ಕನ್ನಡಪ್ರಭ ವಾರ್ತೆ ಕಲಬುರಗಿ
ಶರಣಬಸವೇಶ್ವರ ಕೆರೆ ಪಕ್ಕದ ಜಗತ್ ವೃತ್ತ ಕಲಬುರಗಿ ಮಹಾನಗರದ ಮಟ್ಟಿಗೆ ಹೆಸರುವಾಸಿ. ತಮ್ಮ ತಮ್ಮ ಸಮುದಾಯದ ದಾರ್ಶನಿಕರ ಜಯಂತಿಯಂದು ಅನೇಕರು ಇಲ್ಲಿರುವ ಕಟ್ಟೆಯನ್ನೇ ಕೇಂದ್ರವಾಗಿಟ್ಟುಕೊಂಡು ತರಹೇವಾರಿ ಅಲಂಕರಿಸಿ ಮಹಾತ್ಮರಿಗೆ ಗೌರವಿಸುತ್ತ ತಾವು ಸಂಭ್ರಮಿಸೋದು ವಾಡಿಕೆ.ಇದೇ ಮೊದಲ ಬಾರಿಗೆ ಜಗತ್ ವೃತ್ತದಲ್ಲಿರುವ ಈ ಕಟ್ಟೆಯನ್ನ ಅಚ್ಚ ಕನ್ನಡಿಗ, ದ್ವೈತ ಮತ ಸಂಸ್ಥಾಪಕರು, ಜಗತ್ ಸತ್ಯತ್ವವನ್ನು ಇಡೀ ಪ್ರಪಂಚಕ್ಕೇ ಸಾರಿದ ಆಚಾರ್ಯ ಮಧ್ವರು ಅಲಂಕರಿಸಿದ್ದು ವಿಶೇಷವಾಗಿತ್ತು.
ಸುಂದರವಾಗಿ ದೀಪಾಲಂಕಾರದಿಂದ ನಿರ್ಮಿಸಿದ ಮಧ್ವರ ಭಾವಚಿತ್ರವಿರುವ ವೇದಿಕೆಯಲ್ಲಿ ಸೇರಿದ್ದ ವಿಪ್ರ ಸಮಾಜದ ನೂರಾರು ಜನ ಭಕ್ತಿ ಭಾವ ಸಂಭ್ರಮದಿಂದ ವಿಜಯದಶಮಿ ದಿನವಾದ ಗುರುವಾರ ರಾತ್ರಿ ಮಧ್ವರ ಜಯಂತಿ ಆಚರಿಸಿ ಸಂಭ್ರಮಿಸಿದರು.ಭರತ ವರ್ಷ ಕಂಡ ಮಹಾನ್ ತತ್ವಜ್ಞಾನಿಗಳಲ್ಲಿ ಪ್ರಮುಖರೂ, ಕರ್ನಾಟಕದ ಉಡುಪಿ ಬಳಿ ಪಾಜಕದಲ್ಲಿ ಅವತಾರವೆತ್ತಿ ದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ದ್ವೈತ ಮತಕ್ಕೆ ಭದ್ರ ಬುನಾದಿ ಹಾಕಿ, ಭಾರತವಷ್ಟೇ ಅಲ್ಲ ಸಾಗರದಾಚೆಗೂ ಲೋಕಮಾನ್ಯರಾದ ಶ್ರೀಮನ್ ಮಧ್ವಾಚಾರ್ಯರ 787ನೇ ಜಯಂತಿಯನ್ನು ಇದೇ ಮೊದಲ ಬಾರಿಗೆ ಜನನಿಬಿಡ ಜಗತ್ ವೃತ್ತದಲ್ಲಿ ಆಚರಿಸುವ ಮೂಲಕ ಮಾಧ್ವ ಮತಾನುಯಾಯಿಗಳು ಸರ್ವರ ಗಮನ ಸೆಳೆದುದು ವಿಶೇಷವಾಗಿತ್ತು.
