11 ಟನ್‌ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಪತ್ತೆ !

KannadaprabhaNewsNetwork |  
Published : Nov 20, 2026, 01:15 AM IST
ಸಾರ್ವಜನಿಕರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣವನ್ನು ಯಾದಗಿರಿ ಆಹಾರ ಇಲಾಖೆ ಹಾಗೂ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ. | Kannada Prabha

ಸಾರಾಂಶ

11 tonnes of illegal PDS rice stock discovered!

- ಯಾದಗಿರಿಯ ಅಕ್ಷತಾ ಟ್ರೇಡರ್ಸ್‌ ಮೇಲೆ ದಾಳಿ: ಅಕ್ರಮ ಪಡಿತರ ಅಕ್ಕಿ ಪತ್ತೆ

- 197 ಬ್ಯಾಗ್‌ಗಳ ಸಹಿತ 11,320 ಕೆಜಿ ಅಕ್ಕಿ ವಶ - ಮೌಲ್ಯ ₹2,63,303

ಕನ್ನಡಪ್ರಭ ವಾರ್ತೆ ಯಾದಗಿರಿ

ಸಾರ್ವಜನಿಕರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣವನ್ನು ಯಾದಗಿರಿ ಆಹಾರ ಇಲಾಖೆ ಹಾಗೂ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ. ನಗರದ ಗಂಜ್ ಏರಿಯಾದಲ್ಲಿರುವ ಅಕ್ಷತಾ ಟ್ರೇಡರ್ಸ್ ಹೆಸರಿನ ಅಂಗಡಿ ಮೇಲೆ ದಾಳಿ ನಡೆಸಿ ಒಟ್ಟು 11,320 ಕೆಜಿ ತೂಕದ 197 ಬ್ಯಾಗ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ ₹2,63,303 ಎಂದು ತಿಳಿದು ಬಂದಿದೆ.

ನ.18 ರಂದು ಬೆಳಿಗ್ಗೆ ಗಂಜ್ ಏರಿಯಾದ ಅಂಗಡಿಯೊಂದರಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿರುವ ಬಗ್ಗೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ, ಆಹಾರ ನಿರೀಕ್ಷಕ ವಿಠ್ಠಲ ಬಂಡಾಳ, ಆಹಾರ ಶಿರಸ್ತೇದಾರ ಮಹೇಶ್ ಎಂ.ಜಿ. ಹಾಗೂ ಆಹಾರ ನಿರೀಕ್ಷಕಿ ರಾಜೇಶ್ವರಿ ಡಂಬಳ ಅವರು ಪಂಚರ ಸಮ್ಮುಖದಲ್ಲಿ ದಾಳಿ ನಡೆಸಲು ಮುಂದಾದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನೂ ಸ್ಥಳಕ್ಕೆ ನಿಯೋಜಿಸಲಾಗಿತ್ತು. ಪಿಎಸೈ ವಿಶ್ವರಾಧ್ಯ ಹಾಗೂ ಕಾನ್ಸಟೇಬಲ್‌ಗಳಾದ ವೆಂಕೋಬ, ಪ್ರಭುಲಿಂಗ, ರವೀಂದ್ರ ಹಾಗೂ ಪ್ರಭುಗೌಡ ತಂಡ ದಾಳಿಯ ವೇಳೆ ಉಪಸ್ಥಿತರಿದ್ದರು.

ಬೆಳಿಗ್ಗೆ ಗಂಜ್‌ ಪ್ರದೇಶದ ಅಂಗಡಿ ನಂಬರ್ 77ರಲ್ಲಿರುವ ಅಕ್ಷತಾ ಟ್ರೇಡರ್ಸ್ ಮಳಿಗೆಯನ್ನು ಪರಿಶೀಲಿಸಿದಾಗ, ಬಸವರಾಜ ಎಂಬುವವರು ಸಾರ್ವಜನಿಕರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಬಳಿಕ ಮಳಿಗೆಯ ಬೀಗ ತೆರೆಸಿ ಪರಿಶೀಲಿಸಿದಾಗ 197 ಬ್ಯಾಗ್‌ಗಳಲ್ಲಿ ಅಕ್ಕಿ ಪತ್ತೆಯಾಗಿದೆ.

ಅಕ್ಕಿಯನ್ನು ಪರಿಶೀಲಿಸಿದ ಅಧಿಕಾರಿಗಳು ಅದು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪಡಿತರ ಅಕ್ಕಿ ಎಂದು ಗುರುತಿಸಿದ್ದಾರೆ. ಪಂಚರ ಸಮ್ಮುಖದಲ್ಲಿ ಅಕ್ಕಿಯ ಮಾದರಿಯನ್ನು ಸಂಗ್ರಹಿಸಿ, ಸಹಿಯುಳ್ಳ ಚೀಟಿಯನ್ನು ಅಂಟಿಸಿ ಪಂಚನಾಮೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಪ್ರಕರಣ ದಾಖಲುಈ ಸಂಬಂಧ ಆಹಾರ ನಿರೀಕ್ಷಕ ವಿಠ್ಠಲ ಬಂಡಾಳ ಅವರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಗುನ್ನೆ ನಂ. 908/2026 ರ ಅಡಿಯಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3, 6 ಮತ್ತು 7ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಕ್ಕಿ ಎಲ್ಲಿಂದ ಬಂತು? ಇಷ್ಟು ಪ್ರಮಾಣದ ಪಡಿತರ ಅಕ್ಕಿಯನ್ನು ಎಲ್ಲಿಂದ ಸಂಗ್ರಹಿಸಲಾಗಿತ್ತು? ಯಾರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿತ್ತು? ಈ ಅಕ್ರಮದ ಹಿಂದೆ ಬೇರೆ ವ್ಯಕ್ತಿಗಳ ಕೈವಾಡವಿದೆಯೇ ಎಂಬ ಕುರಿತು ಯಾದಗಿರಿ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಸವರಾಜ್ ಹಾಗೂ ವಿಜಯ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಪಡಿತರ ಅಕ್ಕಿ ಅಕ್ರಮ ದಂಧೆ:

ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸಬೇಕಿದ್ದ ಅನ್ನಭಾಗ್ಯ ಅಕ್ಕಿಯನ್ನು ಕೆಲವು ಫಲಾನುಭವಿಗಳಿಂದ ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ಕಡಿಮೆ ಬೆಲೆಗೆ ಕಾಳಸಂತೆಯಲ್ಲಿ ಖರೀದಿಸಲಾಗುತ್ತದೆ ಎಂಬುದು ಆರೋಪಗಳಿವೆ. ಹೀಗೆ ಸಂಗ್ರಹಿಸಿದ ಅಕ್ಕಿಯನ್ನು ವಿವಿಧ ರೈಸ್ ಮಿಲ್‌ಗಳಿಗೆ ಸಾಗಿಸಿ, ಅಲ್ಲಿ ಪಾಲಿಶ್ ಮಾಡಿ ಹೊಸ ಅಕ್ಕಿಯಂತೆ ಬದಲಾಯಿಸಲಾಗುತ್ತದೆ. ನಂತರ ವಿವಿಧ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಆಕರ್ಷಕ ಪ್ಯಾಕಿಂಗ್ ಮಾಡಲಾಗುತ್ತದೆ. ಈ ಅಕ್ಕಿಯನ್ನು ದೇಶದ ವಿವಿಧ ರಾಜ್ಯಗಳಿಗೆ ಮಾತ್ರವಲ್ಲ, ಗಲ್ಫ್ ರಾಷ್ಟ್ರಗಳು, ಫ್ರಾನ್ಸ್ ಸೇರಿದಂತೆ ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂಬುದು ಗುರುಮಠಕಲ್‌ ಪ್ರಕರಣದಲ್ಲಿ ಸಿಐಡಿ ನಡೆಸಿದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನಭಾಗ್ಯದ ಅಕ್ಕಿ ಮತ್ತೆ ಮತ್ತೆ ಕಾಳಸಂತೆಗೆ ಸೇರುತ್ತಿದೆ. ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ಗುರುಮಠಕಲ್‌, ಶಹಾಪುರ, ಸುರಪುರ, ಕೆಂಭಾವಿ ಮುಂತಾದ ಕಡೆಗಳಲ್ಲಿ ಇಂತಹ ಅನೇಕ ಪ್ರಕರಣಗಳು ಪತ್ತೆಯಾಗಿವೆ. ಯಾದಗಿರಿ ಜಿಲ್ಲೆ ರಾಜ್ಯದಲ್ಲೇ ಪಡಿತರ ಅಕ್ಕಿ ಅಕ್ರಮದ ಕೇಂದ್ರಬಿಂದುವಾಗಿ ಗುರುತಿಸಿಕೊಂಡಿದೆ. ಕಳೆದ ವರ್ಷ ಗುರುಮಠಕಲ್‌ ಪ್ರಕರಣಗಳಲ್ಲಿ ಸಿಐಡಿ ತನಿಖೆ ನಡೆದಿದೆ, ಜಾರಿ ನಿರ್ದೇಶನಾಲಯ (ಇ.ಡಿ) ಮಾಹಿತಿ ಕೋರಿದೆ. ಆದರೂ ಅಕ್ರಮಗಳು ಮತ್ತೇ ಮತ್ತೇ ನಡೆಯುತ್ತಿರುವುದು ಅಚ್ಚರಿ ಮೂಡಿಸಿದೆ.

ಫೋಟೊ:19ವೈಡಿಆರ್9 ಸಾರ್ವಜನಿಕರಿಗೆ ವಿತರಿಸಬೇಕಾದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣವನ್ನು ಯಾದಗಿರಿ ಆಹಾರ ಇಲಾಖೆ ಹಾಗೂ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆ ಹಚ್ಚಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನ ನೆಚ್ಚದೇ ಊರ ಕೆರೆ ಸ್ಚಚ್ಛ ಮಾಡಿಕೊಂಡ ಗ್ರಾಮಸ್ಥರು
ಪಂಚತಂತ್ರ ಕಥೆಗಳ ಮೌಲ್ಯ ಮಕ್ಕಳ ಮನಃಪರಿವರ್ತನೆಗೆ ಸಹಕಾರಿ: ವಿವೇಕಾನಂದಗೌಡ ಪಾಟೀಲ