15,053 ಬಿಪಿಎಲ್‌ ಕಾರ್ಡ್‌ ಮೇಲೆ ತೂಗುಗತ್ತಿ!

KannadaprabhaNewsNetwork |  
Published : Oct 04, 2025, 01:00 AM IST

ಸಾರಾಂಶ

ರಾಮನಗರ: ಅನರ್ಹ ಬಿಪಿಎಲ್‌ ಕಾರ್ಡ್‌ಗಳ ವಿರುದ್ಧ ಕ್ರಮ ವಹಿಸಿರುವ ಆಹಾರ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅನುಮಾನಾಸ್ಪದ 15,053 ಬಿಪಿಎಲ್‌ ಕಾರ್ಡ್‌ಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದೆ.

ರಾಮನಗರ: ಅನರ್ಹ ಬಿಪಿಎಲ್‌ ಕಾರ್ಡ್‌ಗಳ ವಿರುದ್ಧ ಕ್ರಮ ವಹಿಸಿರುವ ಆಹಾರ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಅನುಮಾನಾಸ್ಪದ 15,053 ಬಿಪಿಎಲ್‌ ಕಾರ್ಡ್‌ಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದೆ.

ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ನೀಡಿರುವ ಬಿಪಿಎಲ್‌ ಪಡಿತರ ಚೀಟಿ ಸೌಲಭ್ಯ ಉಳ್ಳವರ ಪಾಲಾಗಿದ್ದು, ತಕ್ಷಣವೇ ಅವುಗಳನ್ನು ರದ್ದು ಮಾಡಿ, ಸರ್ಕಾರಿ ನೌಕರರೇ ಅನ್ನಭಾಗ್ಯ ಯೋಜನೆ ಫಲಾನುಭವಿಗಳಾಗಿದ್ದಾರೆ. ಇಂತಹವರ ಪಡಿತರ ಚೀಟಿ ರದ್ದುಪಡಿಸಲು ನಿಮಗೆ ಇನ್ನೂ ಎಷ್ಟು ಸಮಯ ಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಇಲಾಖೆ 2025ರ ಆಗಸ್ಟ್‌ ಅಂತ್ಯಕ್ಕೆ ನಾನಾ ಮೂಲಗಳಿಂದ ಮಾಹಿತಿ ಪಡೆದಿದೆ. ಅನುಮಾನಾಸ್ಪದ ಬಿಪಿಎಲ್‌ ಪಡಿತರದಾರರನ್ನು ಗುರುತಿಸಿ ಅವುಗಳನ್ನು ಪರಿಶೀಲನೆಗೆ ಒಳಪಡಿಸುತ್ತಿದ್ದು, ಅನರ್ಹ ಎಂದು ಕಂಡುಬಂದಲ್ಲಿ ಅಂತಹ ಕಾರ್ಡ್‌ಗಳನ್ನು ರದ್ದು ಮಾಡಲು ಮುಂದಾಗಿದೆ.

ಯಾರೆಲ್ಲ ಅನರ್ಹರ ಪಟ್ಟಿಗೆ:

ರಾಜ್ಯ ಸರ್ಕಾರದ ಪ್ರಕಾರ, ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತ ಹೆಚ್ಚಿರುವವರು, ಸ್ವಂತ ವೈಟ್‌ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಉಳ್ಳವರು, ಆದಾಯ ತೆರಿಗೆ ಪಾವತಿಸುವವರು, 7 ಹೆಕ್ಟೇರ್‌ಗೂ ಅಧಿಕ ಭೂಮಿ ಹೊಂದಿರುವವರು, ಸರ್ಕಾರಿ ಇಲಾಖೆಯ ನಾಮ ನಿರ್ದೇಶಕರು, ದೊಡ್ಡ ಕಂಪನಿಗಳಲ್ಲಿ ಉದ್ಯೋಗದಲ್ಲಿರುವವರು ಬಿಪಿಎಲ್‌ ಕಾರ್ಡ್‌ಗಳನ್ನು ಪಡೆಯಲು ಅನರ್ಹರು ಎಂದು ಗುರುತಿಸಲಾಗಿದೆ.

