ಹಗರಿಬೊಮ್ಮನಹಳ್ಳಿ: ತಾಲೂಕಿನ ಹೊಸ ಚಿಮ್ಮನಹಳ್ಳಿ ಗ್ರಾಮದಲ್ಲಿ ದಿಢೀರ್ 14 ಕುರಿಗಳು ಸಾವನ್ನಪ್ಪಿದ ಧಾರುಣ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಇವರ ಹಿಂಡಿನಲ್ಲಿ 90ಕ್ಕೂ ಹೆಚ್ಚು ಕುರಿಗಳಿದ್ದು, ಎಂದಿನಂತೆ ಗ್ರಾಮದ ಹೊರವಲಯದಲ್ಲಿರುವ ತೊಟ್ಟಿಯಲ್ಲಿ ನೀರು ಕುಡಿಸಿಕೊಂಡು, ಕುರಿಗಳನ್ನು ಮೇಯಿಸಲೆಂದು ಹಂಚಿನಾಳ ಗ್ರಾಮದತ್ತ ನಡೆದಾಗ ಈ ಘಟನೆ ನಡೆದಿದೆ.
ಇದ್ದಕ್ಕಿದ್ದಂತೆ ದಾರಿಯಲ್ಲಿ ಒಂದೊಂದು ಕುರಿಗಳು ಕುಸಿಯುತ್ತ ನೆಲಕ್ಕುರುಳಿವೆ. 18ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡು ನೆಲಕ್ಕುರುಳಿದಾಗ ಆತಂಕಗೊಂಡ ಕುರಿಗಾಯಿ ಮೂಗಪ್ಪನ ಮಗ ಚೇತನ, ಪಶುಸಂಗೋಪನೆ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ತಕ್ಷಣ ಸ್ಥಳಕ್ಕೆ ಆಗಮಿಸಿದ ತಾಲೂಕು ವೈದ್ಯಾಧಿಕಾರಿ ಡಾ. ಸೂರಪ್ಪ ಹಾಗೂ ಸಹಾಯಕ ವೈದ್ಯ ಡಾ. ಅಜಯ್, ಡಾ. ಮಂಜುಳಾ ಪರಿಶೀಲಿಸಿ ಚಿಕಿತ್ಸೆ ನೀಡಿದರೂ 14 ಕುರಿಗಳು ಸಾವನ್ನಪ್ಪಿವೆ. 4 ಕುರಿಗಳು ಅಸ್ವಸ್ಥಗೊಂಡಿವೆ. ಉಳಿದ ಕುರಿಗಳು ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಂಡಿವೆ. ಲ್ಯಾಬ್ ಪರಿಶೀಲನೆಯ ಬಳಿಕ ಕುರಿಗಳ ಸಾವಿನ ನಿಖರ ಮಾಹಿತಿ ತಿಳಿಯುತ್ತದೆ ಎಂದು ಡಾ. ಸೂರಪ್ಪ ತಿಳಿಸಿದರು.