ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಕಾಂಕ್ಷಿ ಎತ್ತಿನಹೊಳೆ ಯೋಜನೆ ಕಳೆದ 12 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಇದುವರೆಗೂ ಪೂರ್ಣಗೊಂಡಿಲ್ಲ. ಈ ಮಧ್ಯೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ ಗ್ರಾಮದ ಬಳಿ ರೈತರ ಅನುಮತಿ ಅಭಿಪ್ರಾಯ ಸಂಗ್ರಹಿಸದೆ ಏಕಾಏಕಿ 2 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂ ನಿರ್ಮಾಣ ಮಾಡಲು ಹೊರಟಿರುವ ಸರ್ಕಾರದ ನಡೆಯನ್ನು ಈ ಭಾಗದ ರೈತರು ಬಲವಾಗಿ ವಿರೋಧಿಸಿದ್ದಾರೆ.
ಪ್ರಾಣವನ್ನಾದರೂ ಬಿಟ್ಟೇವು, ಒಂದಿಂಚು ಭೂಮಿ ಮನೆ ಕೊಡುವುದಿಲ್ಲ ಎಂಬ ಕೂಗು ಈ ಭಾಗದ ಜನರಿಂದ ಬಲವಾಗಿ ಕೇಳಿ ಬರುತ್ತಿದೆ. ಈ ಭಾಗದ ರೈತರಿಗೆ ಮಾಹಿತಿ ನೀಡದೆ ಭೂಮಿ ಒಪ್ಪಿಗೆ ಬಗ್ಗೆ ಏಕಾಪಕ್ಷಿಯ ನಿರ್ಧಾರ ಮಾಡಿರುವುದು ಅಕ್ಷ್ಯಮ್ಯ ಅಪರಾಧ ಎಂಬ ಆಕ್ರೋಶ ಕೇಳಿ ಬಂದಿದ್ದು, ಇದಕ್ಕೆಲ್ಲ ಅಧಿಕಾರಿಗಳ ಬೇಜಾವ್ದಾರಿತನ ಕಾರಣ ಎಂಬ ಆರೋಪ ಪ್ರಬಲವಾಗಿದೆ.ಕಳೆದ ವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಲಾಶಯ ನಿರ್ಮಾಣದ ಸ್ಥಳ ವೀಕ್ಷಿಸಲು ಬಂದಾಗ ಈ ವಿಷಯ ಬಹಿರಂಗವಾಗಿದೆ. ಕನಿಷ್ಠ ಸ್ಥಳೀಯ ರೈತರ ಮಾತನ್ನೂ ಸಹ ಆಲಿಸದೆ, ಅಭಿಪ್ರಾಯ ಕೇಳದೆ ಅಧಿಕಾರಿಗಳ ಜತೆ ಉಪಮುಖ್ಯಮಂತ್ರಿಗಳು ಸ್ಥಳ ಪರಿಶೀಲನೆ ನಡೆಸಿ ಹೊರಟಿದ್ದಾರೆ. ಇದರಿಂದ ಲಕ್ಕೇನಹಳ್ಳಿ, ಗರುಡಗಲ್ಲು, ಮಚ್ಚೇನಹಳ್ಳಿ, ಸಿಂಗೇನಹಳ್ಳಿ, ದಾಸರಪಾಳ್ಯ, ಕಡೇಪಾಳ್ಯ, ನರಸಾಪುರ, ಗಾಣದಾಳು, ಶ್ರೀರಾಮನಹಳ್ಳಿ ಹಾಗೂ ಶ್ರೀರಾಮನಹಳ್ಳಿ ಕಾಲೋನಿ, ಸಾಸಲು ಭಾಗದ ರೈತರು ಆತಂಕಗೊಂಡಿದ್ದು, ತಲೆಮಾರುಗಳಿಂದ ವಾಸವಿದ್ದ ಮನೆ, ಜಮೀನುಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.
ನಿಖರತೆ ಇಲ್ಲದ ಪ್ರಸ್ತಾವನೆ:ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿ ಬಳಿ ನಿರ್ಮಿಸಲು ಹೊರಟಿರುವ ಎತ್ತಿನಹೊಳೆ ಡ್ಯಾಂಗೆ ಸ್ಥಳೀಯ ರೈತರ ವಿರೋಧ ಹೆಚ್ಚಾಗಿದ್ದು, ಸದರಿ ಜಲಾಶಯ ನಿರ್ಮಾಣ ಯೋಜನೆ ಬದಲಾಗುತ್ತಲೇ ಬಂದಿದ್ದು ನಿಖರತೆ, ಸ್ಪಷ್ಟತೆ ಇಲ್ಲದೆ ಹೇಗೆಲ್ಲಾ ಬದಲಾವಣೆ ಹೊಂದುತ್ತಾ ಬಂದಿದೆ ಎಂಬುದು ಯಕ್ಷ ಪ್ತಶ್ನೆಯಾಗಿದೆ.
