ರಾಜ್ಯದಲ್ಲಿ ಕೂಲಿ ಮಾಡುವವರಿಗೂ 500 ರು. ಕೂಲಿ ಇದ್ದು ವಾರ್ಷಿಕ 1.80 ಲಕ್ಷ ರು. ಆದಾಯ ಇರುತ್ತದೆ. ಆದರೆ, 1.20 ಲಕ್ಷ ರು.ಗಿಂತ ಹೆಚ್ಚು ವಾರ್ಷಿಕ ಆದಾಯವಿದ್ದರೆ ಬಿಪಿಎಲ್‌ ಕಾರ್ಡ್‌ ನೀಡುವಂತಿಲ್ಲ. ಹೀಗಾಗಿ ಮಾನದಂಡಗಳನ್ನು ಬದಲಿಸಲಾಗುವುದು

 ವಿಧಾನಸಭೆ : ರಾಜ್ಯದಲ್ಲಿ ಕೂಲಿ ಮಾಡುವವರಿಗೂ 500 ರು. ಕೂಲಿ ಇದ್ದು ವಾರ್ಷಿಕ 1.80 ಲಕ್ಷ ರು. ಆದಾಯ ಇರುತ್ತದೆ. ಆದರೆ, 1.20 ಲಕ್ಷ ರು.ಗಿಂತ ಹೆಚ್ಚು ವಾರ್ಷಿಕ ಆದಾಯವಿದ್ದರೆ ಬಿಪಿಎಲ್‌ ಕಾರ್ಡ್‌ ನೀಡುವಂತಿಲ್ಲ. ಹೀಗಾಗಿ ಮಾನದಂಡಗಳನ್ನು ಬದಲಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಅಲ್ಲದೆ, ಈ ರೀತಿ ಯಾರದ್ದಾದರೂ ಬಿಪಿಎಲ್‌ ಕಾರ್ಡ್ ಎಪಿಎಲ್‌ ಆಗಿ ಪರಿವರ್ತನೆಯಾಗಿದ್ದರೆ ಅಂಥವರು ತಹಸೀಲ್ದಾರ್‌ ಬಳಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಬಿಪಿಎಲ್‌ ಕಾರ್ಡ್‌ ನೀಡಲಾಗುವುದು ಎಂದೂ ಅವರು ಭರವಸೆ ನೀಡಿದ್ದಾರೆ.

1.25 ಕೋಟಿ ಬಿಪಿಎಲ್‌ ಕಾರ್ಡ್‌

ಗುರುವಾರ ಬಿಜೆಪಿ ಸದಸ್ಯ ಯು.ರಾಜೇಶ್‌ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 1.25 ಕೋಟಿ ಬಿಪಿಎಲ್‌ ಕಾರ್ಡ್ ಇದೆ. ರಾಜ್ಯದಲ್ಲಿರುವ ಒಟ್ಟು ಕುಟುಂಬಗಳಲ್ಲಿ ಶೇ.73ರಷ್ಟು ಬಿಪಿಎಲ್‌ ಕುಟುಂಬ. ರಾಜ್ಯವು ದೇಶದಲ್ಲೇ ಎರಡನೇ ಆರ್ಥಿಕ ಶಕ್ತಿ. ರಾಜ್ಯದ ಆರ್ಥಿಕ ಪರಿಸ್ಥಿತಿ, ತಲಾದಾಯಕ್ಕೆ ಹೋಲಿಸಿದರೆ ಶೇ.50 ರಷ್ಟು ಮಾತ್ರ ಬಿಪಿಎಲ್‌ ಕಾರ್ಡ್ ಇರಬೇಕು. ಆದರೆ, ನಮ್ಮಲ್ಲಿ ಶೇ.73 ರಷ್ಟು ಬಿಪಿಎಲ್‌ ಕಾರ್ಡ್ ಇದೆ ಎಂದರು.

