ಕನ್ನಡಪ್ರಭ ವಾರ್ತೆ ಮೈಸೂರು
ರಂಗಾಯಣವು ಆಯೋಜಿಸಿದ್ದ ಚಿಣ್ಣರ ಮೇಳ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಮಂಗಳವಾರ ಬೆಳಗ್ಗೆ ಮಳಿಗೆ ತೆರೆದು ವಿವಿಧ ವಸ್ತುಗಳನ್ನು ಮಾರುವ ಮೂಲಕ ಸಂಭ್ರಮಿಸಿದರು.ಮಕ್ಕಳಿಗೆ ವ್ಯವಹಾರಿಕ ಜೀವನ ತಿಳಿಸಲು ಏರ್ಪಡಿಸಿದ್ದ ಚಿಣ್ಣರ ಸಂತೆಯಲ್ಲಿ 350 ಮಕ್ಕಳು ವಿವಿಧ ಮಳಿಗೆಗಳನ್ನು ತೆರೆದು ತಮ್ಮ ಚಾಕಚಕ್ಯತೆ ಮೂಲಕ ವ್ಯಾಪಾರ ಮಾಡಿ ಸಂತೆಯ ಅನುಭವ ಪಡೆದರು.
ಮಾವಿನಕಾಯಿ ಖರೀದಿಸುವ ಮೂಲಕ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಚಿಣ್ಣರ ಸಂತೆಗೆ ಚಾಲನೆ ನೀಡಿದರು. ನಂತರ ರಂಗಾಯಣದ ಆವರಣದಲ್ಲಿ ಚಿಣ್ಣರು ಸಂತೆಯಲ್ಲಿ ತೆರದಿದ್ದ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ, ತರಕಾರಿ ಕೆ.ಜಿ.ಗೆ ಎಷ್ಟು? ಕಡಿಮೆಗೆ ಕೊಟ್ಟರೆ ತಗೋತ್ತಿನಿ, ಇದು ಯಾವ ಹಣ್ಣು, ಸೊಪ್ಪು, ಹೆಸರು ಏನು? ಎಂದು ಮಕ್ಕಳೊಂದಿಗೆ ಬೆರೆತು ಸಂತೆ ಪೂರ್ತಿ ಸಂಚರಿಸಿ, ಕೆಲವು ಪದಾರ್ಥಗಳನ್ನು ಖರೀದಿಸುವ ಮೂಲಕ ಗಮನ ಸೆಳೆದರು.ಇದೇ ವೇಳೆ ಚಿಣ್ಣರ ಮೇಳದಲ್ಲಿ ಪಾಲ್ಗೊಂಡಿದ್ದ ತಮ್ಮ ಪುತ್ರಿ ಆಧೃತಿ ತೆರೆದಿದ್ದ ಸ್ವೀಟ್ ಕಾರ್ನ್ ಮಳಿಗೆ ಭೇಟಿ ನೀಡಿ, ಸ್ವೀಟ್ ಕಾರ್ನ್ ಖರೀದಿಸುವ ಮೂಲಕ ಖುಷಿ ಪಟ್ಟರು.
ರೈತ ವೇಷ ತೊಟ್ಟು ಸೊಪ್ಪು ಮಾರಾಟ, ಬಿಸಿಲಿಗೆ ತಕ್ಕಂತೆ ದೇಹ ತಂಪು ಮಾಡಲು ಮಜ್ಜಿಗೆ, ಪಾನಕ, ಬಾಯಿ ಚಪ್ಪರಿಸಲು ಚಿರುಮುರಿ, ಸಂಡಿಗೆ, ರವೆ ಉಂಡೆ, ತರಕಾರಿ ಅಂಗಡಿ, ಮಕ್ಕಳು ಸ್ವತಃ ಮಾಡಿದ ಕರಕುಶಲ ವಸ್ತುಗಳು, ನೀರಿನಲ್ಲಿ ಕಾಯಿನ್ ಹಾಕುವ ಆಟ, ಬಾತು, ಪುಳಿಯೋಗರೆ ಸೇರಿದಂತೆ ಅನೇಕ ಮಳಿಗೆಗಳು ಚಿಣ್ಣರ ಸಂತೆಯಲ್ಲಿ ನೋಡುಗರ ಗಮನ ಸೆಳೆಯಿತು.ಈ ವೇಳೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮಾತನಾಡಿ, ಮಕ್ಕಳಿಗೆ ವ್ಯಾವಹಾರಿಕ ಜೀವನದ ಪರಿಚಯಿಸಲು ರಂಗಾಯಣ ಚಿಣ್ಣರ ಸಂತೆ ಏರ್ಪಡಿಸಿರುವುದು ಉತ್ತಮ ಕಾರ್ಯವಾಗಿದ್ದು, ಇದರಿಂದ ಮಕ್ಕಳಿಗೆ ತಮ್ಮ ತಂದೆ- ತಾಯಿ ಎಷ್ಟು ಕಷ್ಟ ಪಡುತ್ತಾರೆಂದು ತಿಳಿಯುತ್ತದೆ ಎಂದರು. ಈ ಬಾರಿಯ ಚಿಣ್ಣರ ಮೇಳದಲ್ಲಿ ಮಕ್ಕಳ ಶ್ರಮ ಸಂತೆಯ ಮೂಲಕ ತಿಳಿಯುತ್ತಿದೆ. ಎಲ್ಲಾ ಮಕ್ಕಳು ಅಚ್ಚುಕಟ್ಟಾಗಿ ವ್ಯಾಪಾರ ಮಾಡಲು ಸಿದ್ಧತೆ ಮಾಡಿಕೊಂಡು ಬಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಶಿಬಿರದ ಸಂಚಾಲಕಿ ಗೀತಾ ಮೋಂಟಡ್ಕ ಮೊದಲಾದವರು ಇದ್ದರು.