ನ್ಯಾಯಬೆಲೆ ಅಂಗಡಿಗಳ ಬಳಿ ನೋಟಿಸ್:

ಅನರ್ಹರ ಬಿಪಿಎಲ್ ಕಾರ್ಡ್ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿಗಳ ಬಳಿ ನೋಟಿಸ್ ಹಾಕಲಾಗಿದೆ. ಗ್ರಾಮದ ವಾಸಿಯಾದ ನೀವು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಪಡಿತರ ಚೀಟಿ ಸಂಖ್ಯೆ, ನಿಮ್ಮ ಪಡಿತರ ಚೀಟಿಯಲ್ಲಿನ ಸದಸ್ಯರಾದ - ಸದರಿಯವರಿಗೆ ಸಂಬಂಧಿಸಿದಂತೆ ಉಲ್ಲೇಖ(3)ರ ವರದಿಯಲ್ಲಿ ಸಿಬಿಡಿಐ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಗಿಂತ ಹೆಚ್ಚಿದ್ದು ಉಲ್ಲೇಖ(1)ರಂತೆ ನೀವು ಎಎವೈ/ಬಿಪಿಎಲ್ ಪಡಿತರ ಚೀಟಿ ಹೊಂದಲು ಅರ್ಹರಾಗಿರುವುದಿಲ್ಲ. ಈ ಬಗ್ಗೆ, ಪರಿಶೀಲಿಸಿ ಬಿಪಿಎಲ್ ಪಡಿತರ ಚೀಟಿ ರದ್ದುಪಡಿಸಿ/ಎಪಿಎಲ್ ಚೀಟಿಯನ್ನಾಗಿ ಪರಿವರ್ತಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಲ್ಲೇಖ(2)ರಂತೆ ಸೂಚಿಸಲಾಗಿರುತ್ತದೆ ಎಂದು ವಿವರಣೆ ನೀಡಲಾಗಿದೆ.

ಒಂದು ವೇಳೆ ಆಕ್ಷೇಪಣೆಗಳು,ವಿವರಣೆಗಳು ನಿಮ್ಮ ವಾದ ಇದ್ದಲ್ಲಿ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಪ್ರತಿಗಳೊಂದಿಗೆ ಇಲಾಖೆ ಕಚೇರಿಗೆ ಸಲ್ಲಿಸುವುದು. ತಪ್ಪಿದಲ್ಲಿ ನಿಮ್ಮವಾದ ಏನು ಇಲ್ಲವೆಂದು ಭಾವಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ.

ಪಡಿತರದಾರರಲ್ಲಿ ಗೊಂದಲ ನಿರ್ಮಾಣ :

ಅನರ್ಹ ಬಿಪಿಎಲ್ ಕಾರ್ಡ್​​ಗಳ ಪಟ್ಟಿ ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರತ್ಯಕ್ಷವಾಗಿದೆ.ವಾರ್ಷಿಕ ಆದಾಯ 1,20,000 ರು. ಇರುವವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುತ್ತಿರುವ ಹಿನ್ನಲೆ, ಕೆಲವಡೆ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಕೆಲವು ಕಡೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ ವಾರ್ಷಿಕ 1.20 ಲಕ್ಷ ವಾರ್ಷಿಕ ಆದಾಯ ಹೊಂದಿರುವ 13006, 25 ಲಕ್ಷ ರೂಪಾಯಿಗಿಂತಲೂ ಹೆಚ್ಚು ಜಿಎಸ್​ಟಿ ವ್ಯವಹಾರ ನಡೆಸಿರುವ 87 ಕುಟುಂಬಗಳು, ಕಂಪನಿಗಳಲ್ಲಿ ಡೈರೆಕ್ಟರ್​ ಆಗಿರುವ 557 ಜನ, 7.5 ಎಕರೆಗಿಂತಲೂ ಹೆಚ್ಚು ಜಮೀನು ಹೊಂದಿರುವ 45 ಜನ, 12 ತಿಂಗಳಿಂದ ನಿಷ್ಕ್ರೀಯಯವಾಗಿರುವ 738, 6 ತಿಂಗಳಿಂದ ನಿಷ್ಕ್ರೀಯವಾಗಿರುವ 357, ಹೊರ ರಾಜ್ಯದಿಂದ ಬಂದು ಇಲ್ಲಿ ಅಕ್ರಮವಾಗಿ ಪಡಿತರ ಚೀಟಿ ಪಡೆದವರ ಸಂಖ್ಯೆ 196, ಸ್ವಂತ ವೈಟ್ ಬೋರ್ಡ್ ನಾಲ್ಕು ಚಕ್ರದ ವಾಹನ ಉಳ್ಳವರು 13 ಜನ ಕೂಡ ಬಿಪಿಎಲ್ ಅನರ್ಹರು ಎಂದು ಆಹಾರ ಇಲಾಖೆಯ ಗುರುತಿಸಿ ಪಟ್ಟಿ ಮಾಡಿದೆ.

