ಬ್ಯಾಡಗಿ: ಗಜೇಂದ್ರಗಡ ಸೊರಬ ರಾಜ್ಯ ಹೆದ್ದಾರಿ-36 (ಮುಖ್ಯರಸ್ತೆ) ಅಗಲೀಕರಣ ವಿಳಂಬ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಳಗದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರಲ್ಲದೇ, 15 ದಿನಗಳಲ್ಲಿ ಅಗಲೀಕರಣ ಕೈಗೆತ್ತಿಕೊಳ್ಳುವಂತೆ ಗಡುವು ನೀಡಿದರು.
ಗೀತಾಬಾಯಿ ಲಮಾಣಿ ಮಾತನಾಡಿ, ಅಗಲೀಕರಣಕ್ಕೆ ಸಹಕರಿಸಿದಲ್ಲಿ ಸರ್ಕಾರದ ಪರಿಹಾರವನ್ನೂ ನ್ಯಾಯಸಮ್ಮತವಾಗಿ ವಿತರಿಸುವುದಾಗಿ ಸಾವಿರಾರು ಜನರೆದುರು ತಾವು ಒಪ್ಪಿಗೆ ಸೂಚಿಸಿದ್ದಾಗ್ಯೂ ಮುಖ್ಯರಸ್ತೆ 85 ಮಾಲೀಕರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಶಾಸಕರೇ, ತಮಗೆ ಅಲ್ಲಿಯೂ ಮುಖಭಂಗವಾಗಿದೆ. ಸಹನೆಯ ಕಟ್ಟೆ ಒಡೆದಿದೆ, ಎಷ್ಟು ಪರೀಕ್ಷೆ ನಡೆಸುತ್ತೀರಿ? ಸ್ವಯಂಪ್ರೇರಿತರಾಗಿ ಅಗಲೀಕರಣಕ್ಕೆ ಮುಂದಾಗಿ, ನಿಮ್ಮ ಜತೆ ತಾಲೂಕಿನ ಜನರಿದ್ದಾರೆ ಎಂದರು.
ಭೂಸ್ವಾಧೀನ ಮಾಡಿ: ಮಹಬೂಬಿ ಕೊಪ್ಪಳ ಮಾತನಾಡಿ, ಅಗಲೀಕರಣ ವಿಳಂಬಕ್ಕೆ ಅಧಿಕಾರಿಗಳೇ ಕಾರಣ, ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದ್ದಾರೆ, ಅಧಿಕಾರಿಗಳಿಗೆ ಬ್ಯಾಡಗಿ ಅಭಿವೃದ್ಧಿ ಬೇಡವಾಗಿದೆ, ಅಗಲೀಕರಣ ವಿಳಂಬವಾಗಿದೆ, ಕೂಡಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಖಡಕ್ ಸೂಚನೆ ನೀಡುವಂತೆ ಆಗ್ರಹಿಸಿದರು.ಲಕ್ಷಾಂತರ ಜನರಿಗೆ ಬೇಕು ರಸ್ತೆ: ಡಾ. ಕೆ.ವಿ. ದೊಡ್ಡಗೌಡ್ರ ಮಾತನಾಡಿ, ಒಪ್ಪಂದದ ಪ್ರಕಾರ ರಸ್ತೆ ಮದ್ಯಭಾಗದಿಂದ 33 ಅಡಿ ಬಿಟ್ಟು ಕೆಲವರು ಈಗಾಗಲೇ ತೆರವುಗೊಳಿಸಿದ್ದಾರೆ. ಪಟ್ಟಣದ ಅಭಿವೃದ್ಧಿ ಮುಖ್ಯ. ಜನರ ಪಾಲಿಗೆ ಕಂಟಕಪ್ರಾಯವಾಗಿರುವ ಮುಖ್ಯರಸ್ತೆ ಅಗಲೀಕರಣವಾಗಲೇಬೇಕು. ಅಭಿವೃದ್ಧಿ ವಿರೋಧಿ ಮನಸ್ಥಿತಿ ಹೊಂದಿರುವ ಜನರ ಬಗ್ಗೆ ಅಧಿಕಾರಿಗಳಿಗೇಕೆ ಸಹಾನುಭೂತಿ ತೋರುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎಂದರು.
ಅನಿಲ ಮಾವರಕರ, ಶರಣಪ್ಪ ಹಿರೇಮಠ, ಪ್ರವೀಣಸ್ವಾಮಿ ನರಗುಂದಮಠ, ಸಲೀಂ ಅಹ್ಮದ ಆಡೂರ, ಎಸ್.ಸಿ. ಪಾಟೀಲ ಇನ್ನಿತರರಿದ್ದರು.ಮುಖ್ಯರಸ್ತೆ ಅಗಲೀಕರಣ ಆಗುವವರೆಗೂ ಯಾವುದೇ ಕಾರಣಕ್ಕೂ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ವರ್ತಕರು ವ್ಯಾಪಾರ ವಹಿವಾಟು ನಡೆಸಕೂಡದು ಮತ್ತು ಸಕಾರಕ್ಕೆ ಸೆಸ್ ತುಂಬದಂತೆ ನಿರ್ಧರಿ ಸಿದಲ್ಲಿ ಇದಕ್ಕೊಂದು ತಾರ್ಕಿಕ ಅಂತ್ಯ ಕಂಡುಕೊಳ್ಳಲು ಸಾಧ್ಯ ಕರವೇ ತಾಲೂಕಾಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ ಹೇಳಿದರು.