ಕುಕನೂರು: ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ 11ಪಬ್ಲಿಕ ಶಾಲೆಗಳನ್ನು ಸಿಎಂ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ ಮಂಜೂರು ಮಾಡಿಸಿದ್ದಾರೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ ಹೇಳಿದರು.
ಕ್ಷೇತ್ರದ ಗುನ್ನಾಳ, ಹಿರೇಅರಳಿಹಳ್ಳಿ, ಕಲ್ಲೂರು, ಬಳೂಟಗಿ, ಬಿನ್ನಾಳ, ಹಿರೇಬೀಡನಾಳ, ಮಂಡಲಗಿರಿ, ಕುದರಿಮೋತಿ, ಹಿರೇಮ್ಯಾಗೇರಿ, ಬನ್ನಿಕೊಪ್ಪ, ಗಾಣದಾಳ ಗ್ರಾಮಗಳಿಗೆ ಮಂಜೂರಾಗಿವೆ. ಪ್ರತಿ ಶಾಲೆಯ ಕಟ್ಟಡಗಳ ನಿರ್ಮಾಣಕ್ಕೆ ₹4 ಕೋಟಿ ಅನುದಾನ ನೀಡಲಾಗುತ್ತಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಕಲಿಸಲು ಶಿಕ್ಷಕರ ನೇಮಕಾತಿಗೂ ಸರ್ಕಾರ ಅಗತ್ಯ ಕ್ರಮ ವಹಿಸಿದೆ. ಒಟ್ಟಾರೆ ಯಲಬುರ್ಗಾ ಕ್ಷೇತ್ರದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಲಾಗಿದೆ ಎಂದರು.
ರಾಯರಡ್ಡಿ ಸೋತಾಗ ಅಭಿವೃದ್ಧಿ ಹಿನ್ನಡೆ:ಶಾಸಕ ಬಸವರಾಜ ರಾಯರಡ್ಡಿ ಕಳೆದ ಅವಧಿಯಲ್ಲಿ ಸೋತಾಗ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಅವರ ಸೋಲಿನ ಅವಧಿಯಲ್ಲಿ ಆಡಲಿತದಲ್ಲಿ ಇದ್ದವರು ಒಂದೂ ಸಹ ಕೆಪಿಎಸ್ ಶಾಲೆ ಮಂಜೂರು ಮಾಡಿಸಲಿಲ್ಲ. ರಾಜ್ಯದಲ್ಲಿಯೇ ಅತೀ ಹೆಚ್ಚು ಶಾಲೆ ಪಡೆದ ಹೆಮ್ಮೆ ಯಲಬುರ್ಗಾ ಕ್ಷೇತ್ರದ್ದು. ಅದು ರಾಯರಡ್ಡಿ ಕೊಡುಗೆ ಎಂದರು.
ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿದ್ದಯ್ಯ ಕಳ್ಳಿಮಠ, ಪಪಂ ಸದಸ್ಯ ಗಗನ ನೋಟಗಾರ, ಗ್ರಾಪಂ ಸದಸ್ಯ ಯಮನೂರಪ್ಪ ಕಟ್ಟಿಮನಿ, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ರೆಹೆಮಾನಸಾಬ್ ಮಕ್ಕಪ್ಪನವರ್, ಮುತ್ತಪ್ಪ ವಾಲ್ಮೀಕಿ ಇದ್ದರು.