ಎಸ್.ಎಂ. ಸೈಯದ್
ಪಟ್ಟಣವನ್ನು ಬಯಲು ಬಹಿರ್ದೆಸೆ ಮುಕ್ತವಾಗಿಸುವ ಉದ್ದೇಶದಿಂದ ಪುರಸಭೆ ಆಡಳಿತವು ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ₹15 ಸಾವಿರ ಸಹಾಯಧನ ನೀಡಿ, ಬಯಲು ಬಹಿರ್ದೆಸೆ ಮುಕ್ತ ಕುರಿತು ವ್ಯಾಪಕ ಪ್ರಚಾರದ ಮೂಲಕ ಒಟ್ಟು 3552 ವೈಯಕ್ತಿಕ ಶೌಚಾಲಯ ನಿರ್ಮಿಸಿತ್ತು.
ಈಗ ಸ್ವಚ್ಛ ಭಾರತ (2.0) 2026- 27ನೇ ಸಾಲಿನಲ್ಲಿ 97 ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಹೊಂದಿದ್ದು, ₹30 ಸಾವಿರ ಸಹಾಯಧನ ನೀಡಲಾಗುತ್ತಿದೆ. ಆದರೆ ವೈಯಕ್ತಿಕ ಶೌಚಾಲಯವಿದ್ದರೂ ಕೆಲವರಿಗೆ ಬಹಿರ್ದೆಸೆಗೆ ತೆರಳುವ ಹವ್ಯಾಸ ಉಳಿದುಕೊಂಡಿದೆ. ಇನ್ನೂ ಕೆಲ ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳದೇ ಇರುವುದರಿಂದಾಗಿ ಪಟ್ಟಣದ ಭಾಗಶಃ ವಾರ್ಡ್‌ಗಳ ನಿವಾಸಿಗಳು ಬಯಲು ಬಹಿರ್ದೆಸೆ ಸಂಕಟದಿಂದ ಬಳಲುತ್ತಿದ್ದಾರೆ.18ರಲ್ಲಿ 14 ಶೌಚಾಲಯ ಬಂದ್: ಪಟ್ಟಣದ 23 ವಾರ್ಡ್‌ಗಳಲ್ಲಿ ಪುರಸಭೆಯಿಂದ 18 ಸಾರ್ವಜನಿಕ ಸುಲಭ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳಲ್ಲಿ ಕೇವಲ 4 ಶೌಚಾಲಯಗಳು ಬಳಕೆಯಲ್ಲಿದ್ದು, ಇನ್ನುಳಿದ 14 ಸಾರ್ವಜನಿಕ ಸುಲಭ ಶೌಚಾಲಯಗಳು ನಿರ್ವಹಣೆ ಕೊರತೆ ಪರಿಣಾಮ ಕೆಲವು ಶೌಚಾಲಯಗಳಲ್ಲಿ ಮುಳ್ಳು ಕಂಟಿ ಬೆಳೆದಿವೆ. ಇನ್ನು ಕೆಲವು ಶೌಚಾಲಯಗಳು ದುರಸ್ತಿ ಹಂತಕ್ಕೆ ತಲುಪಿವೆ.
ಬೆರಳಣಿಕೆ ವಾರ್ಡ್‌ಗಳು: ಪಟ್ಟಣದ 23 ವಾರ್ಡಿಗಳಲ್ಲಿ ಜನರಲ್ಲಿ ಜಾಗೃತಿ ಜತೆಗೆ ವ್ಯಾಪಕ ಪ್ರಚಾರವನ್ನು ಕೈಗೊಂಡು ಸರ್ಕಾರದ ಸ್ವಚ್ಛ ಭಾರತ ಯೋಜನೆ ಅಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸಹಾಯಧನ ನೀಡಿದ ಪರಿಣಾಮ ಪಟ್ಟಣದ 9395 ಮನೆಗಳಲ್ಲಿ 3552 ವೈಯಕ್ತಿಕ ಶೌಚಾಲಯಗಳು ನಿರ್ಮಿಸಲಾಗಿತ್ತು. ಅಲ್ಲದೆ ಹೊಸದಾಗಿ ನಿರ್ಮಾಣವಾಗುವ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಕಡ್ಡಾಯ ಹಾಗೂ ಹಳೆಯ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಅರ್ಜಿಗಳನ್ನು ಹಾಕಲು ಅವಕಾಶವನ್ನು ಪುರಸಭೆ ನೀಡಿತ್ತು.
ಅನುದಾನ ಬಾಕಿ: ಪಟ್ಟಣದಲ್ಲಿ ಸ್ವಚ್ಛ ಭಾರತ (2.0) ಅಡಿ 2025-26ನೇ ಸಾಲಿನಲ್ಲಿ 97 ಶೌಚಾಲಯ ನಿರ್ಮಾಣದ ಗುರಿ ಹೊಂದಲಾಗಿದೆ. ಅದರಲ್ಲಿ 36 ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಇನ್ನುಳಿದ 36 ಕಟ್ಟಡ ಹಂತದಲ್ಲಿವೆ. ಅದರಲ್ಲಿ 41 ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ನೀಡಲಾಗಿದ್ದು, ಪುರಸಭೆಯಿಂದ ಅನುದಾನ ಬಾಕಿಯಿದೆ. ಉಳಿದ 20 ಕಟ್ಟಡಗಳಿಗೆ ಅರ್ಜಿ ಬರುತ್ತಿವೆ ಎಂದು ಪುರಸಭೆ ಆರೋಗ್ಯ ನಿರೀಕ್ಷಕ ಶಿವಕುಮಾರ ಇಲಾಳ ತಿಳಿಸಿದರು.