ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆ

KannadaprabhaNewsNetwork |  
Published : May 08, 2024, 01:04 AM IST
ಚಿತ್ರ: 7ಎಂಡಿಕೆ2 : ಕಸಾಪ ಸಂಸ್ಥಾಪನಾ ದಿನಾಚರಣೆ ಉದ್ಘಾಟನೆ ಸಂದರ್ಭ.  | Kannada Prabha

ಸಾರಾಂಶ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ಭಾನುವಾರ ಕರ್ನಾಟಕ ಸುವರ್ಣ ಸಂಭ್ರಮ: 50 ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ನಡೆಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ 110 ವರ್ಷಗಳ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ವಿಶೇಷ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆ ಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಇಂದಿನವರೆಗೂ ಹಲವು ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದ್ದಾರೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿಯಲ್ಲಿ ಭಾನುವಾರ ನಡೆದ ಕರ್ನಾಟಕ ಸುವರ್ಣ ಸಂಭ್ರಮ: 50 ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕನ್ನಡ ಭಾಷೆ, ಪ್ರದೇಶ, ಸಂಸ್ಕೃತಿ ಒಗ್ಗೂಡಿಸುವ, ಅದರ ಅಸ್ಮಿತೆಯನ್ನು ರಕ್ಷಿಸಿಕೊಳ್ಳುವ ದಿಸೆಯಲ್ಲಿ ಹಾಗೂ ಕನ್ನಡ ಕಟ್ಟುವ ಕಾರ್ಯಕ್ಕೆ ನೆರವಾಗಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಈ ವೇಳೆ ಪ್ರಮುಖವಾಗಿ ನೆನೆಯಬೇಕು ಎಂದು ರಮೇಶ್ ಹೇಳಿದರು.

ಕನ್ನಡ ನಾಡಿನಲ್ಲಿ ಕೈಗಾರಿಕೆ, ವಿದ್ಯೆ, ಕೃಷಿಗೆ ಆದ್ಯತೆ ನೀಡಿದ್ದ ಅವರು, ಮೈಸೂರು ಸಂಸ್ಥಾನದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂದು ಭದ್ರಾವತಿಯ ಕಾಗದದ ಕಾರ್ಖಾನೆ, ಶಿವನಸಮುದ್ರ ಜಲ ವಿದ್ಯುತ್ ಘಟಕ ಸ್ಥಾಪಿಸಿದರು. ರಾಜ್ಯದಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕೆಂಬ ಆಶಯದ ಫಲವಾಗಿ ಮೈಸೂರು ವಿಶ್ವವಿದ್ಯಾಲಯ ಆರಂಭ ಮಾಡಿದರು ಎಂದು ಸ್ಮರಿಸಿದರು.

ಕೊಡಗು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿಕೊಂಡ ಹಲವಾರು ಸಂಸ್ಥೆಗಳು

ಕನ್ನಡ ಭಾಷೆ, ಸಾಹಿತ್ಯ, ಪರಂಪರೆಗೆ ಶ್ರಮಿಸಿವೆ. ನಂತರ ದಿ.ಡಿ.ಜೆ.ಪದ್ಮನಾಭ ನೇತೃತ್ವದಲ್ಲಿ ಕೊಡಗಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದು 54 ವರ್ಷಗಳು ಸಂದಿವೆ. ಅಂದಿನಿಂದ ಜಿಲ್ಲೆಯಲ್ಲಿ ಪರಿಷತ್ತಿನ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಮುಖ್ಯ ಭಾಷಣ ಮಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಪರಂಪರೆ ರಕ್ಷಿಸಲು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ 1915ರಂದು ಕನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯಾಗಲು ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರವಾದುದು. ಒಡೆಯರ್ ಅವರ ಪ್ರಯತ್ನಕ್ಕೆ ಅಂದಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ.ವಿಶ್ವೇಶ್ವರಯ್ಯ ಹಾಗೂ ಮಿರ್ಜಾ ಇಸ್ಮಾಯಿಲ್ ಸಹಕಾರ ಕೂಡ ಗಣನೀಯವಾದುದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿಗೆ ತನ್ನದೇ ಆದ ಘನತೆ ಇದ್ದು, ಅದನ್ನು ಎತ್ತಿ ಹಿಡಿಯುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕೊಡಗಿನಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಪ್ರಗತಿಪಥದಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಆರ್.ನಗರ ತಾಲೂಕಿನ ಡೋರನಹಳ್ಳಿ

