ಕನ್ನಡಪ್ರಭ ವಾರ್ತೆ ಮೈಸೂರು
ಮುಖ್ಯಮಂತ್ರಿಯೂ ಆಗಿರುವ ತಮ್ಮ ಪತಿಯ ರಾಜಕೀಯ ಬದುಕನ್ನು ಕಟಕಟೆಯಲ್ಲಿ ತಂದು ನಿಲ್ಲಿಸಲು ಕಾರಣವಾಗಿರುವ ತಮ್ಮ ಹೆಸರಿನಲ್ಲಿರುವ ವಿವಾದಿತ 14 ನಿವೇಶನವನ್ನು ಹಿಂತಿರುಗಿಸುವ ಸಂಬಂಧ ಪಾರ್ವತಿ ಅವರು ಮುಡಾಗೆ ಬರೆದಿದ್ದ ಪತ್ರ ಸೋಮವಾರವಷ್ಟೇ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಮಂಗಳವಾರ ಮುಡಾ ಕಚೇರಿಗೆ ತೆರಳಿ ಸೈಟ್ ಹಿಂಪಡೆಯುಂತೆ ಕೋರಿ ಪಾರ್ವತಿ ಅವರು ಬರೆದಿದ್ದ ಪತ್ರವನ್ನು ಮುಡಾ ಆಯುಕ್ತರಿಗೆ ಸಲ್ಲಿಸಿದರು. ಅದರಂತೆ ಎಲ್ಲಾ 14 ನಿವೇಶನಗಳನ್ನು ಮುಡಾ ವಾಪಸ್ ಪಡೆದುಕೊಂಡು, ಪಾರ್ವತಿ ಅವರ ಹೆಸರಿನಲ್ಲಿದ್ದ ಕ್ರಯಪತ್ರ (ಸೇಲ್ ಡೀಡ್)ವನ್ನು ರದ್ದು ಮಾಡಿದೆ.
ಪಾರ್ವತಿ ಸಿದ್ದರಾಮಯ್ಯ ಅವರು ಸ್ವಇಚ್ಛೆಯಿಂದ ಸೈಟ್ ವಾಪಸ್ ಕೊಟ್ಟಿದ್ದಾರೆ. ಅದರಂತೆ ಕಾನೂನು ಸಲಹೆ ಪಡೆದು ನಾವು ಪಾರ್ವತಿ ಅವರ ಹೆಸರಿನಲ್ಲಿದ್ದ 14 ಸೈಟ್ ಗಳ ಸೇಲ್ ಡೀಡ್ ರದ್ದು ಮಾಡಿದ್ದೇವೆ. ಈಗ ಮುಖ್ಯಮಂತ್ರಿ ಪತ್ನಿಗೆ ಹಂಚಿಕೆ ಮಾಡಲಾಗಿದ್ದ ಆ 14 ನಿವೇಶನ ಮುಡಾ ವ್ಯಾಪ್ತಿಗೆ ಬಂದಿವೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೂ ತಂದಿದ್ದೇವೆ ಎಂದು ಮುಡಾ ಆಯುಕ್ತ ರಘುನಂದನ್ ತಿಳಿಸಿದರು.ಕಾನೂನಲ್ಲಿ ಅವಕಾಶ ಇದೆ:
ಸೈಟ್ ವಾಪಸ್ ಪಡೆಯಲು ಅವಕಾಶ:
24 ಗಂಟೆಯಲ್ಲಿ ಕಾನೂನು ಪ್ರಕಾರ ನಿವೇಶನ ರದ್ದು ಮಾಡುವ ಅವಕಾಶವಿದೆ. ನಮ್ಮಲ್ಲಿರುವ ವಕೀಲರು, ತಜ್ಞರ ಬಳಿಯೂ ಈ ಕುರಿತು ಅಭಿಪ್ರಾಯ ಕೇಳಿದ್ದೇವೆ. ಅವರೂ ಅವಕಾಶ ಇದೆ ಎಂದು ಹೇಳಿದ್ದಾರೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ. ಹಾಗೆಯೇ ನಿವೇಶನ ವಾಪಸ್ ಕೊಟ್ಟಿರುವುದು ಮುಡಾದಲ್ಲಿ ಇದೇ ಮೊದಲು. ಇದರಿಂದ ಮುಡಾಗೆ ಅನಕೂಲವಾಗಲಿದೆ. ಮುಂದೆ ಯಾರೇ ಸೈಟ್ ಅನ್ನು ವಾಪಸ್ ಕೊಟ್ಟರೂ ಇಷ್ಟೇ ವೇಗವಾಗಿ ವಾಪಸ್ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈಗಲೂ ಸೈಟ್ ಮಾಲಿಕತ್ವ ಪಾರ್ವತಿ ಅವರದೇ: ತಜ್ಞರು ಕನ್ನಡಪ್ರಭ ವಾರ್ತೆ ಮೈಸೂರು
ಖಾತೆ ಇರುವುದು ಕೇವಲ ಕಂದಾಯ ಪಾವತಿಸುವ ಪ್ರಕ್ರಿಯೆಗೆ ಮಾತ್ರ. ಖಾತೆಯಿಂದ ಮಾಲೀಕತ್ವ ಬರುವುದೂ ಇಲ್ಲ, ಬದಲಾಗುವುದೂ ಇಲ್ಲ, ರದ್ದಾಗುವುದೂ ಇಲ್ಲ. ನೋಂದಾಯಿತ ಟೈಟಲ್ ಡೀಡ್/ಕ್ರಯಪತ್ರದ ಆಧಾರದ ಮೇಲೆ ಪಾರ್ವತಿಯವರಿಗೆ ಬಂದ 14 ನಿವೇಶನಗಳ ಹಕ್ಕು ಕೇವಲ ಖಾತಾ ರದ್ದತಿ ಮೂಲಕ ಬದಲಾಗದು. ನೋಂದಾಯಿತ ಪತ್ರದ ಮೂಲಕ ಬರುವ ಹಕ್ಕು ನೋಂದಾಯಿತ ಪತ್ರದ ಮೂಲಕವೇ ಬದಲಾಗಬೇಕು. ಅಂದರೆ ಪಾರ್ವತಿಯವರು ಆ 14 ನಿವೇಶನಗಳನ್ನು ಪಾರ್ವತಿ ಅವರು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿ ನೋಂದಾಯಿತ ಪತ್ರಗಳ ಮೂಲಕ ಪ್ರಾಧಿಕಾರಕ್ಕೆ ಮರಳಿಸಬಹುದು. ತದನಂತರವಷ್ಟೇ ಆ ನಿವೇಶನಗಳ ಖಾತೆ ರದ್ದಾಗಲು ಸಾಧ್ಯ ಎಂದು ನ್ಯಾಯವಾದಿ ಪಿ.ಜೆ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.