ಬಾಕ್ಸ್ ............

ಬಿಪಿಎಲ್‌ ಕಾರ್ಡ್‌ದಾರರ ಅರ್ಹತೆ ಪರಿಶೀಲನೆಗೆ ಕ್ರಮ

ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕಾರ್ಡ್ ಸರ್ಕಾರ ನೀಡುವ ಗುರುತಿನ ಚೀಟಿಯಾಗಿದ್ದು, ಇದು ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ವಿವಿಧ ರಾಜ್ಯ ಮತ್ತು ಕೇಂದ್ರ ಕಲ್ಯಾಣ ಯೋಜನೆಗಳಿಗೆ ಅರ್ಹತೆ ನೀಡುತ್ತದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಅದರ ವಿತರಣೆ ಮತ್ತು ಅರ್ಹತೆಯನ್ನು ನಿರ್ವಹಿಸುತ್ತದೆ. ಬಿಪಿಎಲ್ ಕಾರ್ಡ್‌ ವ್ಯವಸ್ಥೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ. ಬಿಪಿಎಲ್ ಕುಟುಂಬಗಳನ್ನು ಆದ್ಯತಾ ಕುಟುಂಬಗಳು (ಪಿಎಚ್‌ಹೆಚ್) ಎಂದು ವರ್ಗೀಕರಿಸಲಾಗಿದೆ. ಅವರು ನಿರ್ದಿಷ್ಟ ಪ್ರಮಾಣದ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯುತ್ತಾರೆ. ಪ್ರಸ್ತುತ ಸರ್ಕಾರ ಬಿಪಿಎಲ್‌ ಕಾರ್ಡ್‌ದಾರರ ಅರ್ಹತೆಯನ್ನು ಪರಿಶೀಲನೆಗೆ ಕ್ರಮವಹಿಸಿದ್ದು, ಅನರ್ಹ ಕಾರ್ಡ್‌ದಾರರನ್ನು ತೆಗೆದುಹಾಕುವ ಕಾರ್ಯಕ್ಕೆ ಚಾಲನೆ ನೀಡಿದೆ.

ಕೋಟ್ ............

ಇಲಾಖೆ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ15 ಸಾವಿರ ಅನುಮಾನಾಸ್ಪದ ಬಿಪಿಎಲ್‌ ಕಾರ್ಡ್‌ಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಅರ್ಹ ಫಲಾನುಭವಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

- ಶಿಲ್ಪಾ ಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂ.ದಕ್ಷಿಣ ಜಿಲ್ಲೆ

ಬಾಕ್ಸ್‌.............

ಅನುಮಾನಾಸ್ಪದ ಬಿಪಿಎಲ್‌ ಕಾರ್ಡ್‌ಗಳು

ರಾಮನಗರ 3579

ಚನ್ನಪಟ್ಟಣ 3734

ಕನಕಪುರ 4573

ಮಾಗಡಿ 3579

ಒಟ್ಟು 15053

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