ಕೊಡಗು ಜಿಲ್ಲಾಡಳಿತದಿಂದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ 125ನೇ ಜನ್ಮ ದಿನಾಚರಣೆ

KannadaprabhaNewsNetwork |  
Published : Jan 29, 2024, 01:32 AM IST
ಫೀ.ಮಾ.ಕೆ.ಎಂ.ಕಾರ್ಯಪ್ಪ 125ನೇ ಜನ್ಮದಿನಾಚರಣೆ | Kannada Prabha

ಸಾರಾಂಶ

ಮಡಿಕೇರಿಯಲ್ಲಿ ಫೀ.ಮಾ. ಕಾರ್ಯಪ್ಪ ಅವರ 125ನೇ ಜನ್ಮದಿನಾಚರಣೆ ಭಾನುವಾರ ನಡೆಯಿತು. ಸಮಾರಂಭದಲ್ಲಿ ಪಾಲ್ಗೊಂಡ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಎಂದರೆ ಒಂದು ರೀತಿ ಸ್ಫೂರ್ತಿಯ ಚಿಲುಮೆ. ಶಿಸ್ತಿನ ಸಿಪಾಯಿ ಆಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ಆಶಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಭಾರತೀಯ ಸೇನೆಯ ಪ್ರಥಮ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರಂತೆ ಯುವಜನರು ಭಾರತೀಯ ಸೇನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಜಿಲ್ಲೆ ಹಾಗೂ ರಾಜ್ಯಕ್ಕೆ ಒಳ್ಳೆಯ ಹೆಸರು ತರುವಂತಾಗಬೇಕು ಎಂದು ಏರ್ ಮಾರ್ಷಲ್(ನಿ) ಕೆ.ಸಿ.ಕಾರ್ಯಪ್ಪ ಕರೆ ನೀಡಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 125ನೇ ಜನ್ಮ ದಿನಾಚರಣೆ ಪ್ರಯುಕ್ತ ಭಾನುವಾರ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.ಶಿಸ್ತು, ಶ್ರದ್ಧೆ ಮತ್ತು ಸಮಯಪ್ರಜ್ಞೆಗೆ ಹೆಸರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ರಾಷ್ಟ್ರದ ರಕ್ಷಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಆ ದಿಸೆಯಲ್ಲಿ ಪ್ರತಿಯೊಬ್ಬರಲ್ಲಿಯೂ ರಾಷ್ಟ್ರ ಮೊದಲು ಎಂಬುದು ಮೊಳಗಬೇಕು ಎಂದು ತಿಳಿಸಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಎಂದರೆ ಒಂದು ರೀತಿ ಸ್ಫೂರ್ತಿಯ ಚಿಲುಮೆ. ಶಿಸ್ತಿನ ಸಿಪಾಯಿ ಆಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು ಎಂದರು.ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಸಮಯ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಪಾಲಿಸುವಂತಾಗಬೇಕು. ಇಡೀ ವಿಶ್ವದಲ್ಲಿ ಭಾರತವನ್ನು ಅತ್ಯುನ್ನತ ಸೇನಾ ಕ್ಷೇತ್ರವನ್ನಾಗಿ ಮಾಡಲು ಕಾರ್ಯಪ್ಪ ಅವರು ಶ್ರಮಿಸಿದ್ದಾರೆ ಎಂದು ಪ್ರತಾಪ್ ಸಿಂಹ ನುಡಿದರು.

ನಾವೆಲ್ಲರೂ ಮೊದಲು ಭಾರತೀಯರಾಗಿ ಬದುಕಬೇಕು ಎಂಬುದನ್ನು ಕಾರ್ಯಪ್ಪ ಅವರು ತೋರಿಸಿಕೊಟ್ಟಿದ್ದಾರೆ. ಅವರ ಸೇನಾ ಕ್ಷೇತ್ರದ ಕೊಡುಗೆ ಅವಿಸ್ಮರಣೀಯ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಸೇನಾ ಕ್ಷೇತ್ರದಲ್ಲಿ ಅದ್ಭುತ ಸೇವೆ ಸಲ್ಲಿಸಿದ್ದಾರೆ. ಭಾರತೀಯ ಸೇನಾ ಕ್ಷೇತ್ರದಲ್ಲಿ ‘ಫೀಲ್ಡ್ ಮಾರ್ಷಲ್’ ಅತ್ಯುನ್ನತ ಸ್ಥಾನ ಹೊಂದಿದೆ ಎಂದು ಸಂಸದರು ತಿಳಿಸಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಶನಿವಾರಸಂತೆಯಲ್ಲಿ ಹುಟ್ಟಿ ಬೆಳೆದ ಕಾರ್ಯಪ್ಪ ಅವರ ಬರಹ ಮತ್ತು ಭಾಷಣಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದರು.ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ದೇಶ ಕಂಡ ಅಪ್ರತಿಮ ವೀರ ಸೇನಾನಿ. ಇವರ ಸೇನಾ ಕ್ಷೇತ್ರದಲ್ಲಿನ ಶಿಸ್ತು, ಸಮಯಪ್ರಜ್ಞೆ, ಶ್ರದ್ಧೆ, ಪ್ರಾಮಾಣಿಕತೆ ಹೀಗೆ ಹಲವು ಮೌಲ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದರು.

ಜಿಲ್ಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಸೇನಾ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಕಾರ್ಯಪ್ಪ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದರು.ನಗರಸಭೆ ಅಧ್ಯಕ್ಷರಾದ ನೆರವಂಡ ಅನಿತಾ ಪೂವಯ್ಯ, ಎನ್‌ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ಜಪ್ರಿನ್ ಅರಾನ್ಹಾ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ರಾಘವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಸಿಇಒ ವರ್ಣಿತ್ ನೇಗಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ.ಸತೀಶ್, ಸದಸ್ಯರಾದ ಸಬಿತಾ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ನಿರ್ದೇಶಕರಾದ ಮಂಡೀರ ಸದಾಮುದ್ದಪ್ಪ, ಕೂಡಿಗೆ ಸೈನಿಕ ಶಾಲೆಯ ಕನ್ನಡ ಉಪನ್ಯಾಸಕರಾದ ಜಿ.ಕೆ.ಮಂಜಪ್ಪ, ಬಿಪಿನ್ ಅಪ್ಪಚ್ಚು, ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಬಿ.ಅಯ್ಯಪ್ಪ, ಕೂಡಿಗೆ ಸೈನಿಕ ಶಾಲೆ ಹಾಗೂ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