ಸೋಮರಡ್ಡಿ ಅಳವಂಡಿ
ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಪ್ರಸಕ್ತ ವರ್ಷ ಜಾತ್ರೆ ಮತ್ತು ಜಾತ್ರೆಯ ನಂತರ 16 ದಿನಗಳಲ್ಲಿ ಬರೋಬ್ಬರಿ 15,58,609 ಭಕ್ತರು ಆಗಮಿಸಿ, ದರ್ಶನ ಪಡೆದಿದ್ದಾರೆ. ಕಳೆದ 27 ದಿನಗಳಲ್ಲಿ 25 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಅಂದರೆ, ನಿತ್ಯವೂ ಸರಾಸರಿ 1 ಲಕ್ಷ ಭಕ್ತರು ಆಗಮಿಸುತ್ತಿದ್ದಾರೆ.
ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ವಾರದ (ಮಂಗಳವಾರ, ಶುಕ್ರವಾರ) ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಇರುತ್ತಾರೆ. ಈ ಎರಡು ದಿನಗಳಲ್ಲಿ ಸಾಮಾನ್ಯವಾಗಿ 1ರಿಂದ 1.5 ಲಕ್ಷ ಭಕ್ತರು ಬಂದು ಹೋಗುತ್ತಾರೆ. ಉತ್ತರ ಕರ್ನಾಟಕದಲ್ಲಿಯೇ ಇಷ್ಟೊಂದು ಭಕ್ತರು ಆಗಮಿಸುವ ವಿಶೇಷ ದೇವಸ್ಥಾನ ಎನ್ನುವ ಖ್ಯಾತಿ ಹುಲಿಗೆಮ್ಮ ದೇವಸ್ಥಾನದ್ದಾಗಿದೆ.ಹುಲಿಗೆಮ್ಮ ದೇವಸ್ಥಾನದಲ್ಲಿ ರಥೋತ್ಸವ ನಡೆದ ಮೇ 21ರಂದು 3ರಿಂದ 4 ಲಕ್ಷ ಭಕ್ತರು ಆಗಮಿಸಿದ್ದರು ಎಂದು ಅಂದಾಜು ಮಾಡಲಾಗಿದೆ. ಆದರೆ, ರಥೋತ್ಸವದ ಮರುದಿನದಿಂದ ತಲೆ ಎಣಿಸುವ ಯಂತ್ರ ಅಳವಡಿಸಲಾಗಿದ್ದು, ಅಲ್ಲಿಂದ ಪಕ್ಕಾ ಲೆಕ್ಕ ಸಿಗುತ್ತದೆ.
ತಲೆ ಎಣಿಸುವ ವಿಶೇಷ ಯಂತ್ರವನ್ನು ತಿರುಪತಿಯಲ್ಲಿ ಅಳವಡಿಸಲಾಗಿದೆ. ಈಗ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿಯೂ ಅಳವಡಿಸಲಾಗಿದ್ದು, ಪ್ರತಿನಿತ್ಯವೂ ಭಕ್ತರ ಎಣಿಕೆಯಾಗುತ್ತದೆ ಮತ್ತು ದಾಖಲಾಗುತ್ತಿದೆ. ಈಗ ಯಂತ್ರದಲ್ಲಿ ಆಗಿರುವ ಲೆಕ್ಕಾಚಾರದ ಆಧಾರದ ಮೇಲೆ 27 ದಿನಗಳಲ್ಲಿ 25 ಲಕ್ಷ ಭಕ್ತರು ಬಂದಿದ್ದಾರೆ ಎಂದು ಹೇಳಲಾಗಿದೆ.