ಬಿಸಿಯೂಟ ಸೇವಿಸಿ 12 ಮಕ್ಕಳು ಅಸ್ವಸ್ಥ

KannadaprabhaNewsNetwork |  
Published : Jul 14, 2026, 04:15 AM IST
ಪೊಟೋ ಜು.13ಎಂಡಿಎಲ್ 1ಎ,1ಬಿ,1ಸಿ. ಮುಧೋಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲವಾಗಿರುವ ಶಾಲಾ ಮಕ್ಕಳ ಆರೋಗ್ಯ ವಿಚಾರಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುಧೋಳಮಧ್ಯಾಹ್ನದ ಬಿಸಿಯೂಟದ ನಂತರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್.ಕೆ.ಜಿ ವಿದ್ಯಾರ್ಥಿಗಳಲ್ಲಿ ಶಂಕಿತ ಆಹಾರ ಮತ್ತು ಕುಡಿಯುವ ನೀರಿನ ವಿಷಬಾಧೆ ಸಂಭವಿಸಿರುವುದರ ಕಾರಣ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಮುಗಳಖೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಮುಧೋಳ

ಮಧ್ಯಾಹ್ನದ ಬಿಸಿಯೂಟದ ನಂತರ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್.ಕೆ.ಜಿ ವಿದ್ಯಾರ್ಥಿಗಳಲ್ಲಿ ಶಂಕಿತ ಆಹಾರ ಮತ್ತು ಕುಡಿಯುವ ನೀರಿನ ವಿಷಬಾಧೆ ಸಂಭವಿಸಿರುವುದರ ಕಾರಣ 12ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲೂಕಿನ ಮುಗಳಖೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

ಶಾಲೆಯ 270ಕ್ಕೂ ಹೆಚ್ಚು ವಿದ್ಯಾರ್ಥಿಗಳು ಊಟ ಮಾಡಿದ ಬಳಿಕ ಎಲ್‌ಕೆಜಿ ಮತ್ತು ಯುಕೆಜಿ ಮಕ್ಕಳಿಗೆ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿತು. ತೀವ್ರ ಅಸ್ವಸ್ಥರಾದ 12 ಮಕ್ಕಳನ್ನು ಮುಧೋಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, 12 ವಿದ್ಯಾರ್ಥಿಗಳ ಪೈಕಿ ಮೂವರ ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮುಧೋಳ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲೆಯಾಗಿರುವ ಅಸ್ಪಸ್ಥ ಶಾಲಾ ವಿದ್ಯಾರ್ಥಿಗಳಿಗೆ ಆಸ್ಪತ್ರೆಯ ವೈದ್ಯ ಡಾ.ದೀಪಕ ಮಾಸರಡ್ಡಿ ಸೇರಿದಂತೆ ಇತರೆ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.

ಸುದ್ದಿ ತಿಳಿದ ತಾಲೂಕು ಮಟ್ಟದ ಅಧಿಕಾರಿಗಳಾದ ತಹಸೀಲ್ದಾರ್‌ ಡಾ.ಚಿಕ್ಕಪ್ಪ ನಾಯಕ, ತಾಪಂ ಇಒ ರಾಘವೇಂದ್ರ ಕಳ್ಳಿಮನಿ, ತಾಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಬಿಇಒ ಸಮೀರ್‌ ಮುಲ್ಲಾ, ಪಿಸಿಎಸ್ ಅಜೀತಕುಮಾರ ಹೊಸಮನಿ, ಶಾಸಕ ಆರ್.ಬಿ.ತಿಮ್ಮಾಪೂರ ಸಹೋದರ ಹಣಮಂತ ತಿಮ್ಮಾಪೂರ ತಕ್ಷಣವೇ ಆಸ್ಪತ್ರೆಗೆ ಆಗಮಿಸಿ, ಮಕ್ಕಳ ಆರೋಗ್ಯ ವಿಚಾರಿಸಿದರು.

ಸಹಾಯಕ ಆಯುಕ್ತರ ನೇತೃತ್ವದಲ್ಲಿ ತನಿಖಾ ಸಮಿತಿ

ಘಟನೆಯ ಗಂಭೀರತೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಧಿಕಾರಿಗಳು ಜಮಖಂಡಿ ಉಪವಿಭಾಗದ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ 8 ಅಧಿಕಾರಿಗಳ ತನಿಖಾ ಸಮಿತಿ ರಚಿಸಿದ್ದಾರೆ. ತಹಸೀಲ್ದಾರ್, ಜಿಲ್ಲಾ ಆರೋಗ್ಯಾಧಿಕಾರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಆಹಾರ ಸುರಕ್ಷತಾ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ಸಮಿತಿಯಲ್ಲಿ ಮುಧೋಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸಮಿತಿಯು 24 ಗಂಟೆಯೊಳಗೆ ಪ್ರಾಥಮಿಕ ವರದಿ ಹಾಗೂ 3 ದಿನಗಳೊಳಗೆ ಅಂತಿಮ ವರದಿ ಸಲ್ಲಿಸಬೇಕು. ಆಹಾರ ಮತ್ತು ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕರ್ತವ್ಯ ಲೋಪ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

ಘಟನೆ ದುರದೃಷ್ಟಕರ, ನಡೆಯಬಾರದಾಗಿತ್ತು. ಇಂತಹ ಘಟನೆ ಮರುಕಳಿಸಬಾರದು. ಈ ಕುರಿತು ತನಿಖೆ ನಡೆಸುವಂತೆ ಡಿಸಿ ಮತ್ತು ಡಿಎಚ್ಒ ಅವರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಸಮಗ್ರ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದೇನೆ.

-ಆರ್.ಬಿ.ತಿಮ್ಮಾಪೂರ, ಶಾಸಕರು, ಮುಧೋಳ.

ಎಲ್ಲ ಮಕ್ಕಳು ಆರೋಗ್ಯಯುತವಾಗಿದ್ದು, ಅಗತ್ಯ ಚಿಕಿತ್ಸೆ ನೀಡುವ ಮೂಲಕ ಮುನ್ನೆಚ್ಚರಿಕೆ ವಹಿಸಲಾಗಿದೆ. ಪಾಲಕರು ಹಾಗೂ ಶಿಕ್ಷಕರು ಆತಂಕ ಪಡುವುದು ಬೇಡ. ಮತ್ತೊಮ್ಮೆ ಪರೀಕ್ಷೆ ಮಾಡಿ ಡಿಸ್ಚಾರ್ಜ್ ಮಾಡಲಾಗುವುದು.

-ಡಾ.ದೀಪಕ ಮಾಸರಡ್ಡಿ, ಆಸ್ಪತ್ರೆಯ ವೈದ್ಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘದ ಹಣ ದುರುಪಯೋಗ: ಕಚೇರಿಗೆ ಮಹಿಳೆಯರ ಮುತ್ತಿಗೆ
ಬಂಥನಾಳ–ಲಚ್ಯಾಣ ಪೀಠದ ಉತ್ತರಾಧಿಕಾರಿ ಆಯ್ಕೆಗೆ ಭಕ್ತರ ಸಭೆ