ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ ಬೀದಿಗಿಳಿದ ಜನತೆ

KannadaprabhaNewsNetwork |  
Published : Apr 01, 2026, 02:00 AM IST
ಕುಡಿಯುವ ನೀರು ಪೂರೈಕೆಗೆ ಒತ್ತಾಯಿಸಿ 55ನೇ ವಾರ್ಡ್‌ ನಿವಾಸಿಗಳು ಹಳೇ ಹುಬ್ಬಳ್ಳಿ ಮುಖ್ಯರಸ್ತೆ ತಡೆದು ಪ್ರತಿಭಟಿಸಿದರು. | Kannada Prabha

ಸಾರಾಂಶ

ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಾನ್ ದೇವಸ್ಥಾನದ ಬಳಿ ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್ ಒಡೆದು 15 ದಿನಗಳಾದರೂ ಎಲ್ ಆ್ಯಂಡ್ ಟಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ:

ವಾರ್ಡ್ ನಂ. 55ರ ವ್ಯಾಪ್ತಿಯಲ್ಲಿ 15 ದಿನಗಳಿಂದ ಕುಡಿಯುವ ನೀರು ಪೂರೈಸಿಲ್ಲ ಎಂದು ಆರೋಪಿಸಿ ಎಲ್‌ ಆ್ಯಂಡ್‌ ಟಿ ಕಂಪನಿ ವಿರುದ್ಧ ಅಲ್ಲಿನ ಸ್ಥಳೀಯ ನಿವಾಸಿಗಳು ಮಂಗಳವಾರ ಖಾಲಿ ಕೊಡಗಳೊಂದಿಗೆ ಹಳೇ ಹುಬ್ಬಳ್ಳಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಾನ್ ದೇವಸ್ಥಾನದ ಬಳಿ ಕುಡಿಯುವ ನೀರಿನ ಸರಬರಾಜು ಪೈಪ್‌ಲೈನ್ ಒಡೆದು 15 ದಿನಗಳಾದರೂ ಎಲ್ ಆ್ಯಂಡ್ ಟಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಪೈಪ್‌ಲೈನ್ ದುರಸ್ತಿಗೆ ಅಗತ್ಯ ಸಾಮಗ್ರಿಗಳ ಕೊರತೆ ಇದೆ ಎಂದು ಅಧಿಕಾರಿಗಳು ದಿನ ದೂಡುತ್ತಿದ್ದಾರೆ. ನೀರು ಬಿಡುವವರೆಗೂ ನಾವು ರಸ್ತೆ ತಡೆ ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನಿಸಿದರು. ಆದರೆ, ಸಫಲವಾಗಲಿಲ್ಲ. ನಂತರ ಸ್ಥಳಕ್ಕೆ ಪಾಲಿಕೆ ಸದಸ್ಯ ಇಕ್ಬಾಲ್ ನವಲೂರ ಆಗಮಿಸಿ, ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ತಾಕೀತು ಮಾಡುವ ಮೂಲಕ ಮಂಗಳವಾರವೇ ನೀರು ಪೂರೈಸುವಂತೆ ಸೂಚಿಸಿದರು.

ನೀರು ಬಿಡುವ ಭರವಸೆ ನೀಡಿದ ನಂತರವೇ ಪ್ರತಿಭಟನೆ ಹಿಂಪಡೆಯುವುದಾಗಿ ಪಾಲಿಕೆ ಸದಸ್ಯ ನವಲೂರ ಹಾಗೂ ಪ್ರತಿಭಟನಾಕಾರರು ಪಟ್ಟು ಹಿಡಿದರು. ಆಗ ಸ್ಥಳಕ್ಕೆ ಆಗಮಿಸಿದ್ದ ಎಲ್ ಆ್ಯಂಡ್ ಟಿ ಅಧಿಕಾರಿಗಳು, ಪಾಲಿಕೆ ಸದಸ್ಯ ಹಾಗೂ ಅಲ್ಲಿನ ಜನರ ಮನವೊಲಿಸಿ, ನೀರು ಬಿಡುವ ಭರವಸೆ ವ್ಯಕ್ತಪಡಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಸಂಜೆಯೊಳಗೆ ದುರಸ್ತಿ ಮಾಡಿ ನೀರು ಪೂರೈಕೆ:

ಇತ್ತ ಹಳೇ ಹುಬ್ಬಳ್ಳಿ ನಿವಾಸಿಗಳು ನೀರಿಗಾಗಿ ದಿಢೀರ್‌ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ಕಾರಣ ಸಂಜೆಯೊಳಗೆ ಪೈಪ್‌ಲೈನ್ ದುರಸ್ತಿ ಪೂರ್ಣಗೊಳಿಸಿ ನೀರು ಪೂರೈಕೆ ಮಾಡಲಾಯಿತು. ಆಸರಹೊಂಡ, ದಿಡ್ಡಿ ಓಣಿ, ಕೋಟೂರ ಓಣಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಸುಮಾರು 4 ಗಂಟೆ ನೀರು ಪೂರೈಸಲಾಗಿದೆ. ಉಳಿದ ಪ್ರದೇಶಕ್ಕೆ ಏ.1ರಂದು ನೀರು ಪೂರೈಸುವುದಾಗಿ ಎಲ್ ಆ್ಯಂಡ್ ಟಿ ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ತೊಳಲಾಟ-ಅಪವಾದಗಳೇ ಅಕ್ಷರ ತಾಳಿವೆ
ಮಹಿಳಾ ಕಾದಂಬರಿ ಅಸಮಾನತೆ ಪ್ರಶ್ನಿಸುವ ಅಸ್ತ್ರ