ಹೀಗಿರುವಾಗ ಯೋಜನೆಯ ಗುಣಮಟ್ಟ, ಕಾಮಗಾರಿಗಳ ಗುಣಮಟ್ಟ, ಯೋಜನೆಯ ಧೈಯೋದ್ದೇಶ, ಪ್ರಕ್ರಿಯೆ, ಫಲಿತಾಂಶಗಳ ಬಗ್ಗೆ ಅಸ್ಪಷ್ಟತೆಯಿರುವುದು ರಹಸ್ಯವಾದ ವಿಚಾರವೇನಲ್ಲ. ಸದರಿ ಎತ್ತಿನಹೊಳೆ ಯೋಜನೆಯು ಆರಂಭವಾದ ದಿನದಿಂದ ವಿರೋಧ, ಆಕ್ಷೇಪಣೆ, ಪ್ರಶ್ನೆಗಳು ಆಯಾ ಸಂದರ್ಭಾನುಸಾರ ಆಯಾ ಪ್ರದೇಶದಲ್ಲಿ ಎದ್ದಿರುತ್ತವೆ. ಇಲ್ಲಿ ವರೆಗೆ ಸಮರ್ಪಕವಾದ ಉತ್ತರ ಸಿಕ್ಕಿಲ್ಲ.ಕೃಷಿ ಭೂಮಿ ವಶಪಡಿಸಿಕೊಂಡರೆ ಅಪಾಯ:
ಆರಂಭದಲ್ಲಿ ದೇವರಾಯನ ದುರ್ಗ, ನಂತರ ಬೈರಗೊಂಡ್ಲು ಈಗ ಲಕ್ಕೇನಹಳ್ಳಿ ಬಳಿ ಡ್ಯಾಂ ನಿರ್ಮಾಣ ಎಂಬ ಪ್ರಸ್ತಾವನೆಗಳು ಕೇಳಿ ಬಂದಿದ್ದು, ಯೋಜನಾಬದ್ದ ನಡೆಯ ಕೊರತೆ ಸ್ಪಷ್ಟವಾಗಿದೆ. ಈ ಸಂಬಂಧ ಈಗಾಗಲೇ ಬಹುತೇಕ ಭೂಮಿಯನ್ನು ಕೆ ಐ ಡಿ ಬಿ ವಶಪಡಿಸಿಕೊಳ್ಳುತ್ತಿದೆ. ಸಾಸಲು ಹೋಬಳಿಯಲ್ಲಿ ಮಾತ್ರ ಹೆಚ್ಚಿನ ಕೃಷಿ ಭೂಮಿಯಿದೆ. ಈಗ ಇಲ್ಲಿ ಜಲಾಶಯ ನಿರ್ಮಾಣ ಮಾಡಿದರೆ ಸಂಪೂರ್ಣ ಕೃಷಿ ಭೂಮಿ ನಾಶವಾಗಲಿದೆ.ಬೈರಗೊಂಡ್ಲು ಬಳಿ ಜಲಾಶಯ ನಿರ್ಮಾಣ ಮಾಡಲು ಹೊರಟಾಗ ಈ ಭಾಗದ ಹಳ್ಳಿಗಳು, ಜಮೀನುಗಳನ್ನು ಗ್ರಾಮಗಳನ್ನು ಸ್ವಾಧೀನಪಡಿಸಿಕೊಳ್ಳುವ ವಿಷಯ ತಿಳಿದಾಗಿನಿಂದಲೂ ರೈತರು ವಿರೋಧವಿದೆ. ಎತ್ತಿನಹೊಳೆ ಯೋಜನೆ ಜಲಾಶಯ ನಿರ್ಮಾಣ ಸಂಬಂಧ ಈ ಭಾಗದಲ್ಲಿ ಈ ಹಿಂದೆ ನಡೆಸಿರುವ ಅಷ್ಟೂ ಸಾರ್ವಜನಿಕ ಸಭೆಗಳಲ್ಲಿ ಗ್ರಾಮದ ಜನರು ಒಪ್ಪದೆ ವಿರೋಧ ವ್ಯಕ್ತಪಡಿಸುತ್ತಾ ಆಕ್ಷೇಪಣೆ ಸಲ್ಲಿಸುತ್ತಾ ಬಂದಿರುತ್ತಾರೆ.
ಎತ್ತಿನಹೊಳೆ ಯೋಜನೆಯ ಪೂರ್ವಾಪರದ ಬಗ್ಗೆಯಾಗಲಿ ಅದರ ಪ್ರಕ್ರಿಯೆಯ ಬಗ್ಗೆ ಜಲಾಶಯ ನಿರ್ಮಾಣ ಸಂಬಂಧ ಯಾವುದೇ ಮಾಹಿತಿಯನ್ನು ಸ್ಥಳೀಯರಿಗೆ ನೀಡದೆ ಯೋಜನೆಯನ್ನು ಮುಂದುವರೆಸಲು ಮುಂದಾಗಿರುವುದು ಕಾಕತಾಳೀಯ ಎನ್ನಬಹುದು.ಒಟ್ಟಾರೆ ಎತ್ತಿನಹೊಳೆ ಯೋಜನೆಯನ್ನು ಯಾರಿಗೂ ಸಮಸ್ಯೆಯಾಗದಂತೆ ಜನಸ್ನೇಹಿಯಾಗಿ ಅನುಷ್ಠಾನ ಮಾಡಬೇಕಾದ ಸವಾಲು ಸರ್ಕಾರ ಮತ್ತು ಅಧಿಕಾರಿಗಳ ಮುಂದಿದೆ.ಕೋಟ್‌ಗಳು.................
