ಕಟ್ಟಡ, ನಿವೇಶನ ಕಡತಕ್ಕಾಗಿ 140 ಕಿ.ಮೀ. ಅಲೆದಾಟ

KannadaprabhaNewsNetwork |  
Published : Aug 22, 2026, 02:30 AM IST
ಜನರುಹ್ಈರಾಣ | Kannada Prabha

ಸಾರಾಂಶ

ಕಾರ್ಕಳ ತಾಲೂಕಿನ ಗ್ರಾಮಗಳ ಜನರು ಕಟ್ಟಡ ನಿರ್ಮಾಣ ಹಾಗೂ ನಿವೇಶನ ಅಭಿವೃದ್ಧಿಗೆ ಸಂಬಂಧಿಸಿದ ಕಡತಗಳಿಗಾಗಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಗೆ ಪದೇಪದೇ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಂ ಅಜೆಕಾರು ಕಾರ್ಕಳ: ಕಾರ್ಕಳ ತಾಲೂಕಿನ ಗ್ರಾಮಗಳ ಜನರು ಕಟ್ಟಡ ನಿರ್ಮಾಣ ಹಾಗೂ ನಿವೇಶನ ಅಭಿವೃದ್ಧಿಗೆ ಸಂಬಂಧಿಸಿದ ಕಡತಗಳಿಗಾಗಿ ಕಾಪು ಯೋಜನಾ ಪ್ರಾಧಿಕಾರದ ಕಚೇರಿಗೆ ಪದೇಪದೇ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ಪ್ರಯಾಣದ ಜತೆಗೆ ಕಡತ ವಿಲೇವಾರಿಯಲ್ಲೂ ವಿಳಂಬವಾಗುತ್ತಿರುವುದರಿಂದ ಸಾರ್ವಜನಿಕರು ತೀವ್ರವಾಗಿ ಹೈರಾಣಾಗಿದ್ದಾರೆ. ಕಡತಕ್ಕಾಗಿ 140 ಕಿ.ಮೀ ಪ್ರಯಾಣ!: ಕಾರ್ಕಳ ಹಾಗೂ ಕಾಪು ತಾಲೂಕುಗಳಿಗೆ ಒಂದೇ ಯೋಜನಾ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನ ಈದು, ಬೋಳೆಟ್ಟು ಸೇರಿದಂತೆ ಹಲವು ದೂರದ ಗ್ರಾಮಗಳ ಜನರು ಯೋಜನಾ ಪ್ರಾಧಿಕಾರದ ಅನುಮತಿ ಹಾಗೂ ದಾಖಲೆಗಳಿಗಾಗಿ ಕಾಪುವಿಗೆ ತೆರಳಬೇಕಾಗಿದೆ. ಕೆಲವು ಪ್ರದೇಶಗಳಿಂದ ಕಾಪುವಿಗೆ ಸುಮಾರು 140 ಕಿ.ಮೀ.ವರೆಗೆ ಪ್ರಯಾಣಿಸಬೇಕಾಗುತ್ತದೆ.

ಒಂದು ಕಡತದ ವಿಚಾರವಾಗಿ ಒಂದಕ್ಕಿಂತ ಹೆಚ್ಚು ಬಾರಿ ಕಚೇರಿಗೆ ತೆರಳಬೇಕಾದರೆ ಸಾರ್ವಜನಿಕರ ಸಂಕಷ್ಟ ಇನ್ನಷ್ಟು ಹೆಚ್ಚುತ್ತಿದೆ. ಇದರಿಂದ ಪ್ರಯಾಣ ವೆಚ್ಚದ ಜತೆಗೆ ಒಂದು ದಿನದ ಕೆಲಸವೂ ನಷ್ಟವಾಗುತ್ತಿದೆ. ಕಡತದಲ್ಲಿ ಸಣ್ಣಪುಟ್ಟ ತಿದ್ದುಪಡಿ ಅಥವಾ ಹೆಚ್ಚುವರಿ ದಾಖಲೆ ಬೇಕಾದರೂ ಮತ್ತೆ ಕಾಪುವಿನತ್ತ ಪ್ರಯಾಣಿಸಬೇಕಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಕಾರ್ಕಳ ತಾಲೂಕಿನಲ್ಲಿ 39 ಕಂದಾಯ ಗ್ರಾಮಗಳು, 27 ಗ್ರಾಮ ಪಂಚಾಯಿತಿಗಳು, ಒಂದು ಪುರಸಭೆ ಹಾಗೂ ಅಜೆಕಾರು ಮತ್ತು ಕಾರ್ಕಳ ಎಂಬ ಎರಡು ಹೋಬಳಿಗಳಿವೆ. ಕಾಪು ತಾಲೂಕಿನಲ್ಲಿ 30 ಕಂದಾಯ ಗ್ರಾಮಗಳು, 16 ಗ್ರಾಮ ಪಂಚಾಯಿತಿಗಳು ಹಾಗೂ ಒಂದು ಹೋಬಳಿ ಇದೆ. ಇಷ್ಟು ವಿಶಾಲ ವ್ಯಾಪ್ತಿಯ ಪ್ರದೇಶಗಳ ಯೋಜನಾ ಸಂಬಂಧಿತ ಕೆಲಸಗಳು ಒಂದೇ ವ್ಯವಸ್ಥೆಯಡಿ ನಡೆಯುತ್ತಿರುವುದರಿಂದ ಕಾರ್ಕಳ ಭಾಗದ ಜನರಿಗೆ ಸೇವೆ ಪಡೆಯಲು ದೂರದ ಪ್ರಯಾಣ ಅನಿವಾರ್ಯವಾಗಿದೆ.

