ಒಳಚರಂಡಿ ವ್ಯವಸ್ಥೆ ಸಮಗ್ರ ಅಭಿವೃದ್ಧಿಗೆ ₹೧೪೪ ಕೋಟಿ ಅನುದಾನ ಅವಶ್ಯ

KannadaprabhaNewsNetwork |  
Published : Mar 23, 2025, 01:32 AM IST
ಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು ಸಮಗ್ರ ಅಭಿವೃದ್ಧಿಗಾಗಿ ೧೪೪ ಕೋಟಿ ಅನುದಾನದ ಅವಶ್ಯವಿದೆ ಶಾಸಕ ಪುಟ್ಟರಂಗಶೆಟ್ಟಿ | Kannada Prabha

ಸಾರಾಂಶ

ಚಾಮರಾಜನಗರಲ್ಲಿ ಚೆಲುವ ಚಾಮರಾಜನಗರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಸಿರು ನಿಶಾನೆ ತೋರಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು ಸಮಗ್ರ ಅಭಿವೃದ್ಧಿಗಾಗಿ ₹೧೪೪ ಕೋಟಿ ಅನುದಾನದ ಅವಶ್ಯವಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಸೇರಿದಂತೆ ಪಟ್ಟಣದ ಹಲವು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಸಂತೇಮರಹಳ್ಳಿ ವೃತ್ತದಲ್ಲಿ ಶನಿವಾರ ಚೆಲುವ ಚಾಮರಾಜನಗರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಎಂ.ಎಸ್.ಐ.ಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿದರು. ಚಾಮರಾಜನಗರ ನಾಲ್ಕೂ ಕಡೆಯು ಅಭಿವೃದ್ಧಿ ಹೊಂದುತ್ತಿದೆ. ಮುಖ್ಯವಾಗಿ ಪಟ್ಟಣದ ಜನರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಅಗತ್ಯವಾಗಿದೆ. ಸುಂದರ ಪಟ್ಟಣಕ್ಕಾಗಿ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯಬೇಕು. ಸ್ವಚ್ಛತೆಗೆ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಸಹಕಾರವು ಬೇಕು ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಬಹಳ ಉತ್ಸಾಹದಿಂದ ಸ್ವಚ್ಛತಾ ಅಭಿಯಾನ ಆರಂಭಿಸಿದ್ದೇವೆ. ಸ್ವಚ್ಛತೆ ಎನ್ನುವುದು ನಗರಸಭೆಯ ಕೆಲಸ ಮಾತ್ರವಲ್ಲ. ಸ್ವಚ್ಛತಾ ಕಾರ್ಯದಲ್ಲಿ ಎಲ್ಲರ ಸಹಭಾಗಿತ್ವ ಅಗತ್ಯವಾಗಿದೆ. ಮುಂದಿನ ಒಂದು ವರ್ಷದೊಳಗೆ ಚಾಮರಾಜನಗರ ಸ್ವಚ್ಛ, ಸುಂದರ ಪಟ್ಟಣವಾಗುವ ನಿಟ್ಟಿನಲ್ಲಿ ಪಟ್ಟಣದ ಎಲ್ಲಾ ೩೧ವಾರ್ಡ್‌ಗಳಲ್ಲಿಯೂ ಪ್ರತಿವಾರ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಚೆಲುಚ ಚಾಮರಾಜನಗರಕ್ಕಾಗಿ ಎಲ್ಲರೂ ಒಗ್ಗೂಡಿ ಶ್ರಮಿಸಬೇಕಾಗಿದೆ. ಇದಕ್ಕಾಗಿ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ, ನೆರವು ಬೇಕಾಗಿದೆ ಎಂದರು.

ಸ್ವಚ್ಛತೆ ಒಂದು ದಿನದ ಕಾರ್ಯಕ್ರಮವಾಗಬಾರದು. ನಿರಂತರವಾಗಿರಬೇಕು. ಎಲ್ಲಾ ವಾರ್ಡ್‌ಗಳಲ್ಲಿ ಜನಾಂದೋಲನ ಮಾದರಿಯಲ್ಲಿ ಸ್ವಚ್ಛತಾ ಅರಿವು ಕಾರ್ಯಕ್ರಮ ನಡೆಯಬೇಕು. ಎಲ್ಲಾ ಜನಪ್ರತಿನಿಧಿಗಳು, ನಾಗರಿಕರು ಸ್ವಚ್ಚತಾ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮನೆಮನೆಗಳಲ್ಲಿ, ಅಂಗಡಿಗಳ ಹಂತದಲ್ಲಿಯೇ ಹಸಿ ಕಸ, ಒಣಕಸ ಬೇರ್ಪಡಿಸಿ ಸ್ವಚ್ಛತಾ ವಾಹನಗಳಿಗೆ ನೀಡಬೇಕು. ಕಸವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಪ್ರತಿದಿನ ಬೆಳ್ಳಂಬೆಳಿಗ್ಗೆಯೇ ಸ್ವಚ್ಛತೆ ಕಾರ್ಯದಲ್ಲಿ ತೊಡುಗುವ ಪೌರಕಾರ್ಮಿಕರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ನಗರಸಭಾ ಅಧ್ಯಕ್ಷ ಎಸ್.ಸುರೇಶ್, ಉಪಾಧ್ಯಕ್ಷೆ ಮಮತ, ಎಸ್ಪಿ ಡಾ.ಬಿ.ಟಿ.ಕವಿತ, ಇತರೆ ಗಣ್ಯರು ನಗರದ ದೊಡ್ಡಂಗಡಿ ಬೀದಿಯುದ್ದಕ್ಕೂ ಕಸಪೊರಕೆ ಹಿಡಿದು ರಸ್ತೆಯನ್ನು ಸ್ವಚ್ಛಗೊಳಿಸುವ ಮೂಲಕ ಚಾಮರಾಜನಗರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಹುರುಪು ತಂದರು. ಪಟ್ಟಣದ ಸ್ವಚ್ಛತೆಗಾಗಿ ನಾಗರಿಕರನ್ನು ಪ್ರೇರೇಪಿಸಿದರು.ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್ಪಿ ಡಾ.ಕವಿತ ರಸ್ತೆಯ ಅಂಗಡಿಗಳ ಮಾಲಿಕರೊಂದಿಗೆ ಮಾತನಾಡಿ, ರಸ್ತೆಯ ಮುಂಭಾಗದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯದೇ ನಿಗದಿತ ಸ್ಥಳದಲ್ಲೇ ಹಾಕಬೇಕು. ಪ್ಲಾಸ್ಟಿಕ್ ಬಳಸಬಾರದು. ಅಂಗಡಿ ಮುಂದಿನ ಚರಂಡಿಯಲ್ಲಿ ಕಸ ಹಾಕದಂತೆ ಮಾಲಿಕರ ಮನವೊಲಿಸಿದರು. ಶುದ್ಧ ಗಾಳಿ, ಶುದ್ಧ ಜಲಕ್ಕಾಗಿ ಸ್ವಚ್ಛತೆಯ ಅರಿವನ್ನು ಸಾರ್ವಜನಿಕರಿಗೆ ಮೂಡಿಸಿದರು.ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ನಗರಸಭೆ ಸದಸ್ಯರಾದ ಕುಮುದ, ಬಸವಣ್ಣ, ಚಂದ್ರಶೇಖರ್, ಚಿನ್ನಮ್ಮ, ಮಂಜುನಾಥ್, ಶಿವರಾಜು, ಪೌರಾಯುಕ್ತ ಎಸ್.ವಿ. ರಾಮದಾಸ್, ಪಟ್ಟಣದ ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಸ್ವಚ್ಚತಾ ಅಭಿಯಾನ ಕಾರ್ಯಕ್ರಮದಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