ಸಿಎಂ ಸೇರಿ 140 ಶಾಸಕರು ನನ್ನ ಬೆಂಬಲಕ್ಕಿದ್ದಾರೆ: ಡಿಕೆಶಿ

KannadaprabhaNewsNetwork |  
Published : Jan 20, 2026, 02:15 AM IST
ಡಿಕೆಶಿ | Kannada Prabha

ಸಾರಾಂಶ

ಮುಖ್ಯಮಂತ್ರಿ, ರಾಹುಲ್‌ ಗಾಂಧಿ, ಹೈಕಮಾಂಡ್‌ ನಾಯಕರು ನನ್ನೊಂದಿಗೆ ಏನು ಚರ್ಚೆ ಮಾಡಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಹೇಳಲಾಗದು. ಮುಖ್ಯಮಂತ್ರಿ ಅವರು ಸೇರಿ ಎಲ್ಲ 140 ಶಾಸಕರು ನನ್ನ ಬೆಂಬಲಕ್ಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ, ರಾಹುಲ್‌ ಗಾಂಧಿ, ಹೈಕಮಾಂಡ್‌ ನಾಯಕರು ನನ್ನೊಂದಿಗೆ ಏನು ಚರ್ಚೆ ಮಾಡಿದ್ದಾರೆ ಎಂಬುದನ್ನು ಸಾರ್ವಜನಿಕವಾಗಿ ಹೇಳಲಾಗದು. ಮುಖ್ಯಮಂತ್ರಿ ಅವರು ಸೇರಿ ಎಲ್ಲ 140 ಶಾಸಕರು ನನ್ನ ಬೆಂಬಲಕ್ಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ನ ಎಲ್ಲ 140 ಶಾಸಕರು ನನ್ನ ಬೆಂಬಲಿಗರೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನನಗೆ ಬೆಂಬಲವಾಗಿದ್ದಾರೆ. ಸಿಎಂ ಮತ್ತು ನನ್ನ ನಡುವೆ ಏನು ಮಾತುಕತೆಯಾಗಿದೆ? ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಏನು ಮಾತಾಡಿದ್ದೇವೆ? ಎಲ್ಲರೂ ಮಾತನಾಡಿ ಏನು ತೀರ್ಮಾನ ಮಾಡಿದ್ದೇವೆ ಎಂಬುದು ಯಾರಿಗೂ ಗೊತ್ತಿಲ್ಲ. ಅದನ್ನು ಸಾರ್ವಜನಿಕವಾಗಿ ಹೇಳಲಾಗುವುದಿಲ್ಲ. ಎಲ್ಲವನ್ನೂ ಕಾಲವೇ ಉತ್ತರಿಸಲಿದೆ ಎಂದರು.

ಪಕ್ಷದ ಕೆಲಸಕ್ಕಾಗಿ ದಿಲ್ಲಿಗೆ ಹೋಗ್ತೇವೆ:

ದೆಹಲಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ರಾಜಕೀಯ, ಪಕ್ಷ ಮತ್ತು ಸರ್ಕಾರದ ಕೆಲಸಗಳಿಗಾಗಿ ನಾವು ದೆಹಲಿಗೆ ಹೋಗುತ್ತೇವೆ. ಈ ಬಾರಿ ದೆಹಲಿಗೆ ತೆರಳಿದಾಗ ನಾನು ಪಕ್ಷದ ನಾಯಕರೊಂದಿಗೆ ಕರ್ನಾಟಕದ ರಾಜಕೀಯ ಬೆಳವಣಿಗೆ, ಅಸ್ಸಾಂ ರಾಜ್ಯದ ಚುನಾವಣೆ, ಅಲ್ಲಿನ ರಾಜಕೀಯದ ಕುರಿತು ಚರ್ಚೆ ಮಾಡಿದ್ದೇನೆ. ಇನ್ನು, ಮಾಧ್ಯಮಗಳು ಅನಗತ್ಯವಾಗಿ ರಾಹುಲ್‌ರನ್ನು ನಾನು ಭೇಟಿಯಾಗಿಲ್ಲ ಎಂದು ಸುದ್ದಿ ಮಾಡಿದ್ದಾರೆ. ಒಂದು ದಿನ ರಾಹುಲ್‌ ಗಾಂಧಿ ಅವರೊಂದಿಗೆ ಚರ್ಚೆ ಮಾಡುತ್ತಿರುವ ಫೋಟೋ ಪ್ರಕಟಿಸಲಾಗಿದೆ, ಮರುದಿನ ಚರ್ಚೆಯೇ ಆಗಿಲ್ಲ ಎಂದು ಹೇಳಲಾಗಿದೆ. ಈ ವಿಚಾರದ ಕುರಿತು ಬೇರೆ ಏನನ್ನೂ ಚರ್ಚಿಸುವುದಿಲ್ಲ ಎಂದು ಸಿಡಿಮಿಡಿಗೊಂಡರು.ನಾಯಕತ್ವ ವಿಚಾರದಲ್ಲಿ ಗೊಂದಲಗಳಿಲ್ಲ:

ನಾಯಕತ್ವದ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್‌, ನಾಯಕತ್ವ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ನಾಯಕತ್ವ ವಿಚಾರವಾಗಿ ನಾವು ಈಗಾಗಲೇ ಚರ್ಚೆ ಮಾಡಿದ್ದು, ಹೈಕಮಾಂಡ್‌ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ನಾವೆಲ್ಲರೂ ಆ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಈ ಬಗ್ಗೆ ನಾನು ಮತ್ತು ಸಿಎಂ ಅವರು ಅನೇಕ ಬಾರಿ ಸ್ಪಷ್ಟಪಡಿಸಿದ್ದೇವೆ. ಹೀಗಾಗಿ ನಾಯಕತ್ವ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎಂದರು.

ಊಹಾಪೋಹಕ್ಕೆ ಆಸ್ಪದ ಬೇಡ:

ಕೆಲ ಮಾಧ್ಯಮಗಳಲ್ಲಿ ತಾವು ರಾಹುಲ್ ಭೇಟಿ ಮಾಡಿಲ್ಲ ಎಂದು ವರದಿ ಮಾಡಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್‌, ರಾಹುಲ್‌ ಗಾಂಧಿ ಅವರು ಭೇಟಿಗೆ ಸಮಯ ನೀಡುತ್ತಿಲ್ಲ ಎಂದು ವರದಿ ಮಾಡಲಾಗಿದೆ. ಅದರೊಂದಿಗೇ ರಾಹುಲ್‌ ಗಾಂಧಿ ಅವರೊಂದಿಗೆ ನಾನು ಸಭೆಯಲ್ಲಿ ಭಾಗವಹಿಸಿರುವ ಫೋಟೋವನ್ನೂ ಪ್ರಸಾರ ಮಾಡಲಾಗಿದೆ. ಈ ಊಹಾಪೋಹಕ್ಕೆ ಆಸ್ಪದ ನೀಡಬಾರದು. ಕಾಂಗ್ರೆಸ್‌ ಒಗ್ಗಟ್ಟಾಗಿದೆ. ಹೈಕಮಾಂಡ್‌ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಲಿದೆ. ನಮ್ಮ ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದು, ಅವರು ಹಾಗೂ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರ ನಿರ್ದೇಶನದಂತೆ ನಾವು ಸಾಗುತ್ತೇವೆ ಎಂದು ಸ್ಪಷ್ಟಪಡಿಸಿದರು.

ಶಾಸಕರು ಖುಷಿಯಿಂದ ಕಾಯ್ತಿರುತ್ತಾರೆ:

ನಿಮ್ಮ ಶಾಸಕರೇ ಚರ್ಚೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಶಾಸಕರಿಗೆ ಆಸೆ ಇರುತ್ತದೆ. ಅದರಲ್ಲಿ ತಪ್ಪೇನಿಲ್ಲ. ಆಸೆಗಳು ಸರಿಯಲ್ಲ ಎಂದು ಹೇಳಲಾಗದು. ನಾವು ಅವರ ಕಿವಿಯಲ್ಲಿ ಏನೋ ಹೇಳಿರುತ್ತೇವೆ. ಅವರು ಖುಷಿಯಿಂದ ಕಾಯುತ್ತಿರುತ್ತಾರೆ. ಇನ್ನು, ಪಕ್ಷ ಅಧಿಕಾರಕ್ಕೆ ತರಲು ನಾನೊಬ್ಬನೇ ಕಷ್ಟಪಟ್ಟಿಲ್ಲ. ಎಲ್ಲರೂ ಶ್ರಮಿಸಿದ್ದಾರೆ. 224 ಕ್ಷೇತ್ರಗಳಲ್ಲೂ ಕಾರ್ಯಕರ್ತರು ದುಡಿದಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ಕಾರ್ಯಕರ್ತರ ಶ್ರಮ ಸ್ಮರಿಸಬೇಕು ಎಂದರು.

ಹೈಕಮಾಂಡ್‌ ಒಳ್ಳೆಯ ಸುದ್ದಿ ನೀಡಲಿದೆ ಎಂದು ಡಿ.ಕೆ.ಸುರೇಶ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಪರವಾಗಿ ಜನ, ಮಾಧ್ಯಮ, ಬಿಜೆಪಿ, ಜೆಡಿಎಸ್‌ ಅವರೂ ಪ್ರಾರ್ಥಿಸಿ, ಒಳ್ಳೆಯದನ್ನು ಬಯಸುತ್ತಿದ್ದಾರೆ. ಕೆಲವರು ಟೀಕೆಯನ್ನೂ ಮಾಡುತ್ತಿದ್ದಾರೆ. ನನ್ನ ತಮ್ಮ, ನಮ್ಮ ಕಾರ್ಯಕರ್ತರು, ಮಾಧ್ಯಮ ಕೂಡ ಹೈಕಮಾಂಡ್‌ನ ಒಳ್ಳೆಯ ಸುದ್ದಿಯ ಬಗ್ಗೆ ಹೇಳುತ್ತಿವೆ. ಜತೆಗೆ ಸೇರುವುದು, ಜತೆಗೆ ಸೇರಿ ಚರ್ಚೆ ಮಾಡುವುದೂ ಒಳ್ಳೆಯ ಸುದ್ದಿಯೇ ಎಂದರು.ಇಂದು ದಾವೋಸ್‌ಗೆ ಡಿಸಿಎಂ ಡಿಕೆಶಿ:

ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮಂಗಳವಾರ ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಜ.18ರಂದು ಶಿವಕುಮಾರ್‌ ಅವರು ದಾವೋಸ್‌ ಪ್ರವಾಸ ನಿಗದಿಯಾಗಿತ್ತು. ಆದರೆ, ದೆಹಲಿಯಲ್ಲಿ ವರಿಷ್ಠರೊಂದಿಗಿನ ಸಭೆ ಹಿನ್ನೆಲೆಯಲ್ಲಿ ಪ್ರವಾಸ ರದ್ದು ಮಾಡಿದ್ದರು. ಅಲ್ಲದೆ, ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಉದ್ದೇಶದೊಂದಿಗೆ 3 ದಿನ ದೆಹಲಿಯಲ್ಲೇ ಉಳಿದಿದ್ದರು. ಈ ಬಗ್ಗೆ ಬಿಜೆಪಿಗರು ರಾಜಕೀಯಕ್ಕಾಗಿ ದಾವೋಸ್ ಪ್ರವಾಸ ಕೈಬಿಟ್ಟಿರುವುದು ಸರಿಯಲ್ಲ ಎಂದು ಟೀಕಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಶಿವಕುಮಾರ್‌, ಮಂಗಳವಾರ ದಾವೋಸ್‌ಗೆ ತೆರಳಲು ಅನುಮತಿ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಅವರು ಕೂಡ ದಾವೋಸ್‌ಗೆ ಹೋಗಲು ಹೇಳಿದ್ದಾರೆ. ವಿರೋಧ ಪಕ್ಷದ ಸ್ನೇಹಿತರೂ ನನಗೆ ಅದೇ ಸಲಹೆ ನೀಡುತ್ತಿದ್ದಾರೆ. ರಾಜ್ಯದ ಹಿತ ವಿಚಾರದಲ್ಲಿ ಕೆಲವೊಮ್ಮೆ ಅವರ ಸಲಹೆಗಳನ್ನು ಸ್ವೀಕರಿಸಬೇಕು ಎಂದರು.ದಾವೋಸ್ ಪ್ರವಾಸ ಕೈಬಿಟ್ಟಿರುವುದರ ಕುರಿತು ಬಿಜೆಪಿ ಟೀಕೆಗೆ ಉತ್ತರಿಸಿ, ಅವರ ಮಾತಿನಲ್ಲಿ ಅರ್ಥವಿದೆ. ತಪ್ಪು ಎಂದು ನಾನು ಹೇಳುವುದಿಲ್ಲ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವೋಸ್‌ ಶೃಂಗಕ್ಕೆ ಡಿಸಿಎಂ ಡಿಕೆಶಿ ಇಂದು ಪ್ರಯಾಣ - ಎಲ್ಲರ ಸಲಹೆ ಮೇರೆಗೆ ಭೇಟಿ
ಫೆಬ್ರವರಿಯಿಂದ ರಾಜ್ಯದಲ್ಲಿ ಎಸ್‌ಐಆರ್‌?