ಮನರೇಗದಲ್ಲಿ ₹11 ಲಕ್ಷ ಕೋಟಿ ಅಕ್ರಮ : ಪ್ರಹ್ಲಾದ್‌ ಜೋಶಿ

KannadaprabhaNewsNetwork |  
Published : Jan 09, 2026, 01:30 AM IST
Prahlad Joshi

ಸಾರಾಂಶ

ಕಾಂಗ್ರೆಸ್‌ ಅವಧಿಯಲ್ಲಿ ‘ಮನರೇಗಾ’ ಯೋಜನೆಯಲ್ಲಿ ₹11 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಆಗಿದೆಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ತಿರುಗೇಟು ನೀಡಿದ್ದಾರೆ.

 ಬೆಂಗಳೂರು :  ಕಾಂಗ್ರೆಸ್‌ ಅವಧಿಯಲ್ಲಿ ‘ಮನರೇಗಾ’ ಯೋಜನೆಯಲ್ಲಿ ₹11 ಲಕ್ಷ ಕೋಟಿ ಮೊತ್ತದ ಭ್ರಷ್ಟಾಚಾರ ಆಗಿದೆ. ಇಂಥ ಅಕ್ರಮ, ವ್ಯಾಪಕ ಭ್ರಷ್ಟಾಚಾರ ತಡೆಯಲೆಂದೇ ಕೇಂದ್ರ ಸರ್ಕಾರ ‘ವಿಬಿ ಜಿ ರಾಮ್ ಜಿ ಕಾಯ್ದೆʼ ಜಾರಿ ತಂದಿದೆ. ಕಾಂಗ್ರೆಸ್‌ಗೆ ಇದೇ ದೊಡ್ಡ ಸಮಸ್ಯೆಯಾಗಿದೆ’ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ತಿರುಗೇಟು ನೀಡಿದ್ದಾರೆ.  

ಗುರುವಾರ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ವಿಬಿಜಿ ರಾಮ್ ಜಿ ಕಾಯ್ದೆಯಲ್ಲಿ ಎಐ ತಂತ್ರಜ್ಞಾನ-ಜಿಪಿಎಸ್ ಟ್ರ್ಯಾಕಿಂಗ್ ಅಳವಡಿಸಿದ್ದು, ಕೆಲಸದ ಗುಣಮಟ್ಟವನ್ನೂ ಪರೀಕ್ಷಿಸಲಾಗುತ್ತಿದೆ. ಮನರೇಗಾದಲ್ಲಿ ಹಣ ಹೊಡೆಯುತ್ತಿದ್ದ ಕಾಂಗ್ರೆಸ್‌ನ ಮಧ್ಯವರ್ತಿಗಳಿಗೆ ಇದುವೇ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ವಿರೋಧಿಸುತ್ತಿದ್ದಾರೆ’ ಎಂದು ಚಾಟಿ ಬೀಸಿದರು.

‘ಮನರೇಗಾದಲ್ಲಿ ಕಾಂಗ್ರೆಸ್ ಅವಧಿಯಲ್ಲಿ 11 ಲಕ್ಷ ಕೋಟಿ ರು. ಮೊತ್ತದ ಭ್ರಷ್ಟಾಚಾರ ಆರೋಪವನ್ನು ಕಾಂಗ್ರೆಸ್ ವಿರೋಧಿಸಿಲ್ಲ. 2013ರಲ್ಲಿ ಸಿಎಜಿ ಪ್ರಕಾರ ದೇಶದಲ್ಲಿ 4.33 ಲಕ್ಷ ನಕಲಿ ಜಾಬ್ ಕಾರ್ಡ್‌ಗಳಿದ್ದವು. ಮೊದಲು ಜೆಸಿಬಿಯಿಂದ ಕೆಲಸ ಮಾಡಿಸುತ್ತಿದ್ದರು. ಈಗ ಈ ಎಲ್ಲ ಅಕ್ರಮ, ಲೋಪಗಳಿಗೂ ತೆರೆ ಎಳೆಯಲೆಂದೇ ‘ವಿಬಿಜಿ ರಾಮ್ ಜಿ ಕಾಯ್ದೆʼ ತಂದಿದ್ದೇವೆ’ ಎಂದು ತಿಳಿಸಿದರು.