ಸಂತ ಅಂತೋಣಿ ಪ್ರೌಢಶಾಲೆ ಕನ್ನಡ ಅಧ್ಯಾಪಕ ವಿಲ್ಫ್ರೆಡ್ ಕ್ರಾಸ್ತಾ , ಮೈಸೂರು ಸಂಸ್ಥಾನದ ಮೂಲಕ ಕನ್ನಡ ನಾಡಿನ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕನ್ನಡ ಸೇವೆಯು ಅನುಕರಣೀಯ. ಕನ್ನಡ ನಾಡಿಗೆ ಒಡೆಯರ್ ಕೊಡುಗೆ ಅಪಾರ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಭಾಷೆ, ನಾಡು ನುಡಿ, ನೆಲ-ಜಲ, ರಕ್ಷಣೆಗೆ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ಕನ್ನಡನಾಡಿನ ಸಾಹಿತ್ಯ ದಿಗ್ಗಜರು‌ ನಾಡು- ನುಡಿ, ಸಂಸ್ಕೃತಿ ಬೆಳವಣಿಗೆಗೆ ಶ್ರಮಿಸಿದ್ದಾರೆ. ನಾವೆಲ್ಲರೂ ಜತೆಗೂಡಿ ಸಾಹಿತ್ಯ ಪರಿಷತ್ತನ್ನು‌ ಗಟ್ಟಿಗೊಳಿಸಬೇಕಿದೆ ಎಂದರು.

ಭಾರತ್ ಸ್ಕೌಟ್ಸ್, ಗೈಡ್ಸ್ ಜಿಲ್ಲಾ ಸಂಸ್ಥೆ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ, ಜಿಲ್ಲಾ ಲೇಖಕರು ಮತ್ತು ಕಲಾವಿದರ ಸಂಘದ ಅಧ್ಯಕ್ಷ ಲೋಕನಾಥ್ ಅಮೆಚೂರ್, ಮಡಿಕೇರಿ ತಾಲೂಕು ಕ.ಸಾ.ಪ.ಅಧ್ಯಕ್ಷೆ ಕಡ್ಲೇರ ತುಳಸಿ ಮಾತನಾಡಿದರು.

ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ರೇವತಿ ರಮೇಶ್, ಪದಾಧಿಕಾರಿಗಳಾದ ಎಂ.ಎನ್.ವೆಂಕಟನಾಯಕ್, ಎಚ್.ಎಸ್.ಪ್ರೇಮಕುಮಾರ್, ಪರಿಷತ್‌ ಮಾಜಿ ಗೌರವ ಕಾರ್ಯದರ್ಶಿ ಶ್ವೇತಾ ರವೀಂದ್ರ, ತಾಲೂಕು ಕ.ಸಾ.ಪ. ನಿಕಟ ಪೂರ್ವ ಅಧ್ಯಕ್ಷ ಅಂಬೇಕಲ್ ನವೀನ್, ಕಾರ್ಯದರ್ಶಿ ಬಾಳೆಯಡ ದಿವ್ಯ, ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕೃತರಾದ ಕಟ್ರತನ ಲಲಿತಾ ಅಯ್ಯಣ್ಣ, ಕಸಾಪ ಪರಿಷತ್ತಿನ ಸದಸ್ಯರಾದ ಕೆ.ಯು.ರಂಜಿತ್, ಕೆ.ವಿ.ಉಮೇಶ್, ಚೊಕ್ಕಾಡಿ ಪ್ರೇಮ ರಾಘವಯ್ಯ, ದಂಬೆಕೋಡಿ ನಿಖಿಲ್, ಅಬ್ದುಲ್ಲಾ, ಜಯಮ್ಮ, ಸೌಮ್ಯ,

ಕಚೇರಿ ವ್ಯವಸ್ಥಾಪಕಿ ರೇಣುಕ ಮತ್ತಿತರರು ಇದ್ದರು.

ಅಧ್ಯಾಪಕ ಮೆ.ನಾ.ವೆಂಕಟನಾಯಕ್ ನಿರ್ವಹಿಸಿದರು. ಸದಸ್ಯರಾದ ಪ್ರೇಮ ರಾಘವಯ್ಯ, ಸೌಮ್ಯ ಕನ್ನಡ ಗೀತೆ ಹಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