ಧಾರವಾಡ:
ಕಿತ್ತೂರಿನಲ್ಲಿ ಮಂಗಳವಾರ ಜರುಗಿದ ತಾಲೂಕು ಕೆಡಿಪಿ ಸಭೆಯಲ್ಲಿ ಹೊಸಟ್ಟಿ, ಸಿಂಗನಹಳ್ಳಿ, ಲೋಕೂರು, ಶಿಬಾರಗಟ್ಟಿ ಸೇರಿ ಆರೇಳು ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗಿರುವ ಬಗ್ಗೆ ತಮಗೆ ದೂರುಗಳು ಬಂದಿದ್ದು, ಅಧಿಕಾರಿಗಳು ಕೂಡಲೇ ಈ ಗ್ರಾಮಗಳಿಗೆ ಬೋರ್‌ವೆಲ್ ಅಥವಾ ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಜಲ ಜೀವನ ಮಿಷನ್ ಧಾರವಾಡ ಗ್ರಾಮೀಣ ಮಾತ್ರವಲ್ಲದೇ ಇಡೀ ಜಿಲ್ಲೆಯಲ್ಲಿಯೇ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಎಲ್ ಆ್ಯಂಡ್ ಟಿ ಸಂಸ್ಥೆ ಬಗ್ಗೆ ತುಂಬಾ ದೂರುಗಳಿದ್ದು, ಈಗಾಗಲೇ ₹ 9 ಕೋಟಿ ದಂಡ ವಿಧಿಸಿದರೂ ಅವರು ತಮ್ಮ ಕಾರ್ಯ ಸರಿಯಾಗಿ ಮಾಡುತ್ತಿಲ್ಲ. ಬೋರ್‌ವೆಲ್ ನೀರು ಕುಡಿಯುವ ಧಾರವಾಡ ಗ್ರಾಮೀಣ ಪ್ರದೇಶಕ್ಕೆ ಕೂಡಲೇ ಪೈಪ್‌ಲೈನ್ ಅಳವಡಿಸಿ ಮಲಪ್ರಭಾ ನೀರು ಕೊಡಬೇಕೆಂಬುದು ನಮ್ಮ ಆಶಯ. ಆದರೆ, ಕಾಮಗಾರಿ ಗುತ್ತಿಗೆ ಪಡೆದಿರುವ ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬರುವ ದಿನಗಳಲ್ಲಿ ಕಂಪನಿ ಅಧಿಕಾರಿಗಳನ್ನು ಬೆಂಗಳೂರಿಗೆ ಕರೆಯಿಸಿ ಯೋಜನೆ ಅನುಷ್ಠಾನ, ಪೈಪ್‌ಲೈನ್ ಅಳವಡಿಸಲು ಹಾಳು ಮಾಡಿದ ರಸ್ತೆಯನ್ನು ವೈಜ್ಞಾನಿಕವಾಗಿ ಮರು ನಿರ್ಮಾಣ, ಮನೆ-ಮನೆಗೆ ಅಳವಡಿಸಿರುವ ಪೈಪ್‌ಲೈನ್ ಗುಣಮಟ್ಟದ ಬಗ್ಗೆ ಪ್ರಶ್ನಿಸಿ ಆಗಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದ ಅವರು, ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿ ಇದ್ದಲ್ಲಿ ತಾತ್ಕಾಲಿಕವಾಗಿ ಇನ್ನಾರು ತಿಂಗಳ ಮಟ್ಟಿಗೆ ಸರಿಪಡಿಸುವ ಕಾರ್ಯ ಮಾಡಿ, ನಂತರದಲ್ಲಿ ಮನೆ-ಮನೆಗೂ ಮಲಪ್ರಭೆ ಹರಿಯಲಿದ್ದಾಳೆ ಎಂದು ಶಾಸಕರು ಅಧಿಕಾರಿಗಳಿಗೆ ತಿಳಿಸಿದರು.
ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ಮಾಡಿದ ಶಾಸಕರು, ಗ್ರಾಮೀಣದ ಕಿರಾಣಿ ಸೇರಿದಂತೆ ಚಹಾ ಅಂಗಡಿಗಳಲ್ಲಿ ಮದ್ಯ ಮಾರಲಾಗುತ್ತಿದೆ. ಎಲ್ಲೆಂದರಲ್ಲಿ ಇಸ್ಪೀಟು, ಮಟಕಾ ದಂಧೆ ನಡೆದಿದೆ. ಇದರಿಂದ ಯುವ ಜನಾಂಗ ಹಾಳಾಗುತ್ತಿದ್ದು, ಮನೆ-ಮಠ ಮಾರುವ ಸ್ಥಿತಿಗೆ ಬಂದಿದ್ದಾರೆ. ಕೆಲವೆಡೆ ಪೊಲೀಸ್ ಪೇದೆಗಳು ಕೆಲವು ಗುಂಪುಗಳಿಗೆ ಬಡ್ಡಿಗೆ ಹಣ ಕೊಟ್ಟು ಇಸ್ಪೀಟು ಆಡಿಸುತ್ತಿದ್ದಾರೆ ಎಂಬ ಆರೋಪಗಳಿದ್ದು, ಈ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಗಳ ಗಮನಕ್ಕೂ ತಂದಿದೇನೆ. ಗ್ರಾಮೀಣದಲ್ಲಿ ಅಕ್ರಮ ಮದ್ಯ ಮಾರಾಟ, ಜೂಜಾಟ ಬಂದ್ ಮಾಡುವಲ್ಲಿ ಪೊಲೀಸರು ಹಾಗೂ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಸಿದರು.
ಕ್ಷೇತ್ರದಲ್ಲಿ ತಮ್ಮ ಅನುಪಸ್ಥಿತಿ ಇದ್ದರೂ ಪಕ್ಷದ ಮುಖಂಡರ ಹಾಗೂ ಅಧಿಕಾರಿಗಳ ಮೂಲಕ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿ ನಿರಂತರವಾಗಿವೆ. ಕಿತ್ತೂರು ಕರ್ನಾಟಕದ ಪ್ರತಿ ಶಾಸಕರಿಗೆ ₹ 50 ಕೋಟಿ ವಿಶೇಷ ಅನುದಾನ ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಲಾಗಿದ್ದು, ಈ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ನಿರೀಕ್ಷೆ ಹೊಂದಿದ್ದೇವೆ.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಆಗಬೇಕೆಂದು ಪ್ರಯತ್ನಿಸಿ ರಾಜ್ಯ ಸರ್ಕಾರದ ಮೂಲಕ ರಾಜ್ಯಪಾಲರ ವರೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ, ಅದನ್ನು ತಡೆ ಹಿಡಿಯಲಾಗಿದೆ. ಎರೆದುಕೊಳ್ಳುವವರ ಬುಡಕ್ಕೆ ಡಕ್ಕೊಳ್ಳುವವರು ಇರುವಂತೆ... ಪ್ರತ್ಯೇಕ ಪಾಲಿಕೆ ನಾನೇ ಮಾಡಿಸಿದ್ದು ಎಂದು ಬ್ಯಾನರ್ ಹಾಕಿಸಿದವರಿಂದ ಇಷ್ಟೆಲ್ಲಾ ಆಗುತ್ತಿದೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ವಿರುದ್ಧ ವಿನಯ ಕುಲಕರ್ಣಿ ಕಿಡಿಕಾರಿದರು. ಜತೆಗೆ ಪ್ರತ್ಯೇಕ ಪಾಲಿಕೆ ಆಗುವುದು ನಿಶ್ಚಿತ ಎಂದರು.