ಚಿರತೆ ದಾಳಿಗೆ 12 ಮೇಕೆಗಳು ಬಲಿ: ಹೆದ್ದಾರಿಯಲ್ಲಿ ಶವಗಳನ್ನು ಇಟ್ಟು ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork |  
Published : Jul 16, 2025, 12:45 AM IST
15ಕೆಎಂಎನ್ ಡಿ15 | Kannada Prabha

ಸಾರಾಂಶ

ಚಿರತೆ ದಾಳಿಯಿಂದ 12 ಮೇಕೆಗಳು ಬಲಿಯಾಗಿದ್ದರೂ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸದ ಹಿನ್ನೆಲೆಯಲ್ಲಿ ಪಾಂಡವಪುರ ತಾಲೂಕಿನ ಟಿ.ಎಸ್.ಛತ್ರ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಹೆದ್ದಾರಿಯಲ್ಲಿ ಬಲಿಯಾದ ಮೇಕೆಗಳೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಚಿರತೆ ದಾಳಿಯಿಂದ 12 ಮೇಕೆಗಳು ಬಲಿಯಾಗಿದ್ದರೂ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸದ ಹಿನ್ನೆಲೆಯಲ್ಲಿ ತಾಲೂಕಿನ ಟಿ.ಎಸ್.ಛತ್ರ ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಹೆದ್ದಾರಿಯಲ್ಲಿ ಬಲಿಯಾದ ಮೇಕೆಗಳೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಮಾಯಿಗೌಡರಿಗೆ ಸೇರಿದ ಮೇಕೆಗಳನ್ನು ದನದ ಕೊಟ್ಟಿಗೆಯಲ್ಲಿ ಕಟ್ಟು ಹಾಕಿದ್ದರು. ಚಿರತೆ ದಾಳಿ ಮಾಡಿ 12 ಮೇಕೆಗಳನ್ನು ಕೊಂದು ಪರಾರಿಯಾಗಿದೆ. ಇದರಿಂದ ಲಕ್ಷಾಂತರ ರು. ನಷ್ಟವಾಗಿದೆ. ಮುಂಜಾನೆ ಮಾಯಿಗೌಡರು ಮೇಕೆಗಳನ್ನು ಜಮೀನಿನ ಬಳಿ ತೆರಳಿ ಬಳಿಕ ಆಡುಗಳನ್ನು ಮೇಯಿಸಲು ಹೊಡೆದುಕೊಂಡು ಹೋಗಲೆಂದು ದನದ ಕೊಟ್ಟಿಗೆ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.

ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ, ಅರಣ್ಯಾಧಿಕಾರಿಗಳು ಮಧ್ಯಾಹ್ನವಾದರು ಸ್ಥಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮೃತಪಟ್ಟ ಆಡುಗಳನ್ನು ಶ್ರೀರಂಗಪಟ್ಟಣ-ಜೇವರ್ಗಿ ಹೆದ್ದಾರಿ ಮಧ್ಯೆ ಇಟ್ಟು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಚಿರತೆಗಳ ಹಾವಳಿ ದಿನೇದಿನೇ ಹೆಚ್ಚಾಗುತ್ತಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಟಿ.ಎಸ್.ಛತ್ರ ಪಕ್ಕದ ಇಂಗಲಕುಪ್ಪೆ ಗ್ರಾಮದಲ್ಲಿ ಕೊಟ್ಟಿಗೆ ಮೇಲೆ ಚಿರತೆ ದಾಳಿ ನಡೆಸಿ ಮೂರು ಆಡುಗಳನ್ನು ಕೊಂದು ಪರಾರಿಯಾಗಿತ್ತು. ಆದರೆ, ಅರಣ್ಯಾಧಿಕಾರಿಗಳು ಚಿರತೆಯ ಸೆರೆಗೆ ಯಾವುದೇ ಕ್ರಮ ಜರುಗಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆ ನಡೆದು ಮೂರೇ ದಿನಕ್ಕೆ ಮತ್ತೆ ಪಕ್ಕದ ಗ್ರಾಮದಲ್ಲಿ ಘಟನೆ ನಡೆದಿದೆ. ಈ ಘಟನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣವಾಗಿದೆ. ಘಟನೆಯಿಂದ ರೈತ ಮಾಯಿಗೌಡರಿಗೆ ಲಕ್ಷಾಂತರ ರು.ನಷ್ಟ ಉಂಟಾಗಿದೆ. ಹಾಗಾಗಿ ಸಂಬಂಧಿಸಿದ ಅರಣ್ಯ ಇಲಾಖೆ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತ ಮಾಯಿಗೌಡ ಅವರಿಗೆ ಸೂಕ್ತಪರಿಹಾರ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.

ಗ್ರಾಮಸ್ಥರ ಪ್ರತಿಭಟನೆಯಿಂದಾಗಿ ಶ್ರೀರಂಗಪಟ್ಟಣ- ಜೇವರ್ಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ಥವ್ಯಸ್ಥ ಉಂಟಾಯಿತು. ಕೆಲಕಾಲ ವಾಹನ ಸವಾರರು ಪರದಾಟ ನಡೆಸಿದರು.

ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಿಕೊಡುವ ಜತೆಗೆ ಚಿರತೆ ಸೆರೆಗೆ ಬೋನ್ ಹಾಕಲಾಗುವುದು ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

ಪ್ರತಿಭಟನೆಯಲ್ಲಿ ಟಿ.ಎಸ್.ಛತ್ರ, ಇಂಗಲಕುಪ್ಪೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಜರಿದ್ದರು.

PREV

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