ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು: ಎನ್.ಚಲುವರಾಯಸ್ವಾಮಿ

KannadaprabhaNewsNetwork |  
Published : Jul 15, 2025, 11:46 PM IST
15ಕೆಎಂಎನ್ ಡಿ13 | Kannada Prabha

ಸಾರಾಂಶ

ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೆಚ್ಚು ಅಂಕಗಳಿಸಿ ಉದ್ಯೋಗ ಪಡೆದುಕೊಂಡು ಒಂದು ಕುಟುಂಬ ನಿರ್ವಹಣೆಗಷ್ಟೇ ಸೀಮಿತವಾಗಬಾರದು. ವಿದ್ಯೆ ಜೊತೆಗೆ ಉತ್ತಮ ಸಂಸ್ಕಾರ, ವಿವೇಕ ಮತ್ತು ಪರಿಪೂರ್ಣವಾದ ಬುದ್ಧಿವಂತೆಯನ್ನು ಬೆಳೆಸಿಕೊಂಡಾಗ ಮಾತ್ರ ತಾವು ಕಲಿತ ವಿದ್ಯೆ ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ದೇಶ-ವಿದೇಶದ ಎಲ್ಲ ವರ್ಗಗಳ ಜನರು ಮತ್ತು ಕಾರ್ಮಿಕರ ಬದುಕಿನ ಸಮಸ್ಯೆಗಳನ್ನು ಅರ್ಥೈಸಿಕೊಂಡರೆ ಜೀವನದಲ್ಲಿ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಅವಕಾಶ ಸಿಗುತ್ತದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಎಂಆರ್‌ಪಿ ಸಮುದಾಯ ಭವನದ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆಯಿಂದ ಮಂಗಳವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿರುವ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣ ಪಡೆದು ಹೆಚ್ಚು ಅಂಕಗಳಿಸಿ ಉದ್ಯೋಗ ಪಡೆದುಕೊಂಡು ಒಂದು ಕುಟುಂಬ ನಿರ್ವಹಣೆಗಷ್ಟೇ ಸೀಮಿತವಾಗಬಾರದು. ವಿದ್ಯೆ ಜೊತೆಗೆ ಉತ್ತಮ ಸಂಸ್ಕಾರ, ವಿವೇಕ ಮತ್ತು ಪರಿಪೂರ್ಣವಾದ ಬುದ್ಧಿವಂತೆಯನ್ನು ಬೆಳೆಸಿಕೊಂಡಾಗ ಮಾತ್ರ ತಾವು ಕಲಿತ ವಿದ್ಯೆ ಸಾರ್ಥಕವಾಗುತ್ತದೆ ಎಂದರು.

ನಾನು ಈ ಮಟ್ಟಕ್ಕೆ ಬೆಳೆಯಲು ತುಮಕೂರಿನ ಸಿದ್ದಗಂಗಾಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಮತ್ತು ಆದಿಚುಂಚನಗಿರಿ ಮಠದ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳೇ ಕಾರಣ. ಶಾಸಕ ಮತ್ತು ಸಚಿವನಾಗಿದ್ದ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇನೆ ಎಂದರು.

ಕಳೆದ 30 ವರ್ಷಗಳ ಹಿಂದೆ ತಾಲೂಕಿನಲ್ಲಿ ಬೆರಳೆಣಿಕೆಯಷ್ಟು ಶಾಲಾ ಕಾಲೇಜುಗಳಿದ್ದವು. ನನ್ನ ಅವಧಿಯಲ್ಲಿ ಹೊಸದಾಗಿ ಹತ್ತಾರು ಪ್ರೌಢಶಾಲೆಗಳು, ಕಾಲೇಜುಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಆಸ್ಪತ್ರೆಗಳನ್ನು ಮಂಜೂರು ಮಾಡಿಸಿದ್ದೇನೆ ಎಂದರು.

ಮಂಗಳೂರು ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗಿಂತ ನಮ್ಮ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ವಿದ್ಯಾರ್ಥಿ 625 ಅಂಕಗಳಿಸಿರುವುದು ಹೆಮ್ಮೆಯ ವಿಚಾರ. ತಾಲೂಕಿನ ಕೆಲ ಪ್ರೌಢಶಾಲೆಯ ವಿದ್ಯಾರ್ಥಿಗಳು 624 ಅಂಕಗಳಿಸಿದ್ದಾರೆ. ಇತ್ತೀಚಿನ ದಿನಗಳ ಅಂಕಿ-ಅಂಶಗಳ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಬಹುತೇಕ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳಿಸಿ ಐಎಎಸ್ ಕೆಎಎಸ್ ವೈದ್ಯರು ಮತ್ತು ವಿಜ್ಞಾನಿಗಳಾಗಿದ್ದಾರೆ ಎಂದರು.

ಇಂಗ್ಲಿಷ್ ಮಾತನಾಡುವವರೆಲ್ಲ ಬುದ್ಧಿವಂತರಲ್ಲ. ಮಾತಾಡಲು ಮತ್ತು ವ್ಯವಹಾರಕ್ಕೆ ಇಂಗ್ಲಿಷ್ ಬೇಕು. ಆದರೆ, ಬುದ್ಧಿವಂತಿಕೆಗೆ ಅನುಭವ ಸುತ್ತಮುತ್ತಲ ಪರಿಸರ ಉತ್ತಮವಾಗಿರಬೇಕು. ಶಿಕ್ಷಣ ಪಡೆಯುವುದು ಎಷ್ಟು ಮುಖ್ಯವೋ ನಿಮ್ಮ ಜ್ಞಾನವನ್ನು ಬೆಳೆಸಿಕೊಳ್ಳುವುದು ಅಷ್ಟೇ ಮುಖ್ಯ ಎಂದರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಮಕ್ಕಳು ತರಗತಿಯಲ್ಲಿ ಶಿಕ್ಷಕರು ಮಾಡುವ ಪಾಠ ಪ್ರವಚನಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಂತರ ಮನೆಯಲ್ಲಿ ಮೆಲುಕು ಹಾಕುವ ಕೆಲಸ ಮಾಡಬೇಕು. ಆಗ ಮಾತ್ರ ಉತ್ತಮ ಅಂಕಗಳಿಸಿ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದರು.

ಸಮಾರಂಭದಲ್ಲಿ ಕಳೆದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆ ಹೊಂದಿರುವ ತಾಲೂಕಿನ 340 ವಿದ್ಯಾರ್ಥಿಗಳಿಗೆ ತಲಾ 2500ರು. ನಗದು ಸೇರಿದಂತೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಲಾಯಿತು. ತಾಲೂಕಿನ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಅಲಿ ಅನ್ಸರ್ ಪಾಷ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ನಾಗೇಶ್ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್, ಪಿಯು ಡಿಡಿಪಿಐ ಚಲುವರಾಜು, ಬಿಇಒ ಕೆ.ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಲಕ್ಷ್ಮೀಕಾಂತ್, ಸಚ್ಚಿನ್ ಚಲುವರಾಯಸ್ವಾಮಿ, ಸುನಿಲ್, ತೂಬಿನಕೆರೆ ಜವರೇಗೌಡ, ತಿಮ್ಮರಾಯಿಗೌಡ, ಎನ್.ಟಿ.ಕೃಷ್ಣಮೂರ್ತಿ, ಬಿ.ಎಂ.ಪ್ರಕಾಶ್, ಕೆ.ವಿ.ದಿನೇಶ್, ಚಿಣ್ಯ ವೆಂಕಟೇಶ್, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಕೆ.ಎನ್.ಮಧುಸೂಧನ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?