ಕನ್ನಡಪ್ರಭ ವಾರ್ತೆ ಹೊನ್ನಾವರ
ಸರ್ಕಾರದ ನಿರ್ದೇಶನದಂತೆ ವಾರ್ಷಿಕ ಮಳೆಗಾಲದ ಎರಡು ತಿಂಗಳ ಸುದೀರ್ಘ ಯಾಂತ್ರೀಕೃತ ಮೀನುಗಾರಿಕಾ ನಿಷೇಧಾವಧಿ (ಫಿಷಿಂಗ್ ಬ್ಯಾನ್) ಮುಕ್ತಾಯಗೊಂಡಿದೆ. ಆ. 1ರಿಂದ ಕಡಲಿನಲ್ಲಿ ಸಾಂಪ್ರದಾಯಿಕ ಹಾಗೂ ಯಾಂತ್ರೀಕೃತ ಮೀನುಗಾರಿಕೆ ಪುನಾರಂಭಗೊಂಡಿದೆ. ಕರಾವಳಿಯ ಕಡಲ ಮಕ್ಕಳು ತಮ್ಮ ಕುಲಕಸಬಿಗೆ ಮರಳಲು ಸಕಲ ಸಿದ್ಧತೆ ಪೂರ್ಣಗೊಳಿಸಿ ಕಡಲ ತಾಯಿಯೆ ನಮಿಸಿ ಕೆಲಸ ಆರಂಭಿಸಿದ್ದಾರೆ.ಈ ಹಿನ್ನೆಲೆ ಮೀನುಗಾರಿಕೆ ಸುಸೂತ್ರವಾಗಿ ನಡೆಯಲಿ ಮತ್ತು ಸಮುದ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಿರಲಿ ಎಂದು ಪ್ರಾರ್ಥಿಸಿ, ಕರಾವಳಿ ಮೀನುಗಾರ ಕಾರ್ಮಿಕರ ಸಂಘದ ವತಿಯಿಂದ ಭಕ್ತಿಪೂರ್ವಕವಾಗಿ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸುದೀರ್ಘ ಬಿಡುವಿನ ನಂತರ ಸಾಗರಕ್ಕಿಳಿಯುವ ಮುನ್ನ ಮೀನುಗಾರರು ತಮ್ಮ ಸ್ಥಳೀಯ ಪರಿವಾರ ದೇವರಿಗೆ ಹಾಗೂ ಗ್ರಾಮದೇವತೆಯಾದ ಶ್ರೀ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಕೃಪೆ ತೋರುವಂತೆ ಪ್ರಾರ್ಥಿಸಿದರು. ತದನಂತರ, ಜೀವನಾಧಾರ ನೀಡುವ ಸಮುದ್ರ ದೇವಿ (ಕಡಲಮ್ಮ) ಹಾಗೂ ಮತ್ಸ್ಯರಾಜನಿಗೆ ಸಾಂಪ್ರದಾಯಿಕವಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಿ, ಸಮೃದ್ಧ ಮತ್ಸ್ಯ ಕ್ಷೇಮ ಮತ್ತು ಸುರಕ್ಷಿತ ಮೀನುಗಾರಿಕೆಗಾಗಿ ಆಶೀರ್ವಾದ ಪಡೆದರು.ಕಳೆದ ಎರಡು ತಿಂಗಳುಗಳಿಂದ ದಂಡೆಯಲ್ಲಿ ವಿಶ್ರಮಿಸುತ್ತಿದ್ದ ಬೋಟ್‌ಗಳ ಬಲೆಗಳನ್ನು ಸರಿಪಡಿಸಿಕೊಂಡು, ಡೀಸೆಲ್ ಹಾಗೂ ಐಸ್ ತುಂಬಿಸಿಕೊಂಡು ಮೀನುಗಾರರು ಕಡಲಿಗೆ ಧುಮುಕಲು ಸಂಪೂರ್ಣ ಸಜ್ಜಾಗಿದ್ದಾರೆ. ಆ.1ರಿಂದ ಕಡಲತಡಿಯಲ್ಲಿ ಮರಳಿ ಚಟುವಟಿಕೆಗಳು ಗರಿಗೆದರಲಿದ್ದು, ಕರಾವಳಿ ತೀರದಲ್ಲಿ ಹೊಸ ಭರವಸೆ ಮತ್ತು ಸಂಭ್ರಮದ ವಾತಾವರಣ ಮನೆಮಾಡಿದೆ.
ಈ ವೇಳೆ ಕರಾವಳಿ ಮೀನುಗಾರ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೇಶ್ ಗೋವಿಂದ ತಾಂಡೇಲ್, ಪ್ರಮುಖರಾದ ರಮೇಶ್ ಶೇಸು, ಸಂಘದ ಕಾರ್ಯದರ್ಶಿ ರಾಜು ತಾಂಡೇಲ್ ಟೊಂಕ, ನರಸಿಂಹ ನಂದಾ, ರಮೇಶ್ ಬಾಬು ಸೇರಿ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ಸ್ಥಳೀಯ ಮೀನುಗಾರ ಕಾರ್ಮಿಕರು ಉಪಸ್ಥಿತರಿದ್ದರು.