ಕೃಷಿ ಮೇಲೆ ದುಷ್ಪರಿಣಾಮ ಎನ್ನುತ್ತಿದ್ದಾರೆ

‘ಕಾಯ್ದೆಯಲ್ಲಿ ಕೂಲಿಕಾರರಿಗೆ 60 ದಿನಗಳ ಬಿಡುವು ಕೊಟ್ಟಿದ್ದಕ್ಕೆ ಕಾಂಗ್ರೆಸ್ಸಿಗರು ಕೃಷಿ ಮೇಲೆ ದುಷ್ಪರಿಣಾಮ ಎನ್ನುತ್ತಿದ್ದಾರೆ. ಹಾಗಾದರೆ ಇವರ ಕಾಲದಲ್ಲೇನು 365 ದಿನ ಕೆಲಸ ಕೊಡುತ್ತಿದ್ದರಾ? ಕಾಂಗ್ರೆಸ್ ಕಾಲದಲ್ಲಿ ಮನರೇಗಾದಲ್ಲಿ ಡಿಜಿಟಲ್ ಪೇಮೆಂಟ್ ಅನ್ನೇ ಮಾಡುತ್ತಿರಲಿಲ್ಲ’ ಎಂದರು.ರಾಜ್ಯದಲ್ಲಿ ಹೆಚ್ಚು ಭ್ರಷ್ಟಾಚಾರ: ಜೋಶಿ‘ಮನರೇಗಾದಲ್ಲಿ ರಾಜ್ಯಕ್ಕೆ ಕಳೆದ 10 ವರ್ಷಗಳಲ್ಲಿ 8.53 ಲಕ್ಷ ಕೋಟಿ ರು. ಕೊಟ್ಟಿದ್ದೇವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲೇ ರಾಜ್ಯದಲ್ಲಿ ಮನರೇಗಾದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಆಗಿದೆ. 80 ವರ್ಷದ ವ್ಯಕ್ತಿಯನ್ನೂ ಕೂಲಿಯನ್ನಾಗಿ ಮಾಡಿ ಹಣ ಪಡೆಯಲಾಗಿದೆ. ಇದೀಗ ರಾಹುಲ್ ಗಾಂಧಿಯಂತಹ ಅಪ್ರಬುದ್ಧ ರಾಜಕಾರಣಿಯನ್ನು ಖುಷಿಪಡಿಸಲು ಹೋರಾಟ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಕಾಂಗ್ರೆಸ್ ಮಧ್ಯವರ್ತಿಗಳಿಗೆ ಇನ್ನು ಮುಂದೆ ದುಡ್ಡು ಸಿಗುವುದಿಲ್ಲ

‘ಜಿ ರಾಮ್ ಜಿಯಲ್ಲಿ ಕೇಂದ್ರ ಸರ್ಕಾರ ತಾಂತ್ರಿಕತೆ ಅನುಷ್ಠಾನ ಮಾಡುತ್ತಿರುವುದರಿಂದ ಗರಿ ಗರಿ ಅಂಗಿ ಹಾಕಿಕೊಂಡು ಓಡಾಡುತ್ತಿದ್ದ ಕಾಂಗ್ರೆಸ್ ಮಧ್ಯವರ್ತಿಗಳಿಗೆ ಇನ್ನು ಮುಂದೆ ದುಡ್ಡು ಸಿಗುವುದಿಲ್ಲ’ ಎಂದು ಹೇಳಿದರು. ‘ಕಾಯ್ದೆಯಲ್ಲಿ ಇನ್ನು 14 ದಿನದಲ್ಲೇ ಕೂಲಿ ಹಣ ಪಾವತಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ಮೇಲುಸ್ತುವಾರಿಯನ್ನು ಪಂಚಾಯತ್‌ಗೂ ಕೊಡಲಾಗಿದೆ. ಪ್ರತಿ ವಾರ ಕೆಲಸದ ವಿವರ ಬಹಿರಂಗಪಡಿಸಬೇಕು. ಯಾರೇ ತಪ್ಪು ಮಾಡಿದರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದರಲ್ಲಿ ಅಷ್ಟೊಂದು ವ್ಯವಸ್ಥಿತವಾಗಿ ಪಾರದರ್ಶಕತೆ ತರಲಾಗಿದೆ’ ಎಂದು ಸಮರ್ಥಿಸಿಕೊಂಡರು.