ಈ ಹಿಂದೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ದೊರೆಯುತ್ತಿದ್ದ ಕಟ್ಟಡ ಪರವಾನಿಗೆ ಸೇರಿದಂತೆ ಹಲವು ಅಧಿಕಾರಗಳು ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಬಂದ ಬಳಿಕ ಸಮಸ್ಯೆ ಹೆಚ್ಚಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಸಿಂಗಲ್ ಲೇಔಟ್ ಅನುಮೋದನೆ, ಭೂ ಪರಿವರ್ತನೆ ನಂತರದ 9/11 ದಾಖಲೆ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ವಿಳಂಬವಾಗುತ್ತಿದೆ ಎನ್ನಲಾಗಿದೆ. ಭೂ ಪರಿವರ್ತನೆ ಪೂರ್ಣಗೊಂಡ ಬಳಿಕವೂ 9/11 ದಾಖಲೆ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾದ ಸಂದರ್ಭಗಳಿವೆ ಎಂಬ ಆರೋಪ ಕೇಳಿಬಂದಿದೆ.ಎರಡು ತಾಲೂಕಿನ ಹೊಣೆ: ಕಾಪು ಹಾಗೂ ಕಾರ್ಕಳ ಎರಡೂ ತಾಲೂಕುಗಳ ಯೋಜನಾ ಸಂಬಂಧಿತ ಕೆಲಸಗಳಿಗೆ ಒಬ್ಬರೇ ಇಂಜಿನಿಯರ್ ಕಾರ್ಯನಿರ್ವಹಿಸುತ್ತಿರುವುದು ಕೂಡ ಕಡತ ವಿಲೇವಾರಿ ವಿಳಂಬಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗೆ ಅವರಿಗೆ ಎಸ್‌ಐಆರ್‌ ಕರ್ತವ್ಯವನ್ನೂ ನೀಡಿರುವುದರಿಂದ ಯೋಜನಾ ಪ್ರಾಧಿಕಾರದ ಕೆಲಸಗಳಿಗೆ ಸಮರ್ಪಕ ಸಮಯ ನೀಡಲು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನವಿದೆ. ಕಾರ್ಕಳಕ್ಕೆ ವಾರದಲ್ಲಿ ಮೀಸಲಾದ ದಿನದಲ್ಲಿ ಇತರ ಕರ್ತವ್ಯಗಳ ಒತ್ತಡ ದಿಂದ ಅಧಿಕಾರಿಗಳನ್ನು ಭೇಟಿಯಾಗಲು ಸಾಧ್ಯವಾಗದ ಪರಿಸ್ಥಿತಿ ಇದೆ.

ಅಲೆದಾಟಕ್ಕೆ ಕೊನೆ ಯಾವಾಗ?: ಸಾರ್ವಜನಿಕರ ಸಮಸ್ಯೆಯನ್ನು ಪರಿಗಣಿಸಿ ಕಾರ್ಕಳ ಭಾಗದ ಅರ್ಜಿಗಳ ತ್ವರಿತ ವಿಲೇವಾರಿಗೆ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಬೇಕು, ಅಗತ್ಯವಿದ್ದಲ್ಲಿ ಹೆಚ್ಚುವರಿ ಇಂಜಿನಿಯರ್‌ರನ್ನು ನೇಮಿಸುವುದು ಹಾಗೂ ಕಾರ್ಕಳಕ್ಕೆ ಮೀಸಲಾದ ದಿನದಂದು ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.ಕಾಪು ಪ್ರಾಧಿಕಾರದ ಇಂಜಿನಿಯರ್ ಗೆ ಎಸ್ ಐ ಅರ್ ಡ್ಯೂಟಿ ನೀಡಲಾಗಿಲ್ಲ. ಕಾರ್ಯವ್ಯಾಪ್ತಿಯು ಹೆಚ್ಚಾಗಿದೆ.ಕಡತ ವಿಲೆವಾರಿಯಲ್ಲಿ ವಿಳಂಬವಾದರೆ ದೂರು ಬಂದರೆ ಕ್ರಮ‌ಕೈಗೊಳ್ಳಲಾಗುವುದು.

-ಅಬಿದ್ ಗದ್ಯಾಳ್. ಅಪರ ಜಿಲ್ಲಾಧಿಕಾರಿ ಉಡುಪಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಲಮಟ್ಟಿ ಜಲಾಶಯ ಪರಿಶೀಲಿಸಿದ ತಜ್ಞರ ತಂಡ
ಎಸ್ಡಿಎಂಎಫ್ ಕಾಮಗಾರಿ ಪರಿಶೀಲಿಸಿದ ಡಿಸಿ