ಕನ್ನಡಪ್ರಭ ವಾರ್ತೆ ಬಾಗಲಕೋಟೆ ಜಮಖಂಡಿ ನಗರಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಶುಕ್ರವಾರ ಭೇಟಿ ನೀಡಿ ಶಾಲಾ ಕಟ್ಟಡ, ನಗರಸಭೆ ಚಟುವಟಿಕೆಗಳು ಹಾಗೂ ಎಸ್‌ಡಿಎಂಎಫ್ ಅನುದಾನದಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಮಖಂಡಿ ನಗರಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಅವರು ಶುಕ್ರವಾರ ಭೇಟಿ ನೀಡಿ ಶಾಲಾ ಕಟ್ಟಡ, ನಗರಸಭೆ ಚಟುವಟಿಕೆಗಳು ಹಾಗೂ ಎಸ್‌ಡಿಎಂಎಫ್ ಅನುದಾನದಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.ಜಮಖಂಡಿ ನಗರದ ಪರಶುರಾಮ ಬಾಹುರಾವ ಪಟವರ್ಧನ(ಪಿ.ಬಿ.ಹೈಸ್ಕೂಲ) ಶಾಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, 1979ರಲ್ಲಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡವನ್ನು ವೀಕ್ಷಿಸಿದರು. ಕಟ್ಟಡದ ಸ್ಥಿತಿಗತಿಯನ್ನು ಪರಿಶೀಲಿಸಿ, ಕಟ್ಟಡ ಸುಸ್ಥಿತಿಯಲ್ಲಿರುವುದರಿಂದ ಅದನ್ನು ಸಮರ್ಪಕವಾಗಿ ಹಾಗೂ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಶಾಲಾ ಶಿಕ್ಷಕರಿಗೆ ಸೂಚಿಸಿದರು. ಶಾಲೆಯ ಕಿಟಕಿ, ಬಾಗಿಲು ಹಾಗೂ ಮೇಲ್ಚಾವಣಿಗೆ ಅಗತ್ಯವಿರುವ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು. ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ಶಿಕ್ಷಕರ ಬೋಧನಾ ವಿಧಾನ, ಮಕ್ಕಳ ಕಲಿಕಾ ಚಟುವಟಿಕೆ ಹಾಗೂ ಮಧ್ಯಾಹ್ನದ ಬಿಸಿಯೂಟದ ಕುರಿತು ಮಾಹಿತಿ ಪಡೆದುಕೊಂಡರು.ನಂತರ ಜಮಖಂಡಿ ನಗರಸಭೆ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು, ಆಸ್ತಿ ತೆರಿಗೆ, ನೀರಿನ ಕರ ಸಂಗ್ರಹ ಹಾಗೂ ನಗರಸಭೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಪೌರಾಯುಕ್ತರು ಮತ್ತು ಸಿಬ್ಬಂದಿಯೊಂದಿಗೆ ವಿವರವಾಗಿ ಚರ್ಚೆ ನಡೆಸಿದರು. ನಗರಸಭೆಯ ಆದಾಯದ ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು, ತೆರಿಗೆ ಸಂಗ್ರಹವನ್ನು ಸುಧಾರಿಸುವುದು ಹಾಗೂ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸುವ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.ಬಳಿಕ ಎಸ್‌ಡಿಎಂಎಫ್ ಅನುದಾನದಡಿ ಕೈಗೊಂಡಿರುವ ₹ 179 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು. ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ಅನುಷ್ಠಾನದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ವೇಳೆ ನಗರಸಭೆ ಅಭಿಯಂತರರೊಂದಿಗೆ ಲಕ್ಕನಕೆರೆ ಬೈಪಾಸ್ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ ಜಿಲ್ಲಾಧಿಕಾರಿಗಳು, ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಸಾರ್ವಜನಿಕರಿಗೆ ಗರಿಷ್ಠ ಅನುಕೂಲವಾಗುವ ರೀತಿಯಲ್ಲಿ ಕೈಗೊಳ್ಳುವಂತೆ ಸೂಚಿಸಿದರು.ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ, ಉತ್ತಮ ರಸ್ತೆ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ಭೇಟಿ ಸಂದರ್ಭದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ್ ಅನೀಲ ಬಡಿಗೇರ, ಪೌರಾಯುಕ್ತ ಜ್ಯೋತಿ ಗಿರೀಶ.ಎಸ್, ಅಭಿಯಂತರಾದ ಸುಭಾಷ ಚೌಗಲಾ, ವೈಶಾಲಿ ಹಿಪ್ಪರಗಿ ಹಾಗೂ ಕಂದಾಯ ಅಧಿಕಾರಿ ಯಲ್ಲಪ್ಪ ಬಿದರಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.