ಶಕ್ತಿ ಯೋಜನೆ ರಾಜ್ಯದ ಅನೇಕ ಮಹಿಳೆಯರಿಗೆ ಸಹಕಾರಿಯಾಗಿದೆ. ರಾಜ್ಯಾದ್ಯಂತ ಶಕ್ತಿ ಯೋಜನೆಯಡಿ 500 ಕೋಟಿಗೂ ಹೆಚ್ಚು ಮಹಿಳಾ ಟಿಕೆಟ್ ವಿತರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯಾದ್ಯಂತ ಪಂಚ ಗ್ಯಾರಂಟಿಗಳು ಎರಡು ವರ್ಷಗಳನ್ನು ಪೂರೈಸಿದ್ದು, ಶಕ್ತಿ ಯೋಜನೆ ಒಂದಕ್ಕೆ 12,800 ಕೋಟಿ ರು. ಅನುದಾನವನ್ನು ನೀಡಲಾಗಿದೆ ಎಂದು ಶಾಸಕ ಪಿ. ರವಿಕುಮಾರ್ ಅವರು ತಿಳಿಸಿದರು.ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಸಾರಿಗೆ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ಧಿ ಕಾರ್ಯಕ್ರಮಗಳ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.ಶಕ್ತಿ ಯೋಜನೆ ರಾಜ್ಯದ ಅನೇಕ ಮಹಿಳೆಯರಿಗೆ ಸಹಕಾರಿಯಾಗಿದೆ. ರಾಜ್ಯಾದ್ಯಂತ ಶಕ್ತಿ ಯೋಜನೆಯಡಿ 500 ಕೋಟಿಗೂ ಹೆಚ್ಚು ಮಹಿಳಾ ಟಿಕೆಟ್ ವಿತರಿಸಲಾಗಿದೆ. ಇದೊಂದು ಐತಿಹಾಸಿಕ ದಾಖಲೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚ ಗ್ಯಾರಂಟಿಗಳು ರಾಜ್ಯದ ಎಷ್ಟೋ ಕುಟುಂಬಗಳಿಗೆ ಆಸರೆಯಾಗಿದೆ. ಗೃಹಿಣಿಯರು ಗೃಹಲಕ್ಷ್ಮಿ ಹಣ ಶೇಖರಿಸಿ ಹಸು, ಅಂಗಡಿ, ಲೈಬ್ರರಿ ಮತ್ತು ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಗೆ ಹಾಗೂ ಮುಂತಾದ ಕಾರಣಗಳಿಗೆ ಸಮರ್ಪಕವಾಗಿ ಉಪಯೋಗಿಸಿಕೊಂಡಿದ್ದಾರೆ ಎಂದರು.ರಾಜ್ಯ ಸರ್ಕಾರದ ಮೂಲ ಉದ್ದೇಶ ಬಡ ಜನರ ಜೀವನ ಮಟ್ಟವನ್ನು ಸುಧಾರಿಸುವುದು. ಆದ್ದರಿಂದಲೇ ಪಂಚ ಗ್ಯಾರಂಟಿಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಯಿತು ಎಂದು ಹೇಳಿದರು.ವಸ್ತು ಪ್ರದರ್ಶನ ಉದ್ಘಾಟನೆ:ಶಾಸಕ ಪಿ.ರವಿಕುಮಾರ್ ಅವರು ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ಧಿ ಕಾರ್ಯಕ್ರಮಗಳ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಉದ್ಘಾಟಿಸಿ ವಸ್ತು ಪ್ರದರ್ಶನದ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು. ನಂತರ ಫಲಾನುಭವಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. ಪ್ರಯಾಣಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.ನಂತರ ಶಕ್ತಿ ಯೋಜನೆಯಡಿ ರಾಜ್ಯದಾದ್ಯಂತ 500 ಕೋಟಿಗೂ ಹೆಚ್ಚು ಮಹಿಳಾ ಟಿಕೆಟ್ ವಿತರಿಸಿರುವ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಶಾಸಕ ಪಿ. ರವಿಕುಮಾರ್ ಅವರು ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ವಿತರಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಿಕ್ಕಲಿಂಗಯ್ಯ, ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪ್ರಶಾಂತ್ ಬಾಬು, ಮಂಡ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರುದ್ರಪ್ಪ, ವಿಭಾಗೀಯ ಸಂಚಾರಾಧಿಕಾರಿ ಪರಮೇಶ್ವರಪ್ಪ, ಡಿಪೋ ಮ್ಯಾನೇಜರ್ ರಘು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
೧೪ಕೆಎಂಎನ್‌ಡಿ-೧೦ಮಂಡ್ಯದ ಸಾರಿಗೆ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಸರ್ಕಾರದ ಎರಡು ವರ್ಷಗಳ ಅಭಿವೃದ್ಧಿ ಕಾರ್ಯಕ್ರಮಗಳ ಸಾಧನೆ ಹಾಗೂ ಪಂಚ ಗ್ಯಾರಂಟಿ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.