ವೆಂಕಟೇಶ್ವರ ದೇವಸ್ಥಾನ ಅಭಿವೃದ್ಧಿಗಾಗಿ ₹15 ಲಕ್ಷ ಅನುದಾನ-ಶಾಸಕ ಶಿವಣ್ಣನವರ

KannadaprabhaNewsNetwork | Published : Feb 12, 2025 12:33 AM

ಸಾರಾಂಶ

ಕುಲ ಕಸುಬನ್ನೇ ಬದುಕಿನ ನಿತ್ಯ ಕಾಯಕವನ್ನಾಗಿ ಮಾಡಿಕೊಂಡಿರುವ ಸವಿತಾ ಸಮಾಜ ಜನರು ಸುಶಿಕ್ಷಿತರಾಗಬೇಕು, ಸಮಾಜದ ಎಲ್ಲ ಕೆಲಸಗಳಲ್ಲಿ ಸರ್ಕಾರ ಕೈಜೋಡಿಸಲು ಬದ್ಧವಾಗಿದ್ದು ವೆಂಕಟೇಶ್ವರ ದೇವಸ್ಥಾನ ಅಭಿವೃದ್ಧಿಗಾಗಿ ರು. 15 ಲಕ್ಷ ಅನುದಾನ ನೀಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ಬ್ಯಾಡಗಿ: ಕುಲ ಕಸುಬನ್ನೇ ಬದುಕಿನ ನಿತ್ಯ ಕಾಯಕವನ್ನಾಗಿ ಮಾಡಿಕೊಂಡಿರುವ ಸವಿತಾ ಸಮಾಜ ಜನರು ಸುಶಿಕ್ಷಿತರಾಗಬೇಕು, ಸಮಾಜದ ಎಲ್ಲ ಕೆಲಸಗಳಲ್ಲಿ ಸರ್ಕಾರ ಕೈಜೋಡಿಸಲು ಬದ್ಧವಾಗಿದ್ದು ವೆಂಕಟೇಶ್ವರ ದೇವಸ್ಥಾನ ಅಭಿವೃದ್ಧಿಗಾಗಿ ರು. 15 ಲಕ್ಷ ಅನುದಾನ ನೀಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಭರವಸೆ ನೀಡಿದರು.

ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿನ ಲಕ್ಷ್ಮೀ ವೆಂಕಟೇಶ್ವರ ಸಭಾಭವನದಲ್ಲಿ ಜಿಲ್ಲಾ ಸವಿತಾ ಸಮಾಜ ಸಂಘ ಹಾವೇರಿ ತಾಲೂಕು ಸವಿತಾ ಸಮಾಜ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಸವಿತಾ ಮಹರ್ಷಿಗಳ ಜಯಂತ್ಯುತ್ಸವ ಹಾಗೂ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸವಿತಾ ಸಮಾಜದ ಜನರ ಸಂಕಷ್ಟಗಳಿಗೆ ಪರಹಾರ ನೀಡಲು ಸರ್ಕಾರ ಈಗಲೂ ಬದ್ಧವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಇವರನ್ನು ಒಂದೊಂದು ರೀತಿಯಲ್ಲಿ ಸಂಬೋಧಿಸಲಾಗುತ್ತದೆ, ಮೂಲ ವೃತ್ತಿ ಕ್ಷೌರಿಕ ವೃತ್ತಿಯಾಗಿದ್ದರೂ ಸಹ ಇವರು ನಾಟಿ ವೈದ್ಯರಾಗಿದ್ದು ವಾದ್ಯಮೇಳ ಬಾರಿಸುವುದೂ ಸಹ ಇವರ ಕುಲಕಸುಬಾಗಿದೆ ಹೀಗಾಗಿ ಸರ್ಕಾರದ ವತಿಯಿಂದ ಇವರ ನೆರವಿಗೆ ಬರುವುದಾಗಿ ತಿಳಿಸಿದರು. ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸಂಖ್ಯೆಯನ್ನು ನೋಡಿದರೇ ಬಹಳಷ್ಟು ಕಡಿಮೆಯಿದೆ, ಆದರೆ ಇವರಲ್ಲಿರುವ ಜನಪರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ, ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿ ಸುಂದರವಾದ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ ಮಾಡುವ ಮೂಲಕ ಪಟ್ಟಣದ ಜನರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸಿದ ಕೀರ್ತಿ ಸವಿತಾ ಸಮಾಜಕ್ಕೆ ಸಲ್ಲುತ್ತದೆ ಎಂದರು. ಕಾರ್ಯಕ್ರಮದಂಗವಾಗಿ ಬೆಳಿಗ್ಗೆ ವಿವಿಧ ವಾದ್ಯಮೇಳಗಳೊಂದಿಗೆ ಶ್ರೀ ಸವಿತಾ ಮಹರ್ಷಿಗಳ ಭಾವಚಿತ್ರ ಮೆರವಣಿಗೆ ಪಟ್ಟಣದ ಎ.ಪಿ.ಎಂ.ಸಿ. ಯಾರ್ಡನಲ್ಲಿರುವ ಶ್ರೀ ಸಿದ್ದೇಶ್ವರ ಕಲ್ಯಾಣಮಂಟಪದಿಂದ ಪ್ರಾರಂಭವಾಗಿ ಮುಖ್ಯರಸ್ತೆ ಮೂಲಕ ದೇವಸ್ಥಾನದ ಅವರಣ ತಲುಪಿತು. ವೇದಿಕೆಯಲ್ಲಿ ಸಮಾಜದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಿಗೆ ಸನ್ಮಾನಿಸಿ ಗೌರವಿಸಲಾಯಿತು. ದಾವಣಗೆರೆಯ ನಿವೃತ್ತ ಉಪನ್ಯಾಸಕ ಪಿ.ಬಿ. ವೆಂಕಟಾಚಲಪತಿ ಉಪನ್ಯಾಸ ನೀಡಿದರು, ಸವಿತಾ ಸಮಾಜದ ತಾಲೂಕಾಧ್ಯಕ್ಷ ಸೋಮಯ್ಯ ಕರ್ನೂಲ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆ.ಗುರುರಾಜ, ಪುರಸಭೆ ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮನವರ, ಹಡಪದ ಸಮಾಜದ ಅಧ್ಯಕ್ಷ ದುಂಡೆಪ್ಪ ಕಾಯಕದ, ರವಿ ಪೂಜಾರ, ಮಂಜುನಾಥ ಸೇರಿದಂತೆ ಇನ್ನಿತರರಿದ್ದರು. ಯಲ್ಲಪ್ಪ ಸೂಗೂರು ಸ್ವಾಗತಿಸಿದರು, ಶ್ರೀನಿವಾಸ ಕರ್ನೂಲ ಕಾರ್ಯಕ್ರಮ ನಿರ್ವಹಿಸಿದರು.

Share this article