‘ಯುಪಿಎ ಅವಧಿಯಲ್ಲಿ ನರೇಗಾದಲ್ಲಿ ಜೆಸಿಬಿಯಿಂದ ಕೆಲಸ ಮಾಡಿಸಲಿಲ್ಲವೆಂದು ಕಾಂಗ್ರೆಸ್ಸಿನ ಒಬ್ಬರಾದರೂ ಹೇಳಲಿ ನೋಡೋಣ ಎಂದು ಸವಾಲು ಹಾಕಿದ ಸಚಿವರು, ಇವರ ಅವಧಿಯಲ್ಲಿ ನರೇಗಾ ಸಿಬ್ಬಂದಿಗೆ ವೇತನವೇ ಸಿಗುತ್ತಿರಲಿಲ್ಲ. ಇನ್ನು ಯುಪಿಎ ಕಾಲದಲ್ಲಿ ರಕ್ಷಣಾ ವ್ಯವಸ್ಥೆಗೂ ಏನೂ ಮಾಡಲಿಲ್ಲ. ಆಗಿನ ರಕ್ಷಣಾ ಸಚಿವ ಆ್ಯಂಟನಿ ಅವರು ಹೈಕಮಾಂಡ್‌ಗೆ ಹೆದರಿ ಯಾವುದಕ್ಕೂ ಸಹಿ ಮಾಡುತ್ತಲೇ ಇರಲಿಲ್ಲ’ ಎಂದು ಕುಟುಕಿದರು.ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಶಾಸಕ ಮಹೇಶ್ ಟೆಂಗಿನಕಾಯಿ, ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಉಪಸ್ಥಿತರಿದ್ದರು.ನಿಷ್ಕ್ರಿಯ ಪತ್ರಿಕೆಗಾಗಿ ‘ಕೈ’ ಖಜಾನೆ ಲೂಟಿ:ರಾಜ್ಯ ಕಾಂಗ್ರೆಸ್ ಸರ್ಕಾರ ಗಾಂಧಿ ಕುಟುಂಬದ ಅಣತಿಯಂತೆ ನಿಷ್ಕ್ರಿಯವಾಗಿರುವ ಪತ್ರಿಕೆಗಾಗಿ ರಾಜ್ಯದ ಖಜಾನೆಯನ್ನೇ ಲೂಟಿ ಮಾಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಅಸ್ತಿತ್ವದಲ್ಲಿರದ ಹಾಗೂ ದೇಶದಲ್ಲಿರುವ ರಾಷ್ಟ್ರೀಯ ಪತ್ರಿಕೆಗಳನ್ನು ಹೊರಗಿಟ್ಟ ಕರ್ನಾಟಕದ ಕಾಂಗ್ರೆಸ್ ಸರ್ಕಾರ ನ್ಯಾಷನಲ್ ಹೆರಾಲ್ಡ್‌ಗೆ ಜಾಹೀರಾತು ಹಣವನ್ನು ಏಕೆ ನೀಡಿದೆ ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ದಿನಪತ್ರಿಕೆಗಳು ಮತ್ತು ಶೇ.69ರಷ್ಟು ಓದುಗರನ್ನು ಹೊಂದಿರುವ ಪತ್ರಿಕೆಗಳನ್ನು ಬಿಟ್ಟು ನಿಷ್ಕ್ರಿಯವಾಗಿರುವ ದಿನಪತ್ರಿಕೆಗೆ ಹಣ ನೀಡಿದ್ದು, ವಿಶ್ವಾಸಾರ್ಹ ದಿನಪತ್ರಿಕೆಗಳಿಗೆ ಏನೂ ಸಿಗದಂತೆ ಲೂಟಿ ಮಾಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ‘ನಕಲಿ’ ಗಾಂಧಿ ಕುಟುಂಬವನ್ನು ಮತ್ತಷ್ಟು ‌ಓಲೈಸಲು ಮಾಡಿದ ಪಿತೂರಿಯಿದು ಎಂದು ಆಪಾದಿಸಿದರು.ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ. ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣವಿಲ್ಲ. ಆದರೆ, ನಿಷ್ಕ್ರಿಯವಾದ ಒಂದು ಪತ್ರಿಕೆ ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ಹಣ ಪಡೆಯುತ್ತದೆ. ಇದು‌ ದುರಾಡಳಿತದ ಪರಮಾವಧಿ ಮತ್ತು ಅಧಿಕಾರ ದುರುಪಯೋಗ, ಹಗಲು ದರೋಡೆಯೇ ಸರಿ ಎಂದು ವಾಗ್ದಾಳಿ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