ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ ಕುರಿತು ಪತ್ರಿಕಾಗೋಷ್ಠಿ ಯಲ್ಲಿ ಮಾಹಿತಿ ನೀಡಿದ ಅವರು ಜಿಲ್ಲೆಯಲ್ಲಿ 838 ವಿಚ್ಛೇದನ ಪ್ರಕರಣ ಹಾಗೂ 668 ಜೀವನಾಂಶ ಕೋರಿಕೆ ಪ್ರಕರಣಗಳು ಬಾಕಿ ಇವೆ. ಲೋಕ ಅದಾಲತ್‍ನಲ್ಲಿ ವೈವಾಹಿಕ ಪ್ರಕರಣಗಳನ್ನು ಸುಖಾಂತ್ಯಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಕಳೆದ ಬಾರಿ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ 14 ಜೋಡಿಗಳನ್ನು ಪುನಃ ಒಂದು ಮಾಡಲಾಗಿದೆ ಎಂದರು.
ವಿಚ್ಛೇದನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವಿಚ್ಚೇದನ ಪ್ರಕರಣಗಳೊಂದಿಗೆ ಜೀವನಾಂಶ ಕೋರಿಕೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣಿ ಪ್ರಕರಣಗಳು ತಳುಕು ಹಾಕಿಕೊಂಡಿರುತ್ತವೆ. ವಿಚ್ಛೇದನ ಪ್ರಕರಣದಲ್ಲಿ ಸತಿ ಪತಿಯನ್ನು ಒಂದು ಮಾಡುವುದರಿಂದ ಈ ಪ್ರಕರಣಗಳು ಸಹ ವಿಲೇವಾರಿಯಾಗುತ್ತವೆ ಎಂದರು.ಕಳೆದ ಲೋಕ ಅದಾಲತ್‍ನಲ್ಲಿ ಚಾಲ್ತಿಯಲ್ಲಿ ಇದ್ದ 4575 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಈ ಮೂಲಕ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಪ್ರಕರಣಗಳ ಪೈಕಿ ಶೇ.10 ರಷ್ಟು ಹೊರೆ ಕಡಿಮೆಯಾಗಿದೆ. ಇದರೊಂದಿಗೆ 1,06,249 ವ್ಯಾಜ್ಯಪೂರ್ವ ಪ್ರಕರಣಗಳು ಸಹ ವಿಲೇವಾರಿಯಾಗಿವೆ. 2025ರ ಜೂನ್ 01 ರಂತೆ ಜಿಲ್ಲೆಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ವ್ಯಾಜ್ಯ ಪ್ರಕರಣಗಳು ಸೇರಿದಂತೆ ಒಟ್ಟು 46,515 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಮುಂಬರುವ ಜುಲೈ 12 ರಂದು ನಡೆಯಲಿರುವ ಮೆಗಾ ಲೋಕ್ ಅದಾಲತ್‍ನಲ್ಲಿ 4 ರಿಂದ 5 ಸಾವಿರ ಪ್ರಕರಣಗಳನ್ನು ವಿಲೇ ಮಾಡಲು ಗುರಿ ಹೊಂದಲಾಗಿದೆ. ಈಗಾಗಲೇ 2588 ಪ್ರಕರಣಗಳನ್ನು ವಿಲೇವಾರಿಗೆ ಗುರುತಿಸಲಾಗಿದೆ ಎಂದು ನ್ಯಾಯಾಧೀಶ ರೋಣ ವಾಸುದೇವ ಮಾಹಿತಿ ನೀಡಿದರು.
ಕಾನೂನು ಸೇವಾ ಪ್ರಾಧಿಕಾರದ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಹೆಚ್ಚಿನ ಜಾಗೃತಿ ಮೂಡಿದೆ. ಪೋಕ್ಸೋ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿಲ್ಲ. ಆದರೆ ಪ್ರಕರಣಗಳನ್ನು ಇಳಿಮುಖ ಮಾಡುವುದು ಗುರಿಯಾಗಿದೆ. ನ್ಯಾಯಾಲಯದ ಆವರಣದಲ್ಲಿ ಹೊಸದಾಗಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ಜಪ್ತು ಮಾಡಿದ ವಾಹನಗಳ ವಿವೇಗೂ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.
2025ರ ಜುಲೈ 12ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್ ಸದುಪಯೋಗ ಪಡಿಸಿಕೊಂಡು ಪಕ್ಷಗಾರರು ರಾಜೀ ಸಂಧಾನದ ಮೂಲಕ ತಮ್ಮ ಪ್ರಕರಣಗಳನ್ನು ಸುಲಭ ಹಾಗೂ ಶೀಘ್ರವಾಗಿ ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೇ ತೀರ್ಮಾನ ಮಾಡಿಕೊಳ್ಳಬಹುದು. ಕಕ್ಷಿದಾರರು ನೇರವಾಗಿ ಅಥವಾ ವಕೀಲರ ಮೂಲಕ ಲೋಕ ಅದಾಲತ್‍ನಲ್ಲಿ ಭಾಗವಹಿಸಬಹುದು. ಸಾರ್ವಜನಿಕರು ಲೋಕ ಅದಾಲತ್ ಕುರಿತು ಹೆಚ್ಚಿನ ಪ್ರಶ್ನೆ ಮತ್ತು ಮಾಹಿತಿಗಾಗಿ ಬೇಕಾದಲ್ಲಿ ಇ-ಮೇಲ್ dlsachitradurga3@gmail.com ಹಾಗೂ ಸದಸ್ಯ ಕಾರ್ಯದರ್ಶಿಯವರ ಕಚೇರಿ ಮೊಬೈಲ್ ಸಂಖ್ಯೆ 9141193935 ಹಾಗೂ ದೂರವಾಣಿ ಸಂಖ್ಯೆ 08194- 222322 ಕ್ಕೆ ಸಹ ಸಂಪರ್ಕಿಸಬಹುದು ಎಂದು ನ್ಯಾಯಾಧೀಶ ರೋಣ ವಾಸುದೇವ ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.