ಕಲಬುರಗಿಯ ಸತ್ಯಾತ್ಮ ಸೇನೆಯು ಆಯೋಜಸಿದ್ದ ಈ ವಿನೂತನ ಮಾದರಿಯ ಮೊದಲ ಮಧ್ವ ಜಯಂತಿ ಆಚರಣೆ ಎಂದು ಈ ಸಮಾರಂಭ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.ಈಶ-ದಾಸ ಸಿದ್ಧಾಂತ ಸಾರಿದ ಮಹಾನ್ ತತ್ವಜ್ಞಾನ
ಜಗತ್ ವೃತ್ತದ ಭವ್ಯ ವೇದಕೆಯಲ್ಲಿ ಮಾತನಾಡಿದ ಆದರ್ಶ ಸಂಸ್ಕೃತ ವಿದ್ಯಾಪೀಠದ ಕುಲಪತಿಗಳು, ಎನ್‌ವಿ ಉಪ ಪ್ರಾಚಾರ್ಯ ಡಾ. ಗುರುಮಧ್ವಾಚಾರ್ಯ ನವಲಿಯವರು, ವಿಷ್ಣು ಸರ್ವೋತ್ತಮತ್ವ ಪ್ರತಿಪಾದಿಸುತ್ತ ಎಲ್ಲರೂ ಪರಮಾತ್ಮನ ದಾಸರು ಎನ್ನುವ ಈಶ, ದಾಸ ಸಿದ್ದಾಂತ ಜಗತ್ತಿಗೆ ಸಾರಿದವರು ಆಚಾರ್ಯ ಮಧ್ವರು. ಅವರ ಜಯಂತಿ ಇಂದು ಜಗತ್ಸಾವೃತ್ತದಲ್ಲಿ ಆಚರಿಸುತ್ತಿರೋದು ಸಂತಸ ತಂದಿದೆ ಎಂದರು.
ಉಡುಪಿಯಲ್ಲಿ ಮಧ್ವಾಚಾರ್ಯರು ಜನಿಸಿ ದ್ವೈತ ಸಿದ್ದಾಂತ ಪ್ರತಿಪಾದಿಸಿದರು. ಮುಂದೆ ಕಾಲಂತರದಲ್ಲಿ ಈ ಸಿದ್ದಾಂತಕ್ಕೆ ಮಹತ್ವದ ಕೊಡುಗೆ ಕೊಟ್ಟು ಪೋಷಿಸಿವದವರು. ಕಲ್ಯಾಣ ನಾಡಿನ ಕಲಬುರಗಿ ಭಾಗದ ಯತಿಗಳಂದು ಮಳಖೇಡದ ಜಯತೀರ್ಥರಾದಿಯಾಗಿ ಅನೇಕರ ವಿವರಣೆ ನೀಡಿದ ನವಲಿ ಆಚಾರ್ಯರು ಅವರವರ ಯೋಗ್ಯತೆಗೆ ಅನುಸಾರ ಆಯಾ ದೇವತೆಗಳು, ವ್ಯಕ್ತಿಗಳಿಗೆ ಗೌರವಿಸಬೇಕು ಎಂಬುದು ಆಚಾರ್ಯರ ಮಹತ್ವದ ಸಂದೇಶ ಎಂದರು.ಅಂಕಣಕಾರ ಡಾ. ಶ್ರೀನಿವಾಸ ಸಿರನೂರಕರ್ ಮಾತನಾಡಿ, ಬರಲಿರುವ ದಿನಗಳಲ್ಲಿ ಮಧ್ವ ಸಿದ್ದಾಂತದ ಕುರಿತು ಬೌದ್ಧಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದರಲ್ಲದೆ ಮಧ್ವ ಜಯಂತಿಯ ಭಿನ್ನ ಆಚರಣೆ ಅತ್ಯುತ್ತಮ ಬೆಳವಣಿಗೆ ಎಂದು ಸತ್ಯಾತ್ಮ ಸೇನೆಯ ಉಪಕ್ರಮವನ್ನ ಅಭಿನಂದಿಸಿದರು.
ಉತ್ತರಾದಿ ಮಠದ ಅಧಿಕಾರಿಗಳಾದ ರಾಮಾಚಾರ್ಯ ಘಂಟಿ, ಪಂ.ವಿನೋದಾಚಾರ್ಯ ಗಲಗಲಿ, ಪಂ.ಮಧ್ವಾಚಾರ್ಯ ನವಲಿ, ಪಂ. ವಿಷ್ಣುದಾಸಾಚಾರ್ಯ್ ಖಜೂರಿ, ಡಾ.ಗೌತಮ ಜಹಗೀರದಾರ್, ಶ್ರೀನಿವಾಸ ದೇಸಾಯಿ, ಪ್ರಶಾಂತ ಕೊರಳ್ಳಿ ಸೇರಿದಂತೆ ಸಮಾಜದ ಸಾರ್ವಜನಿಕರು, ಮಹಿಳೆಯರು, ಮಕ್ಕಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.