ಹೀಗಾಗಿ ಕೇಂದ್ರ ಸರ್ಕಾರವು 7,76,206 ಬಿಪಿಎಲ್‌ ಕಾರ್ಡ್‌ಗಳನ್ನು ತೆಗೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. 7.5 ಎಕರೆಗಿಂತ ಹೆಚ್ಚು ಜಮೀನು ಉಳ್ಳವರು, 1.20 ಲಕ್ಷ ರು.ಗಳಿಗಿಂತ ಹೆಚ್ಚು ವಾರ್ಷಿಕ ಆದಾಯ, 25 ಲಕ್ಷ ರು.ಗಿಂತ ಹೆಚ್ಚು ಜಿಎಸ್ಟಿ ವಹಿವಾಟು, ಎಲ್‌ಎಂವಿ (ಕಾರು) ವಾಹನ ಉಳ್ಳವರು ಸೇರಿ ವಿವಿಧ ಕಾರಣಗಳನ್ನು ಕೇಂದ್ರ ಸರ್ಕಾರ ನೀಡಿದೆ. ಇನ್ನು ರಾಜ್ಯ ಸರ್ಕಾರ 1.20 ಲಕ್ಷ ರು.ವಾರ್ಷಿಕ ಆದಾಯ ಉಳ್ಳವರು, 7.5 ಎಕರೆ ಅಥವಾ ಅದಕ್ಕಿಂತ ಹೆಚ್ಚು ಜಮೀನು ಉಳ್ಳವರು, ತೆರಿಗೆ ಪಾವತಿ ಮಾಡುವವರು, ನಾಮನಿರ್ದೇಶಿತ ನಿರ್ದೇಶಕರು, ಸರ್ಕಾರಿ ಉದ್ಯೋಗಿಗಳು, ನಗರ ಪ್ರದೇಶದಲ್ಲಿ 1,000 ಚದರಡಿಗಿಂತ ಹೆಚ್ಚು ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವವರು, ಜೀವನೋಪಾಯಕ್ಕೆ ಓಡಿಸುವ ವಾಹನ ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಉಳ್ಳವರನ್ನು ಬಿಪಿಎಲ್‌ನಿಂದ ಹೊರಗಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಾರ್ಷಿಕ ಆದಾಯ ಮಿತಿ ಬಗ್ಗೆ ಆಕ್ಷೇಪಣೆ

ಆದರೆ, ವಾರ್ಷಿಕ ಆದಾಯ ಮಿತಿ ಬಗ್ಗೆ ಆಕ್ಷೇಪಣೆಗಳಿವೆ. ಕೂಲಿ ಮಾಡುವವರಿಗೂ 500 ರು. ಕೂಲಿ ಇದೆ. ಅವರದ್ದೂ ವಾರ್ಷಿಕ ಆದಾಯ 1.80 ಲಕ್ಷ ರು. ಆಗುತ್ತದೆ. 1.20 ಲಕ್ಷ ರು. ಮಿತಿ ಎಂದರೆ ಕಷ್ಟವಾಗುತ್ತದೆ. ಈ ನಿಯಮಗಳಡಿ ಕೂಲಿ ಮಾಡುವವರೂ ಬಿಪಿಎಲ್‌ಗೆ ಅರ್ಹರಾಗುವುದಿಲ್ಲ. ಹೀಗಾಗಿ ಮಾನದಂಡ ಬದಲಿಸಬೇಕಾಗಿದೆ. ಇದನ್ನು ಒಂದೆರಡು ದಿನದಲ್ಲಿ ಮಾಡಲಾಗಲ್ಲ. ಆದರೆ ಬದಲಾವಣೆ ಮಾಡಲು ಬದ್ಧವಾಗಿದ್ದೇವೆ ಎಂದು ಹೇಳಿದರು.

ಈ ವೇಳೆ ಜೆಡಿಎಸ್‌ನ ಸಿ.ಎನ್‌. ಬಾಲಕೃಷ್ಣ, ನಮ್ಮ ಕ್ಷೇತ್ರದಲ್ಲಿ 930 ಕಾರ್ಡ್‌ ರದ್ದುಪಡಿಸಲಾಗಿದೆ. ಯುವಕ ಒಬ್ಬ ಬೆಂಗಳೂರಿನಲ್ಲಿ ಸ್ವಿಗ್ಗಿ, ಜೊಮೊಟೊ ಮಾಡುತ್ತಿದ್ದರೆ ಕ್ಷೇತ್ರದಲ್ಲಿ ಅವರ ತಂದೆ, ತಾಯಿಯ ಬಿಪಿಎಲ್ ರದ್ದುಪಡಿಸಲಾಗಿದೆ ಎಂದರು.

ಈ ವೇಳೆ ಮುನಿಯಪ್ಪ, ಇವೆಲ್ಲವೂ ಗಮನಕ್ಕೆ ಬಂದಿದೆ. ಈ ರೀತಿ ಯಾರಾದರೂ ಬಿಪಿಎಲ್‌ ಕಾರ್ಡ್‌ ಕಳೆದು ತಹಸೀಲ್ದಾರ್‌ಗೆ ಅರ್ಜಿ ಹಾಕಿದರೆ 15 ದಿನದಲ್ಲಿ ಬಿಪಿಎಲ್‌ ಕಾರ್ಡ್ ನೀಡಲಾಗುವುದು. ಯಾರೇ ಅರ್ಜಿ ಸಲ್ಲಿಸಿದರೂ ತಕ್ಷಣ ಕಾರ್ಡ್‌ ನೀಡಲು ತಿಳಿಸಿದ್ದೇವೆ ಎಂದು ಹೇಳಿದರು.