ಕೊಡಗು ಜಿಲ್ಲೆಯಲ್ಲಿ 4 ತಿಂಗಳಲ್ಲಿ 15 ಶಿಶುಮರಣ: ಡಾ.ಮಧುಸೂದನ್‌

KannadaprabhaNewsNetwork |  
Published : Nov 29, 2024, 01:00 AM IST
ಚಿತ್ರ : 28ಎಂಡಿಕೆ5 : ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕಳೆದ ಜುಲೈಯಿಂದ ಅಕ್ಟೋಬರ್ ಅಂತ್ಯದವರೆಗೆ 5 ವರ್ಷದೊಳಗಿನ 15 ಶಿಶುಗಳು ವಿವಿಧ ಕಾರಣಗಳಿಂದ ಸಾವು ಸಂಭವಿಸಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಶಿಶು ಮತ್ತು ತಾಯಿ ಮರಣ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಅವರು ಈ ಮಾಹಿತಿ ಒದಗಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಲ್ಲಿ ಕಳೆದ ಜುಲೈಯಿಂದ ಅಕ್ಟೋಬರ್ ಅಂತ್ಯದವರೆಗೆ 5 ವರ್ಷದೊಳಗಿನ 15 ಶಿಶುಗಳು ವಿವಿಧ ಕಾರಣಗಳಿಂದ ಸಾವು ಸಂಭವಿಸಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ್ ಮಾಹಿತಿ ನೀಡಿದರು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಶಿಶು ಮತ್ತು ತಾಯಿ ಮರಣ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಈ 15 ಶಿಶುಗಳಲ್ಲಿ 7 ಪ್ರಕರಣಗಳು ಅವಧಿ ಪೂರ್ವ ಜನನ, ಅನುವಂಶೀಯ ಕಾರಣಗಳು ಹಾಗೂ ಜನನ ಸಂದರ್ಭದಲ್ಲಿ ರಕ್ತಸ್ರಾವ ಸಂಭವಿಸಿದ ಉಸಿರಾಟದ ತೊಂದರೆಯಿಂದ ಸಾವು. ಉಳಿದಂತೆ ನಾಟಿ ಔಷಧಿ ಕುಡಿಸಿ, ಜ್ವರ, ಶೀತ, ಕೆಮ್ಮು ಬಂದು ಮಕ್ಕಳ ಸಾವು ಸಂಭವಿಸಿವೆ. ಗರ್ಭಿಣಿಯರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳದಿರುವುದು ಹೀಗೆ ಹಲವು ಕಾರಣಗಳಿಂದ ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಶೇ.87 ಕ್ಕೂ ಹೆಚ್ಚು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.

ಶಿಶು ಮರಣ ತಡೆಯಲು ಹೆಚ್ಚಿನ ಜಾಗೃತಿ ಮೂಡಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸಭೆಯಲ್ಲಿ ಸೂಚಿಸಿದರು.

ಶಿಶು ಮತ್ತು ತಾಯಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು. ಉತ್ತಮ ಆರೋಗ್ಯವಿದ್ದಲ್ಲಿ ಕುಟುಂಬ ನಿರ್ವಹಣೆ ಚೆನ್ನಾಗಿರುತ್ತದೆ. ಇದರಿಂದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.

ಜಿಲ್ಲೆಯ ಹಾಡಿಗಳು ಸೇರಿದಂತೆ ಎಲ್ಲೆಡೆ ಆರೋಗ್ಯ ಮತ್ತು ಶುಚಿತ್ವ ಬಗ್ಗೆ ಜಾಗೃತಿ ಮೂಡಿಸಬೇಕು. 5 ವರ್ಷದೊಳಗಿನ ಮಕ್ಕಳಿಗೆ ಕಾಲಕಾಲಕ್ಕೆ ಚುಚ್ಚುಮದ್ದು ಕೊಡಿಸುವಂತಾಗಲು ಅರಿವು ಮೂಡಿಸಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್ ಮಾಹಿತಿ ನೀಡಿ, ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಆರೋಗ್ಯ ಮತ್ತು ಪರಿಸರ ಶುಚಿತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ ನಾಯಿ ಕಡಿತ ಪ್ರಕರಣಗಳು 4,356, ಹಾವು ಕಡಿತ ಪ್ರಕರಣಗಳು 297, ಅತಿಸಾರ ಬೇಧಿ 2,427 ಪ್ರಕರಣಗಳು, ಡೆಂಗ್ಯೂ 272, ಇಲಿಜ್ವರ 13, ಕಾಲರಾ ಮತ್ತು ಮಲೇರಿಯಾ ತಲಾ 3 ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಸಹ ಗುಣಮುಖರಾಗಿದ್ದಾರೆ. ನಾಯಿ ಮತ್ತು ಹಾವು ಕಡಿತಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ದಾಸ್ತಾನು ಇದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಮಾಹಿತಿ ನೀಡಿ, ಜಿಲೆಯಲ್ಲಿ ಜನವರಿಯಿಂದ ಇದುವರೆಗೆ 371 ಕ್ಷಯರೋಗ ಪ್ರಕರಣಗಳು ವರದಿಯಾಗಿದ್ದು, ಕಾಲ ಕಾಲಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ತಾಲೂಕು ವೈದ್ಯಾಕಾರಿಗಳಾದ ಡಾ.ಯತಿರಾಜು, ಡಾ.ಚೇತನ್, ಸ್ತ್ರೀ ಆರೋಗ್ಯ ತಜ್ಞ ಡಾ.ಸೋಮಶೇಖರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಪಶುಪಾಲನ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಗಾಯತ್ರಿ, ಆಹಾರ ಸುರಕ್ಷತೆ ವಿಭಾಗದ ಮಂಜುನಾಥ್, ಜಿ.ಪಂ.ಇಇ ನಾಯಕ್, ವಿವಿಧ ಇಲಾಖಾ ಅಧಿಕಾರಿಗಳು ಇದ್ದರು.

PREV

Recommended Stories

ಸ್ವಸ್ಥ ಶರದ್ ಋತು ಪ್ರಕೃತಿಯ ಲಯದಲ್ಲಿ ಸ್ವಸ್ಥತೆ ! ಶರದ್ ಋತುವಿನ ಆಹಾರ ಮತ್ತು ದಿನಚರ್ಯೆ
ನಟ ದರ್ಶನ್‌ಗೆ ಜೈಲಿನಲ್ಲಿ ಹರಿದ ಚಾದರ : ವಕೀಲರ ವಾದ