ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಉಚಿತ ಪ್ರಸಾದ ಮತ್ತು ವಸತಿ ಇರುವ ಹಾಸ್ಟೆಲ್‌ನಲ್ಲಿ ಪ್ರಸಕ್ತ ವರ್ಷ ಪ್ರವೇಶ ಬಯಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ 1427.
ಇದು ಕೇವಲ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶಕ್ಕಾಗಿ ನಡೆದಿರುವ ಪ್ರವೇಶ ಪರೀಕ್ಷೆಯಾಗಿದೆ. ಇದಕ್ಕೆ 1500 ವಿದ್ಯಾರ್ಥಿಗಳು ಹಾಜರಾಗಿದ್ದು, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಹಾಸ್ಟೆಲ್‌ಗೆ ಸೇರಿಕೊಳ್ಳುತ್ತಾರೆ.
ಈಗಾಗಲೇ ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್‌ನಲ್ಲಿ 3500 ವಿದ್ಯಾರ್ಥಿಗಳು ಇದ್ದು, ಅದರಲ್ಲಿ ಪಿಯುಸಿ ದ್ವಿತೀಯ ವರ್ಷದಲ್ಲಿ ತೇರ್ಗಡೆಯಾದ, ಎಸ್‌ಎಸ್‌ಎಲ್‌ಸಿಯಲ್ಲಿ ತೇರ್ಗಡೆಯಾದ ಮತ್ತು ಪದವಿ ಅಂತಿಮ ವರ್ಷದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಹೊರಹೋಗುತ್ತಾರೆ. ಹೀಗೆ ಹೊರಹೋಗುವ ವಿದ್ಯಾರ್ಥಿಗಳ ಸಂಖ್ಯೆ 500-600 ಮಾತ್ರ. ಅಂದರೆ, ಮೂರು ಸಾವಿರ ವಿದ್ಯಾರ್ಥಿಗಳು ಈಗಾಗಲೇ ಹಾಸ್ಟೆಲ್‌ನಲ್ಲಿ ಇದ್ದಾರೆ. ಈಗ ಕೇವಲ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶ ಬಯಸಿ ಪರೀಕ್ಷೆ ಬರೆದಿದ್ದಾರೆ.ಇವರಲ್ಲದೆ ಪದವಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಹಾಸ್ಟೆಲ್ ಸೇರಿಕೊಳ್ಳುವುದರಿಂದ ಈ ಬಾರಿ ಗವಿಮಠ ಹಾಸ್ಟೆಲ್‌ನಲ್ಲಿ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಗವಿಮಠ ಹಾಸ್ಟೆಲ್ ಸೇರಲು ಪೈಪೋಟಿ: ಶ್ರೀ ಗವಿಸಿದ್ಧೇಶ್ವರ ಹಾಸ್ಟೆಲ್‌ನಲ್ಲಿದ್ದುಕೊಂಡು ಕಲಿಯುವುದಕ್ಕಾಗಿ ಈಗ ಪೈಪೋಟಿ ಏರ್ಪಟ್ಟಂತೆ ಕಾಣುತ್ತಿದೆ. ಕೊಪ್ಪಳ ಅಷ್ಟೇ ಅಲ್ಲ, ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದರು. ಬೆರಳೆಣಿಕೆಯಷ್ಟು ರಾಜ್ಯದ ಮೂಲೆ ಮೂಲೆಯಿಂದಲೂ ಆಗಮಿಸಿದ್ದು ವಿಶೇಷ.