400ಕ್ಕೂ ಅಧಿಕ ಆರತಿ ಬಳಸಿ ವಿಶೇಷ ಮಹಾ ರಂಗಪೂಜೆ । ದೇವರಿಗೆ ಕಡುಬು ನೈವೇದ್ಯ
ವಿಶೇಷ ಮಹಾ ರಂಗಪೂಜೆ: ನವರಾತ್ರಿ ಸಂದರ್ಭ ಮಹಾನವಮಿಯಂದು ಕಟೀಲಿನಲ್ಲಿ ದೇವರಿಗೆ ವಿಶೇಷ ರಂಗಪೂಜೆ, ಕಡುಬು ಸಮರ್ಪಣೆ ,ರಾತ್ರಿ ಮಹಾರಂಗ ಪೂಜೆ ಮತ್ತು 500ಕ್ಕೂ ಮಿಕ್ಕಿ ಬಗೆ ಬಗೆಯ ಆರತಿಗಳ ಮೂಲಕ ಮಹಾ ಪೂಜೆ ಸೇರಿದಂತೆ ವಿಶೇಷ ಮಹಾಪೂಜೆ ಸುಮಾರು 3 ಗಂಟೆಗಳ ಕಾಲ ನಿರಂತರ ನಡೆಯಿತು.
ಈ ಸಮಯದಲ್ಲಿ ದೀಪದ ಬೆಳಕು, ಭಜನೆ, ಗಂಟೆ, ಜಾಗಟೆ, ಬ್ಯಾಂಡ್, ವಾದ್ಯ, ಚೆಂಡೆಗಳ ಸದ್ದು ದೈವಿಕ ವಾತಾವರಣವನ್ನು ಸೃಷ್ಟಿಸಿತ್ತು. ಮಹಾ ಪೂಜೆಗಾಗಿ 500ಕ್ಕೂ ಅಧಿಕ ವೈವಿಧ್ಯಮಯ ಆರತಿಗಳನ್ನು ಜೋಡಿಸಲಾಗಿದ್ದು ಕೆಲವು ಸ್ಥಳೀಯ ಭಕ್ತರು ಕೂಡ ಆರತಿ ಸೇವೆ ಸಲ್ಲಿಸಿದರು.ದೋಣಿಯಲ್ಲಿ ಕಡುಬಿನ ಹಿಟ್ಟು:
ಮಹಾನವಮಿಯಂದು ದೇವರಿಗೆ ನೈವೇದ್ಯಕ್ಕಾಗಿ 540 ಕೆಜಿ ಅಕ್ಕಿ, 300 ಕೆಜಿ ಉದ್ದಿನ ಬೇಳೆಯ ಕಡುಬು ತಯಾರಿ ನೈವೇದ್ಯವಾಗಿ ಸಮರ್ಪಿಸಲಾಗಿದ್ದು ದೊಡ್ಡ ಪ್ರಮಾಣದ ಕಡುಬಿನ ಹಿಟ್ಟನ್ನು ದೋಣಿಯಲ್ಲಿ ಸಂಗ್ರಹಣೆ ಮಾಡಿ ಕಡುಬು ತಯಾರಿ ಮಾಡುವುದು ಸಂಪ್ರದಾಯ.ಬೇಯಿಸಿದ ಕಡುಬವನ್ನು ದೇವರಿಗೆ ಸಮರ್ಪಣೆ ಮಾಡಿದ ಬಳಿಕ ರಾತ್ರಿ ಪೂಜೆಯ ಬಳಿಕ ಭಕ್ತರಿಗೆ ಊಟದ ಸಮಯದಲ್ಲಿ ಪ್ರಸಾದ ರೂಪದಲ್ಲಿ ನೀಡಲಾಯಿತು.
