ಕನ್ನಡಪ್ರಭ ವಾರ್ತೆ ಚವಡಾಪುರ
ಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸುರಿದ ಮಹಾಮಳೆಗೆ ಜನ ಸಾಮಾನ್ಯರು ಪರದಾಡುವಂತಾಗಿದೆ.ಅಫಜಲಪುರ ತಾಲೂಕಿನಾದ್ಯಂತ ವಾಡಿಕೆಯ ಮಳೆಗಿಂತ ಹೆಚ್ಚು 919 ಮಿಮಿ ಮಳೆ ದಾಖಲಾಗುವ ಮೂಲಕ ಮಹಾಮಳೆಯೇ ಸುರಿದಿದೆ. ಮಳೆಯ ಅವಾಂತರಕ್ಕೆ ತಾಲೂಕಿನಾದ್ಯಂತ ನೂರಾರು ಕಿಲೋ ಮೀಟರ್ ಸಂಪರ್ಕ ರಸ್ತೆಗಳು ಹಾಳಾಗಿವೆ, ನೂರಾರು ಮನೆಗಳು ನೆಲಕ್ಕುರುಳಿ ಜನರ ಬದುಕು ಬೀದಿಗೆ ಬಂದಿದೆ.
ಹಾಳಾದ ಹಳ್ಳಿ ರಸ್ತೆಗಳು: ತಾಲೂಕಿನಾದ್ಯಂತ ಸುರಿದ ಮಳೆಯಿಂದಾಗಿ 120ಕ್ಕೂ ಹೆಚ್ಚು ಕಿ.ಮೀ ಗ್ರಾಮೀಣ ರಸ್ತೆ ಸಂಪರ್ಕ ಹಾಳಾಗಿದೆ. ಹಳ್ಳ ಕೊಳ್ಳಗಳಿಗೆ ಅಡ್ಡಲಾಗಿ ಕಟ್ಟಿರುವ ಕಿರು ಸೇತುವೆಗಳು ಕೊಚ್ಚಿಕೊಂಡು ಹೋಗಿ ಸಂಪರ್ಕ ಕಡಿತಗೊಂಡಿದೆ. ಭೀಮಾನದಿ, ಭೋರಿಹಳ್ಳ, ಅಮರ್ಜಾನದಿ ವ್ಯಾಪ್ತಿಯ ಊರುಗಳಲ್ಲಿ ಸಂಪರ್ಕ ರಸ್ತೆಗಳು ಹಾಳಾಗಿ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಇನ್ನೊಂದೆಡೆ ಹೊಲಗದ್ದೆಗಳ ಸಂಪರ್ಕ ರಸ್ತೆಗಳು ಹಾಳಾಗಿದ್ದು, ಮಳೆ ನಿಂತರೂ ರೈತರು ಹೊಲ ಗದ್ದೆಗಳಿಗೆ ಹೋಗದಂತಾಗಿದೆ.ಎಲ್ಲಿ ನೋಡಿದರೂ ನೀರು ಹರಿಯುತ್ತಿದ್ದರೆ ರಸ್ತೆಗಳು ಕಿತ್ತುಕೊಂಡು ಹೋಗಿ ಕಿರು ಜಲಪಾತಗಳಂತಾಗಿ ಹೊಲಗದ್ದೆಗಳ ರಸ್ತೆಗಳು ಮಾರ್ಪಾಟಾಗಿವೆ. ಇಂತಹ ದುರ್ಗಮ ಹಾದಿಯಲ್ಲಿ ನಡೆದುಕೊಂಡು ಹೋಗುವುದು ಕೂಡ ಕಷ್ಟವಾಗಿರುವಾಗ ಎತ್ತು, ಬಂಡಿ ಕಟ್ಟಿಕೊಂಡು ಹೋಗುವುದು ಸಾಧ್ಯವಿಲ್ಲ. ಹೀಗಾಗಿ ರೈತರಿಗೆ ಮಳೆ ನಿಂತಿದೆ, ಹೊಲಗದ್ದೆಗಳಿಗೆ ಹೋಗಿ ಅಳಿದುಳಿದ ಬೆಳೆ ಉಳಿಸಿಕೊಳ್ಳೋಣವೆಂದರೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಯಿಂದಾಗಿ ತಾಲೂಕಿನಾದ್ಯಂತ 300ಕ್ಕೂ ಹೆಚ್ಚು ಮನೆಗಳು ಧರಾಶಾಯಿಯಾಗಿದ್ದರಿಂದ ಜನರ ಬದಕು ಬೀದಿಗೆ ಬಂದಿದೆ. ಮಳೆಯಿಂದ ಮನೆ ಗೋಡೆ ಕುಸಿದು ಭೋಸಗಾ ಗ್ರಾಮದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.ತುರ್ತಾಗಿ ತಾಲೂಕು ಆಡಳಿತ, ಶಾಸಕರು, ಸರ್ಕಾರ ಹಾಗೂ ಸಂಬಂಧಪಟ್ಟವರು ಹೊಲಗದ್ದಗೆಳ ರಸ್ತೆಗಳನ್ನು ಸುಧಾರಣೆ ಮಾಡಿದರೆ ಜನರಿಗೆ ಅನುಕೂಲವಾಗಲಿದೆ.
ಹದಗೆಟ್ಟ ಹೊಲಗದ್ದೆಗಳ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಮೊದಲು ಆದ್ಯತೆ ಕೊಟ್ಟಿದ್ದೆ. ಆದರೆ, ಸಂಪರ್ಕ ಸುಧಾರಿಸುವುದಲ್ಲದೆ ರೈತರು ನಿರಾತಂಕವಾಗಿ ಹೊಲಗದ್ದೆಗಳಿಗೆ ಹೋಗಿ ಉಳಿದ ಬೆಳೆಗಳನ್ನು ಜೋಪಾನವಾಗಿ ಕಾಯ್ದುಕೊಳ್ಳುವಂತಾಗಲಿದೆ......ಕೋಟ್.......
ಮಳೆಯಿಂದಾಗಿ ತಾಲೂಕಿನಾದ್ಯಂತ ಹಾಳಾಗಿರುವ ರಸ್ತೆಗಳ ಮಾಹಿತಿ ಸಂಗ್ರಹಿಸಿ ಮೇಲಾಧಿಕಾರಿಗಳ ಗಮನಕ್ಕೆ ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ.-ಬಾಬುರಾವ್ ಜ್ಯೋತಿ, ಎಇಇ ಪಂಚಾಯಿತಿ ರಾಜ್ ಇಲಾಖೆ
-----ರಸ್ತೆಗಳು ಹಾಳಾಗಿ ಊರು ಕೇರಿಗಳ ಹಾದಿ ಮರೆತಿದ್ದೇವೆ. ಹೊಲಗದ್ದೆಗಳ ಹಾದಿಗಳು ಕೂಡ ಹಳ್ಳಗಳಂತಾಗಿವೆ, ಅಲ್ಲಲ್ಲಿ ಮಿನಿ ಜಲಪಾತಗಳಂತೆ ಕಾಣುತ್ತಿವೆ. ಮುಂದೇನು ಮಾಡೋದು ಗೊತ್ತಾಗುತ್ತಿಲ್ಲ. ಕೂಡಲೇ ಸಂಬಂಧಪಟ್ಟವರು ಹಾಳಾದ ರಸ್ತೆಗಳ ಸುಧಾರಣೆಗೆ ಕ್ರಮವಹಿಸಲಿ.
-ನಾಗೇಶ ಜಮಾದಾರ, ಚಿಂಚೋಳಿ ಗ್ರಾಮದ ರೈತ