ಕೊಪ್ಪಳ:
ಕೇಂದ್ರ ತಂಡಕ್ಕೆ ಜಿಲ್ಲೆಯಲ್ಲಿನ ಹಸಿರು ಬರ ಮನವರಿಕೆಯಾಗಿದ್ದು, ₹೧೪೫೦ ಕೋಟಿ ಹಾನಿಯಾಗಿರುವ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಳಿನ್ ಅತುಲ್ ಹೇಳಿದ್ದಾರೆ.ಕೇಂದ್ರ ಬರ ಅಧ್ಯಯನ ತಂಡಕ್ಕೆ ಜಿಲ್ಲೆಯ ಹಾನಿಯ ಕುರಿತು ದಾರಿಯುದ್ದಕ್ಕೂ ಮಾಹಿತಿ ನೀಡಿ, ಪ್ರಸ್ತಾವನೆ ಸಲ್ಲಿಸಿ, ಬಾದಿಮನಾಳ ಗ್ರಾಮದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಈ ವರ್ಷ ಹಸಿರು ಬರ ಬಂದಿದೆ. ರಾಜ್ಯ ಸರ್ಕಾರವೂ ಕೇಂದ್ರಕ್ಕೆ ಹಸಿರು ಬರದ ವರದಿಯನ್ನೇ ಸಲ್ಲಿಸಿದೆ. ಅಲ್ಪಸ್ವಲ್ಪ ಮಳೆಯಾಗಿರುವುದರಿಂದ ಬೆಳೆ ಹಸಿರಾಗಿಯೇ ಕಾಣುತ್ತವೆ. ಆದರೆ ಅವು ಫಸಲು ಕೊಡುತ್ತಿಲ್ಲ. ಕಾಳು ಕಟ್ಟಿಲ್ಲ. ಇದನ್ನೇ ನಾವು ಬರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿದ್ದೇವೆ. ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆದ ಬೆಳೆಯ ತೆನೆ, ನೀರಾವರಿ ಪ್ರದೇಶದಲ್ಲಿ ಬೆಳೆದ ಬೆಳೆಯ ತೆನೆಯನ್ನು ಹೋಲಿಕೆ ಮಾಡಿ ತೋರಿಸಿದ್ದೇವೆ. ಆಗ ಅವರಿಗೆ ಹಾನಿಯ ಕುರಿತು ಅರ್ಥವಾಗಿದೆ ಎಂದರು.೩.೦೮ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಅದರಲ್ಲಿ ೨.೩೮ ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದರಿಂದ ₹೧೪೫೦ ಕೋಟಿಯಷ್ಟು ಹಾನಿಯಾಗಿದೆ. ಇದಕ್ಕೆ ವಿಪತ್ತು ಪರಿಹಾರ ನಿಯಮಾನುಸಾರ ₹೨೨೦ ಕೋಟಿ ಪರಿಹಾರ ನೀಡಬೇಕಾಗುತ್ತದೆ. ಇದರ ಜೊತೆಗೆ ದನಕರುಗಳಿಗೆ ಮೇವು, ಔಷಧ, ಜಾನುವಾರುಗಳ ನಿರ್ವಹಣೆ ಸೇರಿ ಸುಮಾರು ₹250 ಕೋಟಿ ಪರಿಹಾರದ ಅಗತ್ಯವಿದೆ ಎಂದು ಮನವರಿಕೆ ಮಾಡಲಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಸುತ್ತಾಡುವ ರೂಟ್ ಮ್ಯಾಪ್‌ನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ತೀರ್ಮಾನಿಸಲಾಗಿದೆ. ಈಗ ದಾರಿಯುದ್ದಕ್ಕೂ ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.ಸುತ್ತಿದ ಸಂಸದ, ಬಾರದ ಶಾಸಕರು: ಕೇಂದ್ರ ಬರ ಅಧ್ಯಯನ ತಂಡವನ್ನು ಸಂಸದ ಸಂಗಣ್ಣ ಕರಡಿ ಜಿಲ್ಲಾಡಳಿತದೊಂದಿಗೆ ಸ್ವಾಗತಿಸಿ, ಹೊಲ ಹೊಲ ಸುತ್ತಿದರು. ಕೇಂದ್ರದ ಅಧಿಕಾರಿಗಳಿಗೆ ಬರ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಆದರೆ ಯಾವೊಬ್ಬ ಶಾಸಕರು ಸಹ ಬಾರದೇ ಇರುವುರು ಟೀಕೆಗೆ ಗುರಿಯಾಯಿತು. ಯಲಬುರ್ಗಾ, ಕುಷ್ಟಗಿ ಕ್ಷೇತ್ರದಲ್ಲಿಯೇ ತಂಡ ಸುತ್ತಿದರೂ ಈ ಕ್ಷೇತ್ರದ ಶಾಸಕರು ಇತ್ತ ಸುಳಿಯಲೇ ಇಲ್ಲ.