ಮಹಾ ರಂಗ ಪೂಜೆ ವಿಶೇಷ: ಸಾಮಾನ್ಯವಾಗಿ ದೇವಳದಲ್ಲಿ ನಿತ್ಯ 12 ರಂಗಪೂಜೆಗಳು ಭಕ್ತರಿಂದ ನಡೆಯುತ್ತಿದ್ದು, ಮಹಾನವಮಿಗೆ ದೇವಸ್ಥಾನದ ವತಿಯಿಂದಲೇ ಮಹಾರಂಗಪೂಜೆ ನಡೆಯುತ್ತದೆ. ಬೆಳಗ್ಗಿನ ಪಂಚಾಮೃತ ಅಭಿಷೇಕದಿಂದ ಸಂಕಲ್ಪವಾಗಿ ರಾತ್ರಿ ರಂಗಪೂಜೆ ನಡೆಯುತ್ತದೆ.ದೇವರಿಗೆ ಕಡುಬು, ಅಪ್ಪ ನೈವೇದ್ಯ. ಪಾಯಸ, ಹಿಂಗಾರ ಹೂವಿನ ಅಲಂಕಾರ, ತೆಂಗಿನಕಾಯಿ ನೈವೇದ್ಯ, ಐದು ಸಾಲುಗಳ ದೀಪಗಳನ್ನು ದೇವರ ಎರಡೂ ಬದಿಗಳಲ್ಲಿ ಹಚ್ಚುವುದು, ಪ್ರಧಾನ ಪರಿವಾರ ದೇವರು, ವನ ಶಾಸ್ತಾರ, ಗಣಪತಿ ದೇವರಿಗೂ ನೈವೇದ್ಯ ಸಮರ್ಪಣೆ ಪೂಜೆ ನಡೆಯಿತು.ಎಲ್ಲ ಆವರಣ ಬಲಿದೇವರುಗಳಿಗೆ ದೇವರ ಗರ್ಭಗುಡಿಯ ದ್ವಾರದಿಂದ ಮಂಟಪದವರೆಗೆ 19 ಲಿಂಗಾಕಾರದ ನೈವೇದ್ಯ ರಾಶಿ, ಅಪ್ಪ ಕಡುಬು, ಹಿಂಗಾರ, ಹೂವು, ತೆಂಗಿನಕಾಯಿ ಹೋಳು, ವೀಳ್ಯದೆಲೆ, ಅಡಿಕೆ ನೈವೇದ್ಯ ಮಾಡಿ ನೈವೇದ್ಯ ಕಾಲದಲ್ಲಿ ಪೂಜಾಹೋಮ ಮಾಡಲಾಯಿತು.ದೇವರ ಎರಡೂ ಬದಿಗಳಲ್ಲಿ ಐದು ಮೇಲಂತಸ್ತಿನ ಸಾಲುಗಳೊಂದಿಗೆ 5 ವಿಭಾಗವಾಗಿ 555ರ ದೀಪಸಾಲುಗಳನ್ನು ಹಚ್ಚಿ ದೇವರ ಪೂಜೆ ಆದನಂತರ ಬಲಿದೇವತೆಗಳಿಗೆ ಬಲಿ ಹಾಕಲಾಯಿತು.
ಕಟೀಲು ಕ್ಷೇತ್ರದಲ್ಲಿ ವಿಜಯದಶಮಿಯಂದು ಸರಸ್ವತಿ ಸದನದಲ್ಲಿ ಬೆಳಗ್ಗೆ 9.30ರಿಂದ ಸಂಜೆ 4 ರ ತನಕ ವಿವಿಧ ತಂಡಗಳಿಂದ ಭಜನೆ, ಸಂಜೆ 4 ರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಧ್ವಜಯಂತೀ, ಕರ್ನಾಟಕ ಶಾಸ್ತ್ರೀಯ ಸಂಗೀತ,ಸಂಜೆ 7 ರಿಂದ ಯಕ್ಷಗಾನ ಬಯಲಾಟ ‘ರಕ್ತರಾತ್ರಿ-ಧರ್ಮರಾಜ ಪಟ್ಟಾಭಿಷೇಕ’ ಪ್ರದರ್ಶನ ನಡೆಯಿತು.