ಹಂದಿಗೋಡಿನ ಮಾತಾನುಗ್ರಹ ಧ್ಯಾನಕೇಂದ್ರದಲ್ಲಿ ಮನೆ ಮದ್ದು ಪಾರಂಪರಿಕ ವೈದ್ಯ ಪದ್ಧತಿ ಕುರಿತ ಕಾರ್ಯಕ್ರಮ
ಮನೆ ಮದ್ದು ಪಾರಂಪರಿಕ ವೈದ್ಯ ಎನ್ನುವುದು ಸುಲಭವಾಗಿ ನಾವು ತತ್‌ಕ್ಷಣಕ್ಕೆ ಸಿದ್ಧಪಡಿಸಿಕೊಳ್ಳಬಹುದಾದ ಔಷಧಿಗಳಾಗಿರುತ್ತವೆ. ಋಷಿಮುನಿಗಳಿಂದ ಮನೆಯ ಹಿರಿಯರಿಂದ ನಮಗೆ ಬಳುವಳಿಯಾಗಿ ಬಂದಿರುವ ಮನೆಮದ್ದು ಪಾರಂಪರಿಕ ವೈದ್ಯ ಜ್ಞಾನವನ್ನು ಮುಂದಿನ ಪೀಳಿಗೆಗೂ ಉಳಿಸುವ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶ್ರೀ ಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನದ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಭಂಡಿಗಡಿ ಎಂದು ಹೇಳಿದರು.
ಶ್ರೀ ಸೂರ್ಯನಾರಾಯಣ ಪಾರಂಪರಿಕ ವೈದ್ಯ ಪ್ರತಿಷ್ಠಾನ ಭಂಡಿಗಡಿ ಹಾಗೂ ಶ್ರೀ ಧನ್ವಂತರಿ ಸಂಜೀವಿನಿ ಪ್ರತಿಷ್ಠಾನದ ಆಶ್ರಯದಲ್ಲಿ ಭಂಡಿಗಡಿ ಹಂದಿಗೋಡಿನ ಮಾತಾನುಗ್ರಹ ಧ್ಯಾನಕೇಂದ್ರದಲ್ಲಿ ಮನೆ ಮದ್ದು ಪಾರಂಪರಿಕ ವೈದ್ಯ ಪದ್ಧತಿ ಕುರಿತು ಮಾತನಾಡಿದರು.ನಮ್ಮ ಪರಿಸರದ ಸುತ್ತಮುತ್ತ ಸಿಗುವ ಔಷಧೀಯ ಗುಣಗಳುಳ್ಳ ಸಸ್ಯ, ಗಿಡಮೂಲಿಕೆ, ವಸ್ತುಗಳನ್ನು ಬಳಸಿ ಸಿದ್ಧಪಡಿಸುವ ಔಷಧಿಯೇ ಮನೆಮದ್ದು ಪಾರಂಪರಿಕ ಔಷಧಿ ಆಗಿರುತ್ತದೆ. ಔಷಧಿ ಸಿದ್ಧಪಡಿಸುವ ಸರಿಯಾದ ಮಾಹಿತಿಯನ್ನು ನಿಖರವಾಗಿ ತಿಳಿದುಕೊಂಡು ಔಷಧಿ ತಯಾರಿಸಿದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಇಂದಿನ ಆಧುನಿಕ ಜಗತ್ತಿಗೆ ಹೊಂದಿಕೊಂಡು ನೈಸರ್ಗಿಕವಾಗಿ ದೊರೆಯುವ ಹಲಸಿನ ಹಣ್ಣು, ಕೆಸಿನ ಗಡ್ಡೆ, ಮರಗೆಸು, ಕಳಲೆ, ಅಣಬೆ ಮುಂತಾದ ಪದಾರ್ಥಗಳನ್ನು ತಿಂದರೆ ಜೀರ್ಣಿಸಿಕೊಳ್ಳಲಾಗದೆ ರಾಸಾಯನಿಕ ಬಳಸಿದ ಪದಾರ್ಥಗಳಿಗೆ ದಾಸರಾಗಿರುವುದು ವಿಪರ್ಯಾಸವೇ ಸರಿ ಎಂದರು.