ಜಲಾಶಯ ನಿರ್ಮಾಣದಿಂದ ಪರಿಸರ, ಜೀವವೈವಿಧ್ಯತೆ ಪರಂಪರೆಗೆ ಧಕ್ಕೆಯಾಗುತ್ತದೆ. ನಮ್ಮ ಪೂರ್ವಿಕರ ಕಾಲದ ನೆನಪು, ಸಂಪ್ರದಾಯ, ಸಂಸ್ಕೃತಿ ಬದುಕಿನ ಭಾಗವಾಗಿದ್ದು, ನಮ್ಮ ಸಹಜ ಬದುಕಿನ ಹಕ್ಕಿಗೆ ಧಕ್ಕೆಯಾಗುವ ಹಿನ್ನಲೆ ಜಲಾಶಯ ನಿರ್ಮಾಣಕ್ಕೆ ನಮ್ಮ ವಿರೋಧವಿದೆ.- ಪ್ರಸನ್ನಕುಮಾರ್, ರೈತ, ಶ್ರೀರಾಮನಹಳ್ಳಿ
-------------------------------ಇತರೆಡೆ ಜಲಾಶಯ ನಿರ್ಮಾಣಕ್ಕೆ ಸೂಕ್ತ ಅವಕಾಶವಿದ್ದರೂ ನಿರ್ದಿಷ್ಟ ಗ್ರಾಮಗಳನ್ನೇ ಆಯ್ಕೆ ಮಾಡಿರುವುದು ಕಾನೂನು ಬಾಹಿರ. ನೂರಾರು ಕಿ.ಮೀ ದೂರದಿಂದ ನೀರು ತಂದು ದೊಡ್ಡಬಳ್ಳಾಪುರ ತಾಲೂಕಿನಲ್ಲೇ ಜಲಾಶಯ ನಿರ್ಮಾಣ ಮಾಡುವ ಪ್ರಸ್ತಾವನೆ ಹಿಂದೆ ರಾಜಕೀಯ ಷಡ್ಯಂತ್ರ ಇದೆ.
-ನರಸಿಂಹಗೌಡ, ವಕೀಲರು, ಶ್ರೀರಾಮನಹಳ್ಳಿ--------------------------------------------------
ಏಕಾಏಕಿ ಇವರು ಡ್ಯಾಂ ನಿರ್ಮಾಣ ಮಾಡಲು ಹೊರಟ್ಟಿದ್ದಾರೆ. ಫಲವತ್ತಾದ ಭೂಮಿ ಇದು 300 ಅಡಿಗೆ ಸಾಕಷ್ಟು ನೀರು ಸಿಗುತ್ತದೆ. ಅತಿ ಹೆಚ್ಚು ಅಡಿಕೆ ಬೆಳೆ ಇದೆ. ಪ್ರಾಣ ಹೋದರು ಸರಿ ಭೂಮಿ ಮಾತ್ರ ಬಿಡುವುದಿಲ್ಲ.-ರಾಮಣ್ಣ, ರೈತ, ದಾಸರಪಾಳ್ಯ
----------------------------------------2018 ರಲ್ಲೇ ಈ ಪ್ರಸ್ತಾವನೆ ಕಾರ್ಯಗತವಾಗಿದ್ದು ಈ ಭಾಗದಲ್ಲಿ ಜಲಾಶಯ ನಿರ್ಮಾಣದ ಕಾರ್ಯಕ್ಕೆ ತಮ್ಮ ವಿರೋಧವಿದೆ. ರೈತರ ಫಲವತ್ತಾದ ಭೂಮಿ, ಹುಟ್ಟಿ ಬೆಳೆದ ಗ್ರಾಮಗಳ ಭಾವನಾತ್ಮಕ ಪರಂಪರೆಯನ್ನು ನಾಶ ಮಾಡಿ ಜಲಾಶಯ ನಿರ್ಮಾಣ ಬೇಡ.
- ಧೀರಜ್ ಮುನಿರಾಜ್, ಶಾಸಕ, ದೊಡ್ಡಬಳ್ಳಾಪುರ1ಕೆಡಿಬಿಪಿ4- ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗುವ ಪ್ರದೇಶ.
--1ಕೆಡಿಬಿಪಿ5- ಗ್ರಾಮಸ್ಥರಿಂದ ಪತ್ರಿಕಾಗೋಷ್ಠಿ ಮೂಲಕ ಒಕ್ಕೊರಲ ವಿರೋಧ ಪ್ರಕಟ.