ಬಿಸಿಲಿನ ಝಳ ತೀವ್ರತೆ ಹಿನ್ನೆಲೆ: ದ.ಕ. ಪದವಿ ತರಗತಿ ಬೇಗನೆ ಆರಂಭಕ್ಕೆ ಸೂಚನೆ

KannadaprabhaNewsNetwork |  
Published : May 08, 2024, 01:04 AM IST
11 | Kannada Prabha

ಸಾರಾಂಶ

ಕಾಲೇಜು ಶಿಕ್ಷಣ ಇಲಾಖೆ ಸುಪರ್ದಿಗೆ ದ.ಕ., ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಒಟ್ಟು 76 ಕಾಲೇಜುಗಳು ಒಳಗೊಳ್ಳುತ್ತವೆ. ಇದರಲ್ಲಿ 37 ಸರ್ಕಾರಿ ಹಾಗೂ 39 ಅನುದಾನಿತ ಕಾಲೇಜು ಸೇರಿದೆ. ಈ ಕಾಲೇಜುಗಳ ಪ್ರಾಂಶುಪಾಲರ ಜತೆ ಕಾಲೇಜು ಇಲಾಖೆ ಜಂಟಿ ನಿರ್ದೇಶಕರು ಸೋಮವಾರ ವಿಡಿಯೋ ಕಾನ್ಫರೆನ್ಸ್‌ ನಡೆಸಿದ್ದಾರೆ

ಕನ್ನಡಪ್ರಭ ವಾರ್ತೆ ಮಂಗಳೂರು

ಬೇಸಗೆ ಝಳದ ತೀವ್ರತೆ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಇದೇ ಮೊದಲ ಬಾರಿಗೆ ಪದವಿ ಕಾಲೇಜುಗಳ ತರಗತಿ ಆರಂಭವನ್ನು ಬೆಳಗ್ಗೆ ಬೇಗನೆ ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಸಾಮಾನ್ಯವಾಗಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ಧಗೆ ವಿಪರೀತ. ಹೀಗಾಗಿ ಅಲ್ಲಿ ಹೆಚ್ಚಾಗಿ ಶಾಲಾ ಕಾಲೇಜುಗಳ ತರಗತಿ ವೇಳಾಪಟ್ಟಿ ಬೆಳಗ್ಗೆ ಬೇಗನೆ ಇರುವುದು ಸಹಜ. ಆದರೆ ಕರಾವಳಿಯಲ್ಲಿ ಪ್ರಥಮ ಬಾರಿಗೆ ದ.ಕ.ಜಿಲ್ಲೆಯಲ್ಲಿ ತಾಪಮಾನದ ಏರಿಕೆ ಕಾರಣಕ್ಕೆ ಕಾಲೇಜುಗಳ ಆರಂಭದ ವೇಳೆಯನ್ನು ಬೇಗನೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ.

ಕರಾವಳಿಯಲ್ಲಿ ಕಳೆದ ಒಂದು ತಿಂಗಳಿಂದ ಭಾರಿ ಬಿಸಿಲ ಧಗೆ ಇದ್ದು, ಮೈಸುಡುವ ವಾತಾವರಣ ಇದೆ. ಪ್ರಸಕ್ತ ಪಿಯುಸಿ ವರೆಗೆ ರಜೆ ಇದ್ದರೂ ಪದವಿ ತರಗತಿಗಳು ನಡೆಯುತ್ತಿವೆ. ಉಷ್ಣತೆಯ ತಾಪಮಾನ ಹಿನ್ನೆಲೆಯಲ್ಲಿ ಪದವಿ ವಿದ್ಯಾರ್ಥಿಗಳ ತರಗತಿ ಅವಧಿಯನ್ನು ಬೇಗನೆ ಪ್ರಾರಂಭಿಸಬೇಕು, ಇಲ್ಲವೇ ರಜೆ ನೀಡುವಂತೆ ಪೋಷಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಕಾಲೇಜು ಶಿಕ್ಷಣ ಇಲಾಖೆ ಬೇಗನೆ ತರಗತಿ ಆರಂಭಿಸುವಂತೆ ಕ್ರಮ ಕೈಗೊಂಡಿದೆ. ಪ್ರಾಂಶುಪಾಲರ ವಿವೇಚನೆಗೆ:

ಕಾಲೇಜು ಶಿಕ್ಷಣ ಇಲಾಖೆ ಸುಪರ್ದಿಗೆ ದ.ಕ., ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಒಟ್ಟು 76 ಕಾಲೇಜುಗಳು ಒಳಗೊಳ್ಳುತ್ತವೆ. ಇದರಲ್ಲಿ 37 ಸರ್ಕಾರಿ ಹಾಗೂ 39 ಅನುದಾನಿತ ಕಾಲೇಜು ಸೇರಿದೆ. ಈ ಕಾಲೇಜುಗಳ ಪ್ರಾಂಶುಪಾಲರ ಜತೆ ಕಾಲೇಜು ಇಲಾಖೆ ಜಂಟಿ ನಿರ್ದೇಶಕರು ಸೋಮವಾರ ವಿಡಿಯೋ ಕಾನ್ಫರೆನ್ಸ್‌ ನಡೆಸಿದ್ದಾರೆ. ಬೆಳಗ್ಗೆ ಬೇಗನೆ ಕಾಲೇಜು ಆರಂಭಿಸುವ ಕುರಿತಂತೆ ನಿರ್ಧಾರವನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರ ವಿವೇಚನೆಗೆ ಬಿಡಲಾಗಿದೆ ಎಂದು ಸೂಚಿಸಿದ್ದಾರೆ. ಮಂಗಳವಾರದಿಂದಲೇ ಅನುಷ್ಠಾನಕ್ಕೆ ಸೂಚನೆ:

ಮಂಗಳೂರಿನ ಕಾರ್‌ಸ್ಟ್ರೀಟ್‌, ಉಡುಪಿಯ ಅಜ್ಜರಕಾಡು, ತೆಂಕನಿಡಿಯೂರು ಪದವಿ ಕಾಲೇಜುಗಳಲ್ಲಿ ಈಗಾಗಲೇ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ ವರೆಗೆ ತರಗತಿ ನಡೆಸುತ್ತಿದ್ದಾರೆ. ಕಾರ್‌ಸ್ಟ್ರೀಟ್‌ನಲ್ಲಿ ಮಧ್ಯಾಹ್ನ 2 ಗಂಟೆ ವರೆಗೆ ಬಿಕಾಂ ತರಗತಿ ನಡೆಸಲಾಗುತ್ತಿದೆ. ಸೈನ್ಸ್‌ ವಿದ್ಯಾರ್ಥಿಗಳಿಗೆ ಲ್ಯಾಬ್‌ ಇರುವಲ್ಲಿ ಬೇಗನೆ ತರಗತಿ ನಡೆಸಲು ಸಾಧ್ಯವಾಗುತ್ತಿಲ್ಲ. ಮೇ 7 ರಿಂದಲೇ ಪದವಿ ತರಗತಿ ಬೇಗನೆ ಆರಂಭಿಸುವಂತೆ ಎಲ್ಲ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ ಎಂದು ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಬಾಕ್ಸ್‌----

ವಿವಿ, ಸ್ವಾಯತ್ತೆ ಕಾಲೇಜುಗಳಿಗೆ ಅನ್ವಯ ಇಲ್ಲ

ಸುಡು ಬಿಸಿಲಿನ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಬೆಳಗ್ಗೆ ಬೇಗನೆ ತರಗತಿ ಆರಂಭ ಆದೇಶ ಮಂಗಳೂರು ವಿಶ್ವವಿದ್ಯಾಲಯ ಅಧೀನದ ಕಾಲೇಜುಗಳಿಗೆ ಅನ್ವಯಿಸುವುದಿಲ್ಲ. ಮಾತ್ರವಲ್ಲ ಸ್ವಾಯತ್ತ ಕಾಲೇಜುಗಳಿಗೂ ಅನ್ವಯವಾಗುವುದಿಲ್ಲ. ಹೀಗಾಗಿ ಬೇಗನೆ ತರಗತಿ ಆರಂಭಕ್ಕೆ ಇವು ಪ್ರತ್ಯೇಕವಾಗಿ ನಿರ್ಧಾರ ತೆಗೆದುಕೊಂಡು ಆದೇಶ ಹೊರಡಿಸಬೇಕಾಗುತ್ತದೆ. ಕ್ವೋಟ್‌---

ಸೋಮವಾರ ಪದವಿ ಕಾಲೇಜುಗಳ ಪ್ರಾಂಶುಪಾಲರುಗಳ ಜತೆ ವಿಡಿಯೋ ಕಾನ್ಫರೆನ್ಸ್‌ ನಡೆಸಲಾಗಿದೆ. ಬಿಸಿಲಿನ ಝಳ ವಿಪರೀತ ಇರುವುದರಿಂದ ತರಗತಿ ಬೇಗನೆ ಆರಂಭಿಸುವ ನಿರ್ಧಾರವನ್ನು ಆಯಾ ಕಾಲೇಜುಗಳ ಪ್ರಾಂಶುಪಾಲರ ಸುಪರ್ದಿಗೆ ಬಿಡಲಾಗಿದೆ.

-ಪ್ರೊ.ರಾಮೇ ಗೌಡ, ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ,ದ.ಕ.

-----------------

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