ಕನ್ನಡಪ್ರಭ ವಾರ್ತೆ ಹನೂರು
ಕಾರ್ಯಕ್ರಮದ ಪ್ರಾರಂಭದಲ್ಲಿ ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಗೌರವಿಸಲಾಯಿತು.
ಬಳಿಕ ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್ ಮಾತನಾಡಿ, ಸಿದ್ದಗಂಗಾ ಕ್ಷೇತ್ರದಲ್ಲಿ ಸಿದ್ಧಪುರುಷನಾಗಿ ನಡೆದಾಡುವ ದೇವರೆನಿಸಿಕೊಂಡು ಜಾತಿ, ಧರ್ಮ, ವರ್ಗಗಳಲ್ಲಿ ತಾರತಮ್ಯ ಮಾಡದೆ ಎಲ್ಲಾ ಧರ್ಮವರು ನಮ್ಮವರೇ ಎಂಬ ಭಾವನೆಯಿಂದ ಮಠವನ್ನು ಮುನ್ನಡೆಸಿ, ಅವತಾರ ಪುರುಷರಾದರು. ತ್ರಿವಿಧ ದಾಸೋಹದ ಮಹತ್ವವನ್ನು ವಿಶ್ವಕ್ಕೆ ಸಾರಿದ ಮಹಾಪುರುಷರೆಂದು ಹೇಳಿದರು.ಅವರು ಅತ್ಯಂತ ಸರಳ ಸ್ವಭಾವ, ಮಿತಭಾಷಿ ನಡೆನುಡಿಯಿಂದ ಹಸಿದ ಹೊಟ್ಟೆ ಮತ್ತು ನೊಂದ ಮನಸ್ಸುಗಳಿಗೆ ಮಾತೃ ಪ್ರೇಮದ ಸಿಂಚನ ನೀಡಿದ್ದರು. ಮಠದಲ್ಲಿನ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮನಾಗರಿಕರಾಗಿ ಬೆಳೆಯಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಚಿಂತನೆಯಿಂದ ಮಠದಲ್ಲಿ ನೀಡುತ್ತಿದ್ದ ಶಿಕ್ಷಣದಲ್ಲಿ ಅತಿ ಹೆಚ್ಚು ಶಿಸ್ತು ಪಾಲನೆ ಮಾಡಲು ಸೂಚಿಸುತ್ತಿದ್ದರು ಎಂದು ತಿಳಿಸಿದರು.
ಈ ವೇಳೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ಪಾನಕವನ್ನು ವಿತರಿಸಲಾಯಿತು. ವೀರಶೈವ ಮಹಾಸಭಾದ ಅಧ್ಯಕ್ಷ ಒಡಯರಪಾಳ್ಯ ಸೋಮಶೇಖರ್, ಮಾಜಿ ಅಧ್ಯಕ್ಷ ಬಸವರಾಜಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಚಂಗವಾಡಿ ರಾಜು, ಸ್ಥಳೀಯರಾದ ನಾಗೇಂದ್ರ, ಬಂಡಳ್ಳಿ ಶಂಕ್ರಪ್ಪ ಇನಿತರರು ಹಾಜರಿದ್ದರು.