45 ದಿನವಾದರೂ ತೆರೆಯದ ಇ-ಸ್ವತ್ತು 2.0 ತಂತ್ರಾಂಶ

KannadaprabhaNewsNetwork |  
Published : Jan 02, 2026, 03:30 AM IST
456564 | Kannada Prabha

ಸಾರಾಂಶ

ಮೊದಲಿಗೆ ಇ- ಸ್ವತ್ತು ತಂತ್ರಾಂಶ ಸರಳವಾಗಿತ್ತು. ಇದನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡುವ ಉದ್ದೇಶದಿಂದ ಇ- ಸ್ವತ್ತು 2.0ಕ್ಕೆ ಅಪ್‌ಗ್ರೇಡ್‌ ಮಾಡಲಾಗಿದೆ. ಅಪ್‌ಗ್ರೇಡ್‌ ಮಾಡಿದ ತಂತ್ರಾಂಶವನ್ನು ಡಿ.1ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರೂ ಈ ವರೆಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅದು ಪುಟ ತೆರೆದುಕೊಳ್ಳುತ್ತಿಲ್ಲ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಕಚೇರಿಗಳು ಜನಸ್ನೇಹಿಗಳು ಆಗಬೇಕು. ಜನರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯಗಳು ಸಿಗುವಂತಾಗಬೇಕು. ಜತೆ ಅವೆಲ್ಲವೂ ಡಿಜಿಟಲ್‌ ಆಗಬೇಕು ಎಂಬ ಉದ್ದೇಶದಿಂದ ಸರ್ಕಾರ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಅಭಿವೃದ್ಧಿಪಡಿಸಿರುವ ಇ- ಸ್ವತ್ತು 2.0 ತಂತ್ರಾಂಶ ಬರೋಬ್ಬರಿ ಒಂದೂವರೆ ತಿಂಗಳಾದರೂ ಪುಟ (ವೆಬ್‌ಸೈಟ್‌ ಒಪನ್‌ ಆಗುತ್ತಿಲ್ಲ) ತೆರೆದುಕೊಂಡಿಲ್ಲ.

ಪ್ರತಿ ಪಂಚಾಯಿತಿಗಳಲ್ಲೂ ವೆಬ್‌ಸೈಟ್‌ ಪ್ರಾಬ್ಲಂ ಸಾರ್‌.. ಇನ್ನೂ ಸರಿಯಾಗಿಲ್ಲ. ಸರಿಯಾದ ಬಳಿಕವೇ ಬನ್ನಿ ಎಂಬ ಸಿಬ್ಬಂದಿಗಳ ಮಾತು ಕೇಳಿ ಜನತೆ ಆಕ್ರೋಶಕ್ಕೆ ಒಳಗಾಗಿದ್ದಾರೆ.

ಆಗಿರುವುದೇನು?

ಮೊದಲಿಗೆ ಇ- ಸ್ವತ್ತು ತಂತ್ರಾಂಶ ಸರಳವಾಗಿತ್ತು. ಇದನ್ನು ಇನ್ನಷ್ಟು ಜನಸ್ನೇಹಿಯನ್ನಾಗಿ ಮಾಡುವ ಉದ್ದೇಶದಿಂದ ಇ- ಸ್ವತ್ತು 2.0ಕ್ಕೆ ಅಪ್‌ಗ್ರೇಡ್‌ ಮಾಡಲಾಗಿದೆ. ಅಪ್‌ಗ್ರೇಡ್‌ ಮಾಡಿದ ತಂತ್ರಾಂಶವನ್ನು ಡಿ.1ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದರೂ ಈ ವರೆಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅದು ಪುಟ ತೆರೆದುಕೊಳ್ಳುತ್ತಿಲ್ಲ. ಹೀಗಾಗಿ ಹೊಸ ನಿವೇಶನ, ಮನೆಗಳ ಇ-ಸ್ವತ್ತು ಮಾಡಲು ಆಗುತ್ತಿಲ್ಲ.

ಏನೇನು ಬದಲಾವಣೆ:

ಮೊದಲಿದ್ದ ಇ- ಸ್ವತ್ತಿನಲ್ಲಿ 11 ಕಾಲಂ ಮಾತ್ರವಿದ್ದು ಪಂಚಾಯಿತಿ ಮಟ್ಟದಲ್ಲಿ ಎನ್‌ಎ, ಕೆಜೆಪಿ, ಟೌನ್‌ ಪ್ಲ್ಯಾನಿಂಗ್‌ ಆಗಿ ಕ್ರಮಬದ್ಧ ಆಸ್ತಿಗಳನ್ನು ಇ-ಖಾತಾ ಮಾಡಲು ಅವಕಾಶವಿತ್ತು. ಹೊಲದಲ್ಲಿ ಮನೆ ಅಥವಾ ತೋಟದ ಮನೆ ಕಟ್ಟಿಕೊಂಡವರು, 2013ರಲ್ಲಿ ಎನ್‌ಎ ಆಗಿ, ಕೆಜೆಪಿ ಹಾಗೂ ಟೌನ್‌ ಪ್ಲ್ಯಾನಿಂಗ್‌ ಇಲ್ಲದ ಲೇಔಟ್‌ಗಳಲ್ಲಿನ ನಿವೇಶನ ಸೇರಿಸಲು ಅವಕಾಶವಿರಲಿಲ್ಲ. ಇದೀಗ 2.0ರಲ್ಲಿ 11ನೇ ಕಾಲಂ ಅನ್ನೇ ಎರಡು ಭಾಗ ಮಾಡಲಾಗಿದೆ. 11-ಎ ಎಂದರೆ ಕ್ರಮ ಬದ್ಧ ಆಸ್ತಿ ಅಥವಾ ಕಟ್ಟಡ, 11-ಬಿ ಎಂದರೆ ಕಟ್ಟಡ ಪರವಾನಗಿ ಪಡೆಯದೇ ನಿರ್ಮಿಸಿಕೊಂಡಿರುವ ಮನೆ ಹಾಗೂ 2013ರಲ್ಲಿ ಎನ್‌ಎ ಅಷ್ಟೇ ಮಾಡಿಕೊಂಡು ಕೆಜೆಪಿ, ಟೌನ್‌ಪ್ಲ್ಯಾನಿಂಗ್‌ ಇಲ್ಲದ ಕ್ರಮಬದ್ಧವಲ್ಲದ ಆಸ್ತಿಗಳ ಇ- ಸ್ವತ್ತು ಮಾಡುವ ಅವಕಾಶ ಕಲ್ಪಿಸಲಾಗಿದೆ.

ಇ-ಸ್ವತ್ತು 1.0ರಲ್ಲಿ ತಾಪಂ ಇಒ ಮತ್ತು ಗ್ರಾಪಂ ಪಿಡಿಒ, ಕಾರ್ಯದರ್ಶಿ ಸಹಿ ಅಥವಾ ಎಫ್‌ಡಿಎ/ಎಸ್‌ಡಿಎ ಸಹಿ ಇತ್ತು. ಇದೀಗ ಇ-ಸ್ವತ್ತು 2.0 ತಂತ್ರಾಂಶಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸಹಿಯನ್ನೂ ಸೇರಿಸಲಾಗಿದೆ. ಆದರೆ, ಆಸ್ತಿಗಳಿಗೆ ತೆರಿಗೆ ವಿಧಿಸುವುದು, ಆನ್‌ಲೈನ್‌ನಲ್ಲಿ ರಸೀದಿ ಸೃಜನೆಯಲ್ಲೂ ತಾಂತ್ರಿಕ ಸಮಸ್ಯೆ ಆಗಿದೆ. ಅರ್ಜಿಗಳ ವಿಲೇವಾರಿ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಲ್ಲ. ಜತೆಗೆ ಇಷ್ಟು ದಿನವಾದರೂ ವೆಬ್‌ಸೈಟ್‌ ಒಪನ್‌ ಆಗದೇ ಇರುವುದು ತೀವ್ರ ಸಮಸ್ಯೆಯಾಗಿದ್ದು, ಇದಕ್ಕಾಗಿ ಕಚೇರಿಗೆ ಅಲೆಯುವುದು ಜನರಿಗೆ ತಪ್ಪಿಲ್ಲ. ನಿತ್ಯ ಕಚೇರಿಗೆ ಬರುವ ಜನರಿಗೆ ಏನೆಂದು ಹೇಳಬೇಕೆಂದು ಸಿಬ್ಬಂದಿಗೆ ತಿಳಿಯದಾಗಿದೆ.

ಹೊಸ ಸಾಫ್ಟ್‌ವೇರ್‌ ಆಗಿದ್ದು ಕೊಂಚ ಸಮಸ್ಯೆಯಾಗಿದೆ. ಶೀಘ್ರದಲ್ಲೇ ಬಗೆಹರಿಸುವ ಸಾಧ್ಯತೆ ಇದೆ ಎಂಬುದು ಜಿಪಂ ಅಧಿಕಾರಿ ವರ್ಗದ ಸಬೂಬು. ಎಷ್ಟು ದಿನಾ ಬೇಕು ಸಾರ್‌ ಎಂಬ ಪ್ರಶ್ನೆ ಜನರದ್ದು.

ಸಚಿವರೇ ಗಮನ ಹರಿಸಿ:

ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಐಟಿ-ಬಿಟಿ ಖಾತೆ ಹೊಂದಿದ್ದಾರೆ. ಸಚಿವರೇ ಸ್ವಲ್ಪ ಸಾಫ್ಟ್‌ವೇರ್‌ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಿ ಪುಣ್ಯಕಟ್ಕೊಳ್ಳಿ ಎಂಬ ಕೂಗು ಗ್ರಾಮೀಣ ಜನರದ್ದು. ಇನ್ನಾದರೂ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತದೆಯೇ ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಇ-ಸ್ವತ್ತು 2.0 ಅಪ್‌ಗ್ರೇಡ್‌ ಮಾಡಲಾಗಿರುವ ತಂತ್ರಾಂಶ. ಯಾವುದೇ ಹೊಸ ಸಾಫ್ಟ್‌ವೇರ್‌ ಆದರೂ ಕೆಲ ದಿನ ಸಮಸ್ಯೆಯಾಗುವುದು ಸಹಜ. ರಾಜ್ಯಮಟ್ಟದಲ್ಲೇ ಸಮಸ್ಯೆಯಾಗಿದ್ದು ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ.

ಭುವನೇಶ ಪಾಟೀಲ, ಸಿಇಒ ಜಿಪಂ ಧಾರವಾಡ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಡಗಿ ಮುಖ್ಯ ರಸ್ತೆ ಅಗಲೀಕರಣಕ್ಕೆ 15 ದಿನ ಗಡುವು
ಜನವರಿ 5ರಿಂದ ದೇಶಾದ್ಯಂತ ನರೇಗಾ ಬಚಾವ್ ಹೋರಾಟ-ಸಲೀಂ ಅಹ್ಮದ್‌