ಹಾನಗಲ್ಲ: ಹಕ್ಕುಪತ್ರ ರಹಿತ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಪ್ರಕ್ರಿಯೆ ಇಡೀ ರಾಜ್ಯದಲ್ಲಿಯೇ ಹಾನಗಲ್‌ನಲ್ಲಿ ಚಾಲನೆ ಪಡೆದಿದ್ದು, ವರ್ಷದೊಳಗೆ ತಾಲೂಕಿನ ೧೩,೬೦೦ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಬೈಚವಳ್ಳಿ ಗ್ರಾಮದಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಕ್ಕಿಆಲೂರಿನಲ್ಲಿ ಹಕ್ಕುಪತ್ರ ವಿತರಣೆಗೆ ಈಗಾಗಲೇ ಚಾಲನೆ ನೀಡಲಾಗಿದ್ದು, ೪೦-೫೦ ವರ್ಷಗಳಿಂದ ಹಕ್ಕುಪತ್ರ ಇಲ್ಲದೇ ವಾಸಿಸುತ್ತಿದ್ದ ೧೫೦ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ತಾಲೂಕಿನಲ್ಲಿ ಹೊಸದಾಗಿ ಕಂದಾಯ ಗ್ರಾಮ, ಉಪ ಗ್ರಾಮಗಳನ್ನು ಘೋಷಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಕಳೆದ ೧೦ ತಿಂಗಳ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹೨೫೦ ಕೋಟಿ ಒದಗಿಸಿದ್ದು, ಕೆಲವು ಕಾಮಗಾರಿಗಳು ಚಾಲನೆ ಪಡೆದಿದ್ದು, ಇನ್ನೂ ಕೆಲವು ಟೆಂಡರ್ ಹಂತದಲ್ಲಿವೆ ಎಂದು ತಿಳಿಸಿದ ಅವರು, ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಕಾಂಗ್ರೆಸ್ ಉತ್ಸಾಹಿ ಯುವ ನಾಯಕ ಆನಂದಸ್ವಾಮಿ ಗಡ್ಡದೇವರಮಠ ಅವರಿಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ. ಅವರನ್ನು ಆಯ್ಕೆ ಮಾಡಿದರೆ ಅಭಿವೃದ್ಧಿಯಲ್ಲಿ ಅವರೊಂದಿಗೆ ಜೋಡೆತ್ತಿನಂತೆ ಕೆಲಸ ಮಾಡುವುದಾಗಿ ಶ್ರೀನಿವಾಸ ಮಾನೆ ಭರವಸೆ ವ್ಯಕ್ತಪಡಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ತಾಲೂಕಿನ ಮರಿಮೊಮ್ಮಗ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಚುನಾವಣೆಯಲ್ಲಿ ಬೆಂಬಲಿಸಲು ಜನ ನಿರ್ಣಯಿಸಿದ್ದಾರೆ. ಗಡ್ಡದೇವರಮಠ ಕುಟುಂಬದ ಬಗ್ಗೆ ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಉತ್ತಮ ಅಭಿಪ್ರಾಯವಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಸಂವಿಧಾನ ಅಳಿಸಲು ಹೊರಟಿರುವ ಬಿಜೆಪಿ ಸೋಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮುಖಂಡರಾದ ಯಾಸೀರ್‌ಖಾನ್ ಪಠಾಣ, ಉಮೇಶ ದಾನಪ್ಪನವರ, ಅಶೋಕ ಜಾಧವ್, ಶ್ರೀಕಾಂತ ಅರಳೇಶ್ವರ, ವಿಠ್ಠಲ ಮಾಂಗ್ಲೆನವರ, ಇಸ್ಮೈಲ್ ಬಡಗಿ, ಬಸವಣ್ಣೆಪ್ಪ ಓಲೇಕಾರ, ಮಕ್ಬೂಲ್ ಬಡಗಿ, ಹನುಮಂತಪ್ಪ ಮಾಳಾಪುರ, ಸುರೇಶ ಜಾಡರ, ಜಿ.ಸಿ. ಕುಲಕರ್ಣಿ, ಹನುಮಂತ ಮರಗಡಿಯವರ, ರಾಮಚಂದ್ರ ಓಲೇಕಾರ, ಸುರೇಶ ಚಿಕ್ಕೇರಿ ಈ ಸಂದರ್ಭದಲ್ಲಿದ್ದರು.