬಣ್ಣ ಸಂಪೂರ್ಣವಾಗಿ ಹಸಿರಾಗಿದೆ.

ಕೆರೆ ದಂಡೆಯಲ್ಲಿರುವ ವ್ಯಾಪಾರಸ್ಥರು ತಮ್ಮ ಅಂಗಡಿಯಲ್ಲಿನ ತ್ಯಾಜ್ಯ ವಸ್ತುಗಳನ್ನು ಬಿಸಾಡುವುದು ಒಂದಡೆಯಾದರೆ ಇನ್ನೊಂದೆಡೆ ಕುಡುಕರು ಕೆರೆ ದಂಡೆಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದಾರೆ. ನಂತರ ಕುಡಿದ ಖಾಲಿ ಬಾಟಲ್, ಪ್ಲಾಸ್ಟಿಕ್ ಚೀಲಗಳನ್ನು ಚೆಲ್ಲುತ್ತಿದ್ದಾರೆ. ಅಲ್ಲದೆ ಅನೈತಿಕ ಚಟುವಟಿಕೆ ತಾಣವಾಗಿ ಪರಿಣಮಿಸಿದೆ.

ಜನರ ಜೀವನಾಡಿಯಾದ ಈ ರಾಚನೆಕಟ್ಟೆ ಕೆರೆ ವಿವಿಧ ಕಾಯಿಲೆಗಳಾದ ಡೆಂಘೀ, ಮಲೇರಿಯಾ, ಚಿಕೂನ್ ಗುನ್ಯಾ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳನ್ನು ಉತ್ಪಾದನೆ ಮಾಡುವ ಕೇಂದ್ರವಾಗಿದೆ. ತಕ್ಷಣವಾಗಿ ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯವನ್ನು ಎಸೆಯದಂತೆ ಜಲಮೂಲ ಕಾಪಾಡಲು ಮುಂದಾಗಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಕೆರೆಗೆ ಪುರಸಭೆ ಕಾಯಕಲ್ಪ ಕೈಗೊಳ್ಳಬೇಕು. ಕೆರೆಯನ್ನು ಸಾರ್ವಜನಿಕರ ಬಳಕೆಗೆ ಅನುಕೂಲ ಮಾಡುವುದರ ಜತೆಗೆ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಮಾಡಬೇಕು ಎಂದು ರೈತ ಮುಖಂಡ ಮಂಜುನಾಥ ಹಾವೇರಿ ಆಗ್ರಹಿಸಿದ್ದಾರೆ.

ಅಭಿವೃದ್ಧಿ ಕಾರ್ಯ: ಕೆರೆ ಸುತ್ತಲಿನ ತ್ಯಾಜ್ಯ ವಸ್ತುವನ್ನು ಪುರಸಭೆ ಪೌರ ಕಾರ್ಮಿಕರು ನಿತ್ಯ ವಿಲೇವಾರಿ ಮಾಡುತ್ತಾರೆ. ಜಾಗೃತಿ ಕಾರ್ಯ ಮಾಡಲಾಗಿದೆ. ಅಲ್ಲದೆ ಅಭಿವೃದ್ಧಿ ಕಾರ್ಯವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲೇಶಪ್ಪ ಆರ್. ತಿಳಿಸಿದರು.

ತ್ಯಾಜ್ಯ ಹಾಕದಂತೆ ಜಾಗೃತಿ: ವಿವಿಧ ತ್ಯಾಜ್ಯ ಎಸೆಯದಂತೆ ಜಾಗೃತಿ ಕೆರೆ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕಾಗಿದೆ. ಆದರೆ ಸದ್ಯ ಪುರಸಭೆಯಲ್ಲಿ ಯಾವುದೇ ಅನುದಾನವಿಲ್ಲ. ಆದರೂ ಸುತ್ತಲಿನ ಜನರು ತ್ಯಾಜ್ಯ ಹಾಕದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಸಿದ್ಧಾರ್ಥಗೌಡ ಪಾಟೀಲ ತಿಳಿಸಿದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