ದ್ವಿತೀಯ ಪಿಯುಸಿ ಪರೀಕ್ಷೆಗೆ ೧೪೧೮೭ ವಿದ್ಯಾರ್ಥಿಗಳು ನೋಂದಣಿ

KannadaprabhaNewsNetwork |  
Published : Feb 24, 2026, 02:30 AM IST
೨೩ಕೆಎಂಎನ್‌ಡಿ-೩ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಯುಸಿ ಪರೀಕ್ಷ್ಷೆ-೧ನ್ನು ಸುವ್ಯವಸ್ಥಿತವಾಗಿ ನಡೆಸುವ ಕುರಿತು ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. | Kannada Prabha

ಸಾರಾಂಶ

ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಯನ್ನು ತ್ರಿಸದಸ್ಯ ಸಮಿತಿಯಿಂದ ದೂರದ ಪರೀಕ್ಷಾ ಕೇಂದ್ರಗಳಾದ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರಕ್ಕೆ ಮುಂಚಿತವಾಗಿ ತಲುಪಿಸಲಾಗುವುದು. ಪ್ರಶ್ನೆ ಪತ್ರಿಗಳನ್ನು ಸಾಗಿಸುವ ಸಮಯದಲ್ಲಿ ಬಿಗಿ ಭದ್ರತೆ ಒದಗಿಸಿ, ಆಯಾಯ ಮಾರ್ಗದಲ್ಲಿ ರೂಟ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಫೆ.೨೮ರಿಂದ ಮಾ.೧೭ರವರೆಗೆ ಜಿಲ್ಲೆಯ ೨೭ ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಯಾವುದೇ ಲೋಪವಾಗದಂತೆ ಎಚ್ಚರ ವಹಿಸುವಂತೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಯುಸಿ ಪರೀಕ್ಷೆ-೧ನ್ನು ಸುವ್ಯವಸ್ಥಿತವಾಗಿ ನಡೆಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು ೧೪೧೮೭ ವಿದ್ಯಾರ್ಥಿಗಳು ನೋಂದಣಿಯಾಗಿದ್ದರೆ, ೧೦೯೬ ವಿದ್ಯಾರ್ಥಿಗಳು ಮರು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷೆ ಸಮಯದಲ್ಲಿ ಪರೀಕ್ಷಾ ಕೇಂದ್ರದ ೨೦೦ ಮೀಟರ್ ವ್ಯಾಪ್ತಿಯಲ್ಲಿ ಜೆರಾಕ್ಸ್ ಹಾಗೂ ಸೈಬರ್ ಕೇಂದ್ರ ಮುಚ್ಚಲಾಗುವುದು. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಯನ್ನು ತ್ರಿಸದಸ್ಯ ಸಮಿತಿಯಿಂದ ದೂರದ ಪರೀಕ್ಷಾ ಕೇಂದ್ರಗಳಾದ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರಕ್ಕೆ ಮುಂಚಿತವಾಗಿ ತಲುಪಿಸಲಾಗುವುದು. ಪ್ರಶ್ನೆ ಪತ್ರಿಗಳನ್ನು ಸಾಗಿಸುವ ಸಮಯದಲ್ಲಿ ಬಿಗಿ ಭದ್ರತೆ ಒದಗಿಸಿ, ಆಯಾಯ ಮಾರ್ಗದಲ್ಲಿ ರೂಟ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿರಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ನಡೆಯಲಿದ್ದು ೧೦ ಜನ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಸೀಸಿ ಟಿವಿ ಕಣ್ಗಾವಲು:

ದ್ವಿತೀಯ ಪಿಯುಸಿ ಪರೀಕ್ಷೆ ಸೀಸಿ ಟಿವಿ ಕಣ್ಗಾವಲಿನಲ್ಲಿ ನಡೆಯಲಿದ್ದು, ಒಟ್ಟು ೫೮೦ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಪರೀಕ್ಷಾ ಕೊಠಡಿಗಳಿಗೆ ಈಗಾಗಲೇ ಅಳವಡಿಸಲಾಗಿದೆ. ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲಿ ಸೀಸಿ ಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಪರೀಕ್ಷೆ ಸಮಯದಲ್ಲಿ ತಾಂತ್ರಿಕ ದೋಷ ಉಂಟಾಗದಂತೆ ಕ್ರಮ ವಹಿಸಬೇಕು. ಪರೀಕ್ಷೆ ನಡೆಯುವ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೀಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.

ಮೂಲ ಸೌಕರ್ಯ ಕಲ್ಪಿಸಿ:

ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆ ಹಾಗೂ ಪರೀಕ್ಷಾ ಕೊಠಡಿಯಲ್ಲಿ ಗಡಿಯಾರದ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿ. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಆರೋಗ್ಯ ಸಿಬ್ಬಂದಿ, ಪೊಲೀಸ್ ಬಂದೋಬಸ್ತ್ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಗ್ರಾಮೀಣ ಭಾಗದಿಂದ ಮಕ್ಕಳು ಬರುವುದರಿಂದ ಬಸ್‌ಗಳು ಪರೀಕ್ಷಾ ದಿನದಂದು ವಿಳಂಬವಾಗದಂತೆ ಕ್ರಮ ವಹಿಸುವಂತೆ ಹೇಳಿದರು.

ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಸ್ಮಾರ್ಟ್ ಡಿವೈಸ್‌ಗಳನ್ನು ಕೊಠಡಿಗೆ ತರಲು ಬೀಡಬೇಡಿ. ಪರೀಕ್ಷೆ ಮೇಲ್ವಿಚಾರಣೆಗೆ ನೇಮಿಸಿರುವ ಶಿಕ್ಷಕರು ಮಾರ್ಗಸೂಚಿಗೆ ಬದ್ಧರಾಗಿ ಕರ್ತವ್ಯ ಪಾಲಿಸಬೇಕು. ಪರೀಕ್ಷೆ ನಡೆಯುವ ವೇಳೆ ಚಿತ್ರೀಕರಣ ಮಾಡಲು ಯಾರಿಗೂ ಅನುಮತಿ ನೀಡಬಾರದು ಎಂದರು.

ಜಿಪಂ ಸಿಇಒ ಕೆ.ಆರ್ ನಂದಿನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ ಚಲುವಯ್ಯ, ತಹಸೀಲ್ದಾರ್‌ಗಳಾದ ವಿಶ್ವನಾಥ್, ಆದರ್ಶ್, ಅಶೋಕ್, ಚೇತನ ಯಾದವ್, ನಗರಾಭಿವೃದ್ಧಿ ಕೋಶಾಕಾರಿ ನರಸಿಂಹಮೂರ್ತಿ ಸೇರಿದಂತೆ ಇನ್ನಿತರ ಅಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಯಕರ್ತರು ಒಪ್ಪಿದ್ದಲ್ಲಿ ಜೆಡಿಎಸ್‌ ಸೇರ್ಪಡೆ: ಹೂಡಿ ವಿಜಯಕುಮಾರ್‌
ಬೇಡನ್ ಪಾವೆಲ್ ಆದರ್ಶಗಳು ವ್ಯಕ್ತಿತ್ವ ನಿರ್ಮಾಣಕ್ಕೆ ದಾರಿದೀಪ