ಶ್ರೀಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗಳ 117ನೇ ಜಯಂತಿ ಆಚರಣೆ

KannadaprabhaNewsNetwork | Published : Apr 2, 2024 1:04 AM

ಸಾರಾಂಶ

ಸಿದ್ಧಗಂಗ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಹಾಗೂ ಅನ್ನದಾನ ನೀಡಿದವರು. ಶ್ರೀಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ. ತ್ರಿವಿಧ ದಾಸೋಹಿಗಳಾಗಿ ಅಕ್ಷರ, ಅನ್ನ, ವಸತಿದಾಸೋಹದ ಮೂಲಕ ಲಕ್ಷಾಂತರ ಬಡ ಜನರಿಗೆ ನಡೆದಾಡುವ ದೇವರಾದರು. ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಿ ಗೌರವಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಂಡ್ಯ ರಕ್ಷಣಾ ವೇದಿಕೆಯಿಂದ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಶ್ರೀಸಿದ್ಧಗ ಶಿವಕುಮಾರ ಸ್ವಾಮೀಜಿಗಳ 117 ನೇ ಜಯಂತಿ ಆಚರಿಸಲಾಯಿತು.

ತಾಲೂಕಿನ ಬಾಬುರಾಯನ ಕೊಪ್ಪಲು ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆ ಎದುರು ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ನೇತೃತ್ವದಲ್ಲಿ ಸಿದ್ಧಗಂಗಾ ಮಠದ ಲಿಂಗೈಕ್ಯ ಶ್ರೀಶಿವಕುಮಾರ ಸ್ವಾಮೀಜಿಗಳ ಭಾವ ಚಿತ್ರ ಇರಿಸಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಭಕ್ತರು ಹಾಗೂ ರಸ್ತೆ ಬದಿ ಇರುವ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.

ಬ್ಯಾಂಕ್ ಆಫ್ ಬರೋಡಾ ಶಾಖೆ ವ್ಯವಸ್ಥಾಪಕ ವಿನಯ್ ಕುಮಾರ್ ಮಾತನಾಡಿ, ಸಿದ್ಧಗಂಗ ಶ್ರೀಗಳು ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಹಾಗೂ ಅನ್ನದಾನ ನೀಡಿದವರು. ಶ್ರೀಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ ಎಂದರು.

ನಂತರ ವೇದಿಕೆ ಸಂಸ್ಥಾಪಕ ಶಂಕರ್ ಬಾಬು ಮಾತನಾಡಿ, ರಾಜ್ಯ ಮತ್ತು ಜಿಲ್ಲೆಯಲ್ಲಿ ಮಳೆ ಇಲ್ಲದೆ ಜನ-ಜಾನುವಾರುಗಳಿಗೆ ನೀರಿಲ್ಲದೆ ಸಂಕಷ್ಟಕ್ಕೆ ಗುರಿಯಾಗುತ್ತಿದ್ದೇವೆ. ಬೆಳೆಗಳು ಒಣಗುತ್ತಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಅಗತ್ಯವಿದೆ. ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡುವಂತಾಗಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ವೇದಿಕೆ ರಾಜ್ಯ ಸಂಚಾಲಕ ಕಾರ್ಯದರ್ಶಿ ಜಗದೀಶ್ ಗೌಡ, ಭಾಗ್ಯಮ್ಮ, ವೀಣಾ ಬಾಯಿ, ಬಸವೇಗೌಡ, ಕುಮಾರಣ್ಣ, ಶಂಕರೇಗೌಡ, ಮನೋಜ್, ಧನುಷ್, ಮರಿಗೌಡ, ರಂಗೇಗೌಡ, ಕಿರಂಗೂರು ಶ್ರೀನಿವಾಸ್ ಸೇರಿದಂತೆ ಇತರ ಆಟೋ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಜನಸಾಮಾನ್ಯರ ಸಂತ ಸಿದ್ಧಗಂಗಾಶ್ರೀಗಳ ಸ್ಮರಣೆ

ಕಿಕ್ಕೇರಿ:ಜನಸಾಮಾನ್ಯರ ಸಂತರಾಗಿ, ಜನತೆಗೆ ಬೇಕಾದ ಅವಶ್ಯಕತೆ ನೀಡಿದ ಸಿದ್ದಗಂಗಾಶ್ರೀ ಎಂದು ಗೋವಿಂದನಹಳ್ಳಿ ಗ್ರಾಮಸ್ಥರು ಸ್ಮರಿಸಿದರು.

ಗ್ರಾಮದಲ್ಲಿ ನಡೆದ ಸಿದ್ಧಗಂಗಾ ಶಿವಕುಮಾರಸ್ವಾಮಿಗಳ 117ನೇ ಜಯಂತಿ ಅಂಗವಾಗಿ ಕೆಲಹೊತ್ತು ಸಿದ್ಧಗಂಗಾಶ್ರೀ, ಬಸವಣ್ಣರ ಕುರಿತು ಭಜನೆ ಮಾಡಿದರು. ಸಿದ್ಧಗಂಗಾಶ್ರೀಗಳ ಭಾವಚಿತ್ರಕ್ಕೆ ಪುಷ್ಪಗಳಿಂದ ಅಲಂಕಾರ ಮಾಡಿ, ಆರತಿ ಬೆಳಗಿದರು.ತ್ರಿವಿಧ ದಾಸೋಹಿಗಳಾಗಿ ಅಕ್ಷರ, ಅನ್ನ, ವಸತಿದಾಸೋಹದ ಮೂಲಕ ಲಕ್ಷಾಂತರ ಬಡ ಜನರಿಗೆ ನಡೆದಾಡುವ ದೇವರಾದರು. ಶ್ರೀಗಳಿಗೆ ಕೇಂದ್ರ ಸರ್ಕಾರ ಭಾರತರತ್ನ ನೀಡಿ ಗೌರವಿಸಬೇಕು ಎಂದು ಆಗ್ರಹಿಸಿದರು.

ಆಧುನಿಕ ಬಸವಣ್ಣನವರಾದ ಶ್ರೀಗಳು ರಾಜಕೀಯ ಮುಕ್ತ ಸಂತರಾಗಿದ್ದು ಇವರ ಆಶ್ರಯದಲ್ಲಿ ಬೆಳೆದ ಸಹಸ್ರಾರು ಮಕ್ಕಳು ಉನ್ನತ ಪದವಿ, ಸಂಸ್ಕಾರವಂತರಾಗಿ ನಾಡಿನಲ್ಲಿ ಬಾಳುತ್ತಿರುವುದು ನಾಡಿನ ಸುದೈವ ಎಂದು ಗ್ರಾಮಸ್ಥರು ಸ್ಮರಿಸಿದರು. ಶ್ರೀಗಳ ಭಾವಚಿತ್ರಕ್ಕೆ ಪುಷ್ಪಗಳಿಂದ ಅಲಂಕರಿಸಿ ಪುಷ್ಪ ನಮನ ಸಲ್ಲಿಸಿ, ಸಾಮೂಹಿಕ ಅನ್ನದಾಸೋಹ ನಡೆಯಿತು.

Share this article