ಕನ್ನಡಪ್ರಭ ವಾರ್ತೆ ಚನ್ನಗಿರಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ರಾತ್ರಿ 10.30ರಿಂದ ಗುಡುಗು, ಮಿಂಚಿನೊಂದಿಗೆ 12 ಗಂಟೆಯವರೆಗೆ ಬಿರುಸಿನ ಮಳೆ ಸುರಿಯಿತು.
ಮಳೆನೀರು ರಭಸವಾಗಿ ಹರಿದ ಪರಿಣಾಮ ಪಟ್ಟಣದ ಚರಂಡಿಗಳಲ್ಲಿ ಕಟ್ಟಿಕೊಂಡಿದ್ದ ಕಸವೆಲ್ಲ ಅಲ್ಲಲ್ಲಿ ರಸ್ತೆಗೆ ತೇಲಿ ಬಂದು ನಿಂತಿತ್ತು. ಬೆಳಗಿನ ಸಮಯದಲ್ಲಿ ವಾಯುವಿಹಾರಕ್ಕೆ ಬರುವ ಜನರು ಕೊಳಚೆ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಚನ್ನಗಿರಿ ತಾಲೂಕಿನಲ್ಲಿ 9 ಮಳೆಮಾಪನಗಳಿದ್ದು, ಈ ಮಳೆ ಮಾಪನ ಕೇಂದ್ರದಲ್ಲಿ ದಾಖಲಾದ ಮಳೆಯ ಪ್ರಮಾಣ ಇಂತಿದೆ. ಚನ್ನಗಿರಿ ಮಳೆ ಮಾಪನ ಕೇಂದ್ರದಲ್ಲಿ 22.0 ಮಿ.ಮೀ, ದೇವರಹಳ್ಳಿಯಲ್ಲಿ 38.6 ಮಿಮೀ, ಕತ್ತಲಗೆರೆಯಲ್ಲಿ 7.0 ಮಿಮೀ, ತ್ಯಾವಣಿಗೆಯಲ್ಲಿ 2.8 ಮಿಮೀ, ಬಸವಾಪಟ್ಟಣದಲ್ಲಿ 13.8 ಮಿಮೀ, ಸಂತೆಬೆನ್ನೂರು 36.4 ಮಿಮೀ, ಉಬ್ರಾಣಿಯಲ್ಲಿ 22.4 ಮಿಮೀ, ಕೆರೆಬಿಳಚಿಯಲ್ಲಿ 4.4 ಮಿಮೀ ಮಳೆ ದಾಖಲಾಗಿದೆ. ಆದರೆ, ಜೋಳದಾಳ್ ಮಳೆ ಮಾಪನ ಕೇಂದ್ರ ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ತಾಲೂಕಿನ ಎಲ್ಲ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಒಟ್ಟು ಮಳೆಯ ಪ್ರಮಾಣ 147.4 ಮಿಮೀ ಮಳೆ ದಾಖಲಾಗಿದೆ.- - -
ಕಮ್ಮಾರಗಟ್ಟೆ, ಬೆನಕನಹಳ್ಳಿ, ಘಂಟ್ಯಾಪುರ, ಕುಂದುರು, ನೆಲಹೊನ್ನೆ, ಕುಂಬಳೂರು, ಕೂಲಂಬಿ, ಕೆಂಗಲಹಳ್ಳಿ, ಮುಕ್ತೆನಹಳ್ಳಿ, ನ್ಯಾಮತಿ ತಾಲೂಕಿನ ಸವಳಂಗ ಭಾಗದ ಸುತ್ತಲ ಬಹುತೇಕ ಹಳ್ಳಿಗಳಲ್ಲೂ ಒಂದರೆಡು ಗಂಟೆಗಳ ಕಾಲ ಮಳೆಯಾಗಿದೆ. ಹೊಲ-ಗದ್ದೆಗಳಲ್ಲಿ ಕೆಲ ಕಾಲ ನೀರು ನಿಲ್ಲುವಂತೆ ಮಳೆಯಾಗಿದೆ. ಈ ಭಾಗದ ಅಡಕೆ ತೋಟಗಳ ಬೆಳೆಗಾರರಲ್ಲಿ ತಂತಸ ತಂದಿದೆ.
* ನ್ಯಾಮತಿಯಲ್ಲೂ ಸಿಡಿಲು, ಬಿರುಗಾಳಿ ಮಳೆನ್ಯಾಮತಿ ಪಟ್ಟಣ ಸೇರಿದಂತೆ ಸುತ್ತಮುತ್ತ ಹಳ್ಳಿಗಳಲ್ಲಿ ಸೋಮವಾರ ರಾತ್ರಿ 11 ಗಂಟೆಯಿಂದ ಸಿಡಿಲು, ಮಿಂಚು, ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ. ಮಂಗಳವಾರ ಮುಂಜಾನೆಯ 4 ಗಂಟೆಯವರೆಗೂ ಎಡಬಿಡದೇ ಮಳೆ ಆರ್ಭಟಿಸಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಂಡು ಜನರು ಪರಿತಪಿಸಿದರು.
ಏಕಾಏಕಿ ಆರ್ಭಟಿಸಿದ ಮಳೆಯಿಂದಾಗಿ ಕೆಲವರ ಮನೆಗಳಲ್ಲಿ ಸೋರಿಕೆಯಾಗಿದ್ದು ವರದಿಯಾಗಿದೆ. ಸೋರಿದ ನೀರು ಮನೆಯವರು ಹೊರಹಾಕಿದ ಕಷ್ಟ ಅನುಭವಿಸಿದ್ದಾರೆ. ಈ ಮಳೆಗೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಹೊಲ- ಗದ್ದೆಗಳಿಗೆ, ತೋಟಗಳಿಗೆ ಮಳೆ ಕೃಪೆಯಿಂದ ನೀರು ಲಭಿಸಿದಂತಾಗಿದೆ. ಮುಂದಿನ 15 ದಿನಗಳಲ್ಲಿ ಮಳೆ ಬಾರದಿದ್ದರೂ ಅಡಕೆ ತೋಟಗಳು ಇನ್ನಷ್ಟು ಹಸಿರುಮಯವಾಗಲಿವೆ ಎಂಬ ಸಮಾಧಾನ ರೈತರಲ್ಲಿತ್ತು. ಸಿಡಿಲಿನ ಹೊಡೆತಕ್ಕೆ ರಾತ್ರಿಯಿಂದಲೇ ವಿದ್ಯುತ್ ಸರಬರಾಜು ನಿಂತು ಹೋಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆ ಅನುಭವಿಸಿದರು, ಮಂಗಳವಾರ ಮಧ್ಯಾಹ್ನ 2 ಗಂಟೆ ಬಳಿಕವೇ ವಿದ್ಯುತ್ ಸರಬರಾಜಾಗಿದೆ.- - -
-17ಕೆಸಿಎನ್‌ಜಿ1: ಚನ್ನಗಿರಿ ತಾಲೂಕಿನ ಮಂಗೇನಹಳ್ಳಿಯಲ್ಲಿ ಸೋಮವಾರ ರಾತ್ರಿ ಸುರಿದ ಮಳೆಗೆ ಬಿದ್ದಿರುವ ಕಚ್ಚಾ ಮನೆ